ವಕ್ಫ್ ತಿದ್ದುಪಡಿ ವಿರುದ್ಧ ಖಂಡನಾ ನಿರ್ಣಯ ಅಂಗೀಕರಿಸಿ : ಮುಸ್ಲಿಮ್ ವೈಯಕ್ತಿಕ ಕಾನೂನು ಮಂಡಳಿ ನಿಯೋಗದಿಂದ ಸಿಎಂಗೆ ಮನವಿ
ಬೆಂಗಳೂರು : ಕೇಂದ್ರ ಸರಕಾರವು ದುರುದ್ದೇಶದಿಂದ ಜಾರಿಗೆ ತರಲು ಮುಂದಾಗಿರುವ ವಕ್ಫ್(ತಿದ್ದುಪಡಿ) ವಿಧೇಯಕದ ವಿರುದ್ಧ ತೆಲಂಗಾಣ ರಾಜ್ಯದ ಸರಕಾರದ ಮಾದರಿಯಲ್ಲಿ ಕರ್ನಾಟಕ ಸರಕಾರವು ವಿಧಾನಮಂಡಲದ ಉಭಯ ಸದನಗಳಲ್ಲಿ ಖಂಡನಾ ನಿರ್ಣಯ ಅಂಗೀಕರಿಸುವಂತೆ ಅಖಿಲ ಭಾರತ ಮುಸ್ಲಿಮ್ ವೈಯಕ್ತಿಕ ಕಾನೂನು ಮಂಡಳಿಯ ಪ್ರಧಾನ ಕಾರ್ಯದರ್ಶಿ ಮೌಲಾನಾ ಮುಹಮ್ಮದ್ ಫಝ್ಲರ್ರಹೀಮ್ ಮುಜದ್ದಿದಿ ನೇತೃತ್ವದ ನಿಯೋಗ ಮನವಿ ಸಲ್ಲಿಸಿತು.
ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಝಮೀರ್ ಅಹ್ಮದ್ ಖಾನ್ ಹಾಗೂ ಮುಖ್ಯಮಂತ್ರಿಯ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್ ಅವರೊಂದಿಗೆ ಶನಿವಾರ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು, ಅವರ ಸರಕಾರಿ ನಿವಾಸ ಕಾವೇರಿಯಲ್ಲಿ ಭೇಟಿ ಮಾಡಿ ನಿಯೋಗವು ಮನವಿ ಪತ್ರ ಸಲ್ಲಿಸಿತು.
ಸಂಸತ್ತಿನಲ್ಲಿ ವಕ್ಫ್(ತಿದ್ದುಪಡಿ)ವಿಧೇಯಕವನ್ನು ಕಾಂಗ್ರೆಸ್ ಸೇರಿದಂತೆ ಅವರ ಮಿತ್ರ ಪಕ್ಷದ ಸಂಸದರು ಪ್ರಬಲವಾಗಿ ವಿರೋಧಿಸಬೇಕು. ಅಲ್ಲದೇ, ಯಾವುದೇ ಕಾರಣಕ್ಕೂ ವಿಧೇಯಕ ಅಂಗೀಕಾರವಾಗದಂತೆ ನೋಡಿಕೊಳ್ಳಬೇಕು ಎಂದು ಮುಹಮ್ಮದ್ ಫಝ್ಲರ್ರಹೀಮ್ ಮುಜದ್ದಿದಿ ಕೋರಿದರು.
ಕೇಂದ್ರ ಸರಕಾರದ ಈ ತಿದ್ದುಪಡಿ ವಿಧೇಯಕವು 1995ರ ವಕ್ಫ್ ಕಾಯ್ದೆಯನ್ನು ದುರ್ಬಲಗೊಳಿಸುವ ಗುರಿಯನ್ನು ಹೊಂದಿದೆ. ಅಲ್ಲದೇ, 2013ರಲ್ಲಿ ಡಾ.ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರಕಾರವು ವಕ್ಫ್ ಕಾಯ್ದೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿಸಿತ್ತು ಎಂದು ಅವರು ಸ್ಮರಿಸಿದರು.
