ಶುಕ್ರವಾರ ನಮಾಝ್‍ಗೆ ಅವಕಾಶ ಕಲ್ಪಿಸಲು ಆದೇಶಿಸಿ: ಮುಸ್ಲಿಮ್ ನೌಕರರ ಕ್ಷೇಮಾಭಿವೃದ್ಧಿ ಸಂಘದಿಂದ ಸರಕಾರಕ್ಕೆ ಮನವಿ ಸಲ್ಲಿಕೆ
ಬೆಂಗಳೂರು: ಶುಕ್ರವಾರ ನಮಾಝ್ ಪ್ರಾರ್ಥನೆಗೆ ಒಂದು ಗಂಟೆ ಮೀಸಲು, ರಮಝಾನ್ ತಿಂಗಳಿನಲ್ಲಿ ಪ್ರತಿ ದಿನ ಅರ್ಧ ಗಂಟೆ ಮೊದಲು ಕರ್ತವ್ಯದಿಂದ ನಿರ್ಗಮಿಸುವ ಅವಕಾಶ ಸೇರಿದಂತೆ ಇನ್ನಿತರೆ ಬೇಡಿಕೆಗಳನ್ನು ಈಡೇರಿಸುವಂತೆ ರಾಜ್ಯ ಸರಕಾರಕ್ಕೆ ಕರ್ನಾಟಕ ರಾಜ್ಯ ಸರಕಾರಿ ಮುಸ್ಲಿಮ್ ನೌಕರರ ಕ್ಷೇಮಾಭಿವೃದ್ಧಿ ಸಂಘ ಮನವಿ ಸಲ್ಲಿಸಿತು.
ರವಿವಾರ ನಗರದ ಕೆಎಂಡಿಸಿ ಕಚೇರಿ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಸರಕಾರಿ ಮುಸ್ಲಿಮ್ ನೌಕರರ ಕ್ಷೇಮಾಭಿವೃದ್ಧಿ ಸಂಘದಿಂದ ಹಮ್ಮಿಕೊಂಡಿದ್ದ ನೂತನ ಸಭಾಧ್ಯಕ್ಷ, ಸಚಿವರು, ಶಾಸಕರಿಗೆ ಬೀಳ್ಕೊಡುಗೆ ಸಮಾರಂಭದಲ್ಲಿ ಮನವಿ ಪತ್ರವನ್ನು ಸಚಿವ ಪೌರಾಡಳಿತ ಸಚಿವ ರಹೀಮ್ ಖಾನ್ ಅವರಿಗೆ ಸಂಘದ ವತಿಯಿಂದ ಸಲ್ಲಿಕೆ ಮಾಡಲಾಯಿತು.
ಈ ವೇಳೆ ಪ್ರಸ್ತಾಪಿಸಿದ ಸಂಘದ ಅಧ್ಯಕ್ಷ ಕೆ.ಅಬ್ದುಲ್ ರಹೀಮ್, ಶುಕ್ರವಾರ ಪ್ರಾರ್ಥನೆಗೆ ಒಂದು ಗಂಟೆ ಬಿಡುವಿಗೆ ಅವಕಾಶ ಸಂಬಂಧ ಈಗಾಗಲೇ ಕೇಂದ್ರ ಸರಕಾರ ಆದೇಶ ಇದೆ. ಜತೆಗೆ, ರಮಝಾನ್ ತಿಂಗಳಿನಲ್ಲಿ ಪ್ರತಿ ದಿನ ಅರ್ಧ ಗಂಟೆ ಮೊದಲು ಕರ್ತವ್ಯದಿಂದ ನಿರ್ಗಮಿಸುವ ಅವಕಾಶದ ಆದೇಶವೂ ಇದೆ. ಆದರೆ, ಇದು ಹಳೇಯದಾಗಿದ್ದು, ಇದನ್ನು ಪುನಃ ಪರಿಶೀಲಿಸಿ ರಾಜ್ಯ ಸರಕಾರ ಮರು ಆದೇಶ ಹೊರಡಿಸಬೇಕು ಎಂದು ಒತ್ತಾಯ ಮಾಡಿದರು.
ಅದೇ ರೀತಿ, ಕ್ರಿಯಾಶೀಲವಾಗಿ ಕಾರ್ಯ ನಿರ್ವಹಿಸುವ ಸಮುದಾಯದ ಅಧಿಕಾರಿ, ನೌಕರರನ್ನು ಗುರುತಿಸಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದು ಪ್ರತಿ ವಾರ್ಷಿಕ ಸಾಲಿನಲ್ಲಿ ಪ್ರಶಸ್ತಿ ಪ್ರದಾನಿಸಿ ಉತ್ತೇಜನ ನೀಡಬೇಕು. ಡಿಸೆಂಬರ್ 18ರಂದು ಅಲ್ಪಸಂಖ್ಯಾತರ ದಿನಾಚರಣೆಯನ್ನು ಪುನಃ ಆಚರಣೆ ಮಾಡಲು ಸರಕಾರವೂ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಬೇಕು. 1ರಿಂದ 8ನೇ ತರಗತಿವರೆಗೂ ಬಡ ಪ್ರತಿಭಾವಂತ ಮಕ್ಕಳಿಗೆ ನೀಡುವ ಎನ್‍ಎಸ್‍ಪಿ ವಿದ್ಯಾರ್ಥಿ ವೇತನ ಪುನರಾಂಭಿಸಬೇಕು. ಕೆಪಿಎಸ್ಸಿ ಸದಸ್ಯರ ಸಮಿತಿಯಲ್ಲಿ ಸಮುದಾಯದ ತಜ್ಞರನ್ನು ಪರಿಗಣಿಸಬೇಕು ಹಾಗೂ ಕರ್ನಾಟಕ ಉರ್ದು ಅಕಾಡೆಮಿಗೆ ಅಧ್ಯಕ್ಷರನ್ನು ನೇಮಕ ಮಾಡಬೇಕು ಎಂದು ಆಗ್ರಹಿಸಿದರು.
