ಮೈಸೂರು ದಸರಾ | ಅರಮನೆ ಆವರಣಕ್ಕೆ ಆಗಮಿಸಿದ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಗಜಪಡೆ
ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಗಜಪಡೆಗಳನ್ನು ಅರಮನೆಗೆ ಬರಮಾಡಿಕೊಳ್ಳುವುದರ ಮೂಲಕ ಸಮಾಜಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ವಿದ್ಯುಕ್ತವಾಗಿ ಸ್ವಾಗತ ಕೋರಿದರು.
ಸೆ.1 ರಂದು ಹುಣಸೂರಿನ ವೀರನಹೊಸಹಳ್ಳಿಯಲ್ಲಿ ದಸರಾ ಗಜಪಯಣಕ್ಕೆ ಚಾಲನೆ ನೀಡಲಾಗಿತ್ತು. ಸೆ.1 ರಂದೇ ಮೈಸೂರಿಗೆ ತಲುಪಿದ ಮೊದಲ ಹಂತದ 9 ಗಜಪಡೆಗಳು ಅಶೋಕಪುರಂ ನಲ್ಲಿರುವ ಅರಣ್ಯಭವನದಲ್ಲಿ ವಾಸ್ತವ್ಯ ಹೂಡಿದ್ದವು.
ಸೆ.5 ರ ಮಂಗಳವಾರ ಅರಣ್ಯಭವನದಿಂದ ಬಿಗಿ ಪೊಲೀಸ್ ಬಂದೋಬಸ್ತ್ ನಲ್ಲಿ ಮೆರವಣಿಗೆ ಮೂಲಕ ಅರಮನೆ ಆವರಣಕ್ಕೆ ಕರೆತರಲಾಯಿತು. ಈ ವೇಳೆ ಸಮಾಜ ಕಲ್ಯಾಣ ಸಚಿವ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಜಯಮಾರ್ತಾಂಡ ದ್ವಾರದಲ್ಲಿ ವಿಶೇಷವಾಗಿ ಪೂಜೆ ಸಲ್ಲಿಸಿ ಆನೆಗಳಿಗೆ ಪುಷ್ಪಾರ್ಚನೆ ಮಾಡಿ ಅರಮನೆ ಆವರಣದೊಳಗೆ ಬರಮಾಡಿಕೊಂಡರು.
ಮೊದಲ ತಂಡದ 9 ಆನೆಗಳಲ್ಲಿ ಅರ್ಜುನ ಒಂದು ಆನೆಯನ್ನು ಹೊರತು ಪಡಿಸಿ ಜಂಬೂ ಸವಾರಿ ಹೊರುವ ಅಭಿಮನ್ಯು, ಮಹೇಂದ್ರ, ಕಂಚನ್,ವರಲಕ್ಷ್ಮಿ, ವಿಜಯ, ಗೋಪಿ ಧನಂಜಯ್ಯ, ಆನೆಗಳಿಗೆ ಸ್ವಾಗತ ಮಾಡಲಾಯಿತು.
ಬಳಿಕ ಅರಮನೆ ಒಳಪ್ರವೇಶಿಸಿದ ಆನೆಗಳ ಮಾವುತರು, ಕಾವಾಡಿಗಳಿಗೆ ಮೂಲಭೂತ ಸೌಕರ್ಯದ ಕಿಟ್ ಗಳನ್ನು ಜಿಲ್ಲಾ ಉಸ್ತುವಾರಿ ಸಚಿವರು ವಿತರಿಸಿದರು. ಚಾಮುಂಡಿ ಬೆಟ್ಟದ ಪ್ರಧಾನ ಅರ್ಚಕ ಶಶಿಶೇಖರ್ ದೀಕ್ಷಿತ್ ನೇತೃತ್ವದಲ್ಲಿ ಪೂಜೆ ಸಲ್ಲಿಸಲಾಯಿತು.
ಈ ವೇಳೆ ಶಾಸಕರುಗಳಾದ ಶ್ರೀವತ್ಸ, ಕೆ.ಹರೀಶ್ ಗೌಡ, ಸಂಸದ ಪ್ರತಾಪ್ ಸಿಂಹ, ಮೇಯರ್ ಶಿವಕುಮಾರ್, ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ, ನಗರಪಾಲಿಕೆ ಆಯುಕ್ತ ಹರ್ಷದ್ ರೆಹಮಾನ್ ಶರೀಫ್, ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್, ಡಿಸಿಎಫ್ ಸೌರಭ್ ಕುಮಾರ್ ಉಪಸ್ಥಿತರಿದ್ದರು.