ಈ ತಿದ್ದುಪಡಿ ಮಸೂದೆಯು ವಕ್ಫ್ ಆಸ್ತಿಗಳ ಮೇಲೆ ಸರಕಾರ ಮತ್ತು ಸರಕಾರೇತರ ಅತಿಕ್ರಮಣಕ್ಕೆ ದಾರಿ ಮಾಡಿಕೊಡುತ್ತದೆ. ಇದು ರಾಜ್ಯ ವಕ್ಫ್ ಮಂಡಳಿಗಳು ಮತ್ತು ಕೇಂದ್ರ ವಕ್ಫ್ ಕೌನ್ಸಿಲ್ನ ಅಧಿಕಾರವನ್ನು ದುರ್ಬಲಗೊಳಿಸುತ್ತದೆ ಎಂದು ಮುಹಮ್ಮದ್ ಫಝ್ಲರ್ರಹೀಮ್ ಮುಜದ್ದಿದಿ ಆತಂಕ ವ್ಯಕ್ತಪಡಿಸಿದರು.
ನಿಯೋಗದ ಮನವಿಯನ್ನು ಆಲಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ವಕ್ಫ್(ತಿದ್ದುಪಡಿ) ವಿಧೇಯಕದ ವಿರುದ್ಧ ಜಂಟಿ ಸಂಸದೀಯ ಸಮಿತಿಗೆ ಪತ್ರ ಬರೆಯಲಾಗುವುದು. ಅಲ್ಲದೇ, ಮಸೂದೆ ಅಂಗೀಕಾರವಾಗದಂತೆ ಕಾಂಗ್ರೆಸ್ ಪಕ್ಷ ಹಾಗೂ ನಮ್ಮ ಸರಕಾರ ಅಗತ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡಲಿದೆ ಎಂದು ಭರವಸೆ ನೀಡಿದರು.
ಮುಸ್ಲಿಮ್ ವೈಯಕ್ತಿಕ ಕಾನೂನು ಮಂಡಳಿ ನೇತೃತ್ವದ ನಿಯೋಗದಲ್ಲಿ ಕೇಂದ್ರದ ಮಾಜಿ ಸಚಿವ ಡಾ.ಕೆ.ರಹ್ಮಾನ್ ಖಾನ್, ಮೌಲಾನಾ ಸೈಯದ್ ತನ್ವೀರ್ ಅಹ್ಮದ್ ಹಾಶ್ಮಿ, ಹಾಜಿ ಆಸಿಮ್ ಅಫ್ರೋಝ್ ಸೇಠ್, ಮೌಲಾನಾ ಸೈಯದ್ ಶಬ್ಬೀರ್ ಅಹ್ಮದ್ ನದ್ವಿ, ಮುಫ್ತಿ ಶಂಸುದ್ದೀನ್ ಬಜ್ಲಿ ಖಾಸ್ಮಿ, ಹಾಫಿಝ್ ಫಾರೂಕ್ ಅಹ್ಮದ್, ಹಾಫಿಝ್ ಸೈಯದ್ ಆಸಿಮ್ ಅಬ್ದುಲ್ಲಾ, ಡಾ.ಸಾದ್ ಬೆಳಗಾಮಿ, ಮೌಲಾನಾ ವಹೀದುದ್ದೀನ್ ಖಾನ್, ಮೌಲಾನಾ ಮಕ್ಸೂದ್ ಇಮ್ರಾನ್, ಮುಫ್ತಿ ಮುಹಮ್ಮದ್ ಅಸ್ಲಮ್ ರಶಾದಿ, ಮುಫ್ತಿ ಮುಹಮ್ಮದ್ ಅಲಿ ಖಾಝಿ, ಮುಫ್ತಿ ಉಮರ್ ಫಾರೂಕ್, ಉಸ್ಮಾನ್ ಶರೀಫ್, ಮೌಲ್ವಿ ಉರ್ವಾ ಅಬ್ದುಲ್ಲಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.