ಇದಕ್ಕೆ ಸ್ಪಂದಿಸಿದ ಸಚಿವ ರಹೀಮ್ ಖಾನ್, ಸಂಘದ ಎಲ್ಲ ಬೇಡಿಕೆಗಳನ್ನು ಸರಕಾರದ ಗಮನಕ್ಕೆ ತರಲಾಗುವುದು. ಸಮುದಾಯದ ಎಲ್ಲ ನ್ಯಾಯಾಯುತ ಬೇಡಿಕೆಗಳನ್ನು ಈಡೇರಿಸಲು ಸರಕಾರ ಬದ್ಧವಾಗಿದ್ದು, ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವ ಕೆಲಸ ಎಲ್ಲರೂ ಮಾಡಬೇಕಾಗಿದೆ ಎಂದು ಅವರು ಕರೆ ನೀಡಿದರು.
ಇದಕ್ಕೂ ಮುನ್ನ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್ ಮಾತನಾಡಿ, ಈ ಬಾರಿಗೆ ಬಜೆಟ್‍ನಲ್ಲಿ ಸಮುದಾಯದ ಏಳಿಗೆಗೆ ಸರಕಾರ ಮುಂದಾಗಿದೆ. ಯಾವುದೇ ಯೋಜನೆಯನ್ನು ನಾವು ಅರ್ಹ ವ್ಯಕ್ತಿಗೆ ಮುಟ್ಟಿಸಬೇಕು. ಅದೇ ರೀತಿ, ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ಒದಗಿಸಲು ಮುಂದಾದರೆ ಮಾತ್ರ ಸಮುದಾಯದ ಆರ್ಥಿಕ, ಸಾಮಾಜಿಕವಾಗಿ ಪ್ರಗತಿ ಸಾಧಿಸಲು ಸಾಧ್ಯ ಎಂದು ನುಡಿದರು.
ಈ ಸಂದರ್ಭದಲ್ಲಿ ಶಾಸಕ ರಿಝ್ವಾನ್ ಆರ್ಶದ್, ಹಿರಿಯ ಐಎಎಸ್ ಅಧಿಕಾರಿ ಮುಹಮ್ಮದ್ ಮೊಹ್ದಿನ್,ಸಂಘದ ಸಂಸ್ಥಾಪಕ ಅಧ್ಯಕ್ಷ ಮುಹಮ್ಮದ್ ಸಲೀಂ ಹಂಚಿನಮನವಿ, ಪ್ರಧಾನ ಕಾರ್ಯದರ್ಶಿ ಡಾ.ಸೆಯ್ಯದ್ ಇಸ್ಮಾಯಿಲ್ ಪಾಶಾ ಸೇರಿದಂತೆ ಪ್ರಮುಖರಿದ್ದರು.
ಸರಕಾರಿ ಉದ್ಯೋಗಿ ಎಂದರೆ ಆದರೆ ಕೆಲಸವನ್ನು ನೋಡಬೇಕಾಗಿದೆ ಹೊರತು. ಜಾತಿ, ಧರ್ಮವನ್ನು ಅಲ್ಲ. ಯಾರೋ ಸಹ ಧರ್ಮದ ವಿಚಾರವಾಗಿ ಸರಕಾರಿ ನೌಕರರನ್ನು ಎಳೆದುತರಬೇಡಿ.ಇನ್ನೂ, ಮುಸ್ಲಿಮ್ ಸಮುದಾಯದ ಮಕ್ಕಳು ಶಿಕ್ಷಣ ಪಡೆಯುವ ಪ್ರಮಾಣ ತಗ್ಗುತ್ತಿರುವ ಆತಂಕಕಾರಿ ಮಾಹಿತಿ ಗೊತ್ತಾಗಿದ್ದು, ಇದರ ಕುರಿತು ಗಂಭೀರ ಚರ್ಚೆಗಳು ನಡೆಯಬೇಕು. ಇಲ್ಲದಿದ್ದರೆ, ಸಾಮಾಜಿಕ, ಶೈಕ್ಷಣಿಕವಾಗಿ ಮತ್ತಷ್ಟು ಹಿಂದಕ್ಕೆ ಹೋಗಲಿದ್ದಾರೆ.
- ಕೆ.ಅಬ್ದುಲ್ ರಹೀಮ್, ಅಧ್ಯಕ್ಷ, ಕರ್ನಾಟಕ ರಾಜ್ಯ ಸರಕಾರಿ ಮುಸ್ಲಿಮ್ ನೌಕರರ ಕ್ಷೇಮಾಭಿವೃದ್ಧಿ ಸಂಘ