ಮೈಸೂರು | ಜಂಬೂ ಸವಾರಿಯಲ್ಲಿ ಪಾಲ್ಗೊಂಡಿದ್ದ ಆನೆಗಳಿಗೆ ಬೀಳ್ಕೊಡುಗೆ
ನಾಡಿನಿಂದ ಕಾಡಿನತ್ತ ಸಾಗಿದ ದಸರಾ ಗಜಪಡೆಗಳು
ಮೈಸೂರು,ಅ.26: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ 2023 ರ ಅಭಿಮನ್ಯು ನೇತೃತ್ವದ ದಸರಾ ಗಜಪಡೆಗೆ ಗುರುವಾರ ಬೀಳ್ಕೊಡುಗೆ ನೀಡಲಾಯಿತು.
ಜಿಲ್ಲಾಡಳಿತ ಹಾಗೂ ಅರಣ್ಯ ಇಲಾಖೆ ವತಿಯಿಂದ ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವದ ವಿಜಯದಶಮಿ ಜಂಬೂಸವಾರಿ ಮೆರವಣಿಗೆಯನ್ನು ಯಶಸ್ವಿಯಾಗಿ ಮುಗಿಸಿದ ಅಭಿಮನ್ಯು ನೇತೃತ್ವದ ಗಜಪಡೆ ಇಂದು ನಾಡಿನಿಂದ ಕಾಡಿನತ್ತ ಪಯಣ ಬೆಳಸಿದವು.
ದಸರಾ ಗಜಪಡೆ ಹೊರಡುವ ಮುನ್ನಾ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ದಸರಾ ಆನೆಗಳಾದ ಅಭಿಮನ್ಯು,ಸುಗ್ರೀವ, ಗೋಪಿ, ಧನಂಜಯ, ಕಂಜನ್, ಹಿರಣ್ಯ, ರೋಹಿತ್, ಪ್ರಶಾಂತ್, ವಿಜಯ, ಭೀಮ, ಲಕ್ಷ್ಮೀ, ಮಹೇಂದ್ರ, ವರಲಕ್ಷ್ಮಿ, ಅರ್ಜುನ, ಆನೆಗಳಿಗೆ ಪೂಜೆ ಸಲ್ಲಿಸಿದರು. ನಂತರ ಮಾವುತರಿಗೆ ಸನ್ಮಾನ ಮಾಡಲಾಯಿತು. ನಂತರ ಎಲ್ಲ ಆನೆಗಳು ಒಂದೊಂದಾಗಿ ಸಂತಸದಿಂದ ಲಾರಿಯನ್ನೇರಿ ಅರಮನೆಯಿಂದ ತಮ್ಮ ಸ್ವಸ್ಥಾನಕ್ಕೆ ಹೊರಟವು.
ಮಾವುತರು, ಕಾವಾಡಿಗಳ ಕೋರಿಕೆ ಮೇರೆಗೆ ಗೌರವಧನ ಹೆಚ್ಚಳ: ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ
ʼಈ ಬಾರಿಯ ದಸರಾ ಮಹೋತ್ಸವ ಅತ್ಯಂತ ಯಶಸ್ವಿಯಾಗಿ ನೆರವೇರಿದೆ. ಇಂದು ಆನೆಗಳನ್ನು ಬೀಳ್ಕೊಡಲಾಗಿದೆ. ಮಾವುತರು ಕಾವಾಡಿಗಳ ಕೋರಿಕೆ ಮೇರೆಗೆ ಈ ಬಾರಿ ಗೌರವಧನ ಹೆಚ್ಚು ನೀಡಲಾಗಿದೆ.ಕಳೆದ ವರ್ಷ ತಲಾ ಹತ್ತು ಸಾವಿರ ಗೌರವ ಧನ ನೀಡಲಾಗಿತ್ತು. ಈ ಬಾರಿ 55 ಮಂದಿಗೆ ತಲಾ ಹದಿನೈದು ಸಾವಿರ ಗೌರವ ಧನ ನೀಡಲಾಗಿದೆʼ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಮಾಲತಿ ಪ್ರಿಯ, ಅರಣ್ಯ ಸಂರಕ್ಷಣಾ ಅಧಿಕಾರಿ ಸೌರಬ್ ಕುಮಾರ್, ಆನೆ ಆರೋಗ್ಯಾಧಿಕಾರಿ(ಪಶು ವೈದ್ಯರು) ಡಾ.ಮುಜೀಬ್, ಆರ್‍ಎಫ್‍ಒ ಸಂತೋಷ್ ಹೂಗಾರ್ ಅಧಿಕಾರಿ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಜಂಬೂ ಸವಾರಿ ಮೆರವಣಿಗೆಯಲ್ಲಿ ಗಜಪಡೆಗಳು ಎಲ್ಲರ ಪ್ರಶಂಸೆಗೆ ಪಾತ್ರವಾಗಿವೆ: ಡಿಸಿಎಫ್ ಸೌರಭ್ ಕುಮಾರ್
ʼಜಂಬೂಸವಾರಿ ಮೆರವಣಿಗೆಯಲ್ಲಿ ಗಜಪಡೆ ಎಲ್ಲರ ಪ್ರಶಂಸೆಗೆ ಪಾತ್ರವಾಗಿವೆ. ಮೆರವಣಿಗೆ ವೇಳೆ ಆನೆಗಳನ್ನು ಕಂಡೊಡನೆ ಜನರು ಮಾರ್ಗದುದ್ದಕ್ಕೂ ಹರ್ಷೋದ್ಘಾರ ಮಾಡಿದರು. ಆ ಮೂಲಕ ಆನೆಗಳಿಗೆ ಲಕ್ಷಾಂತರ ಜನರು ಬೆಂಬಲ ಸೂಚಿಸಿದರುʼ ಎಂದು ಡಿಸಿಎಫ್ ಸೌರಭ್ ಕುಮಾರ್ ತಿಳಿಸಿದರು.
ʼಮಾವುತರು, ಕಾವಾಡಿಗಳು ಹಾಗು ಇತರ ಸಿಬ್ಬಂದಿಗಳ ನೆರವಿನಿಂದ ದಸರಾ ಮಹೋತ್ಸವ ಸುಸೂತ್ರವಾಗಿ ನೆರವೇರಿದೆ. ಈ ಬಾರಿಯ ದಸರಾದಲ್ಲಿ ಮಹೇಂದ್ರ, ಧನಂಜಯ ಭವಿಷ್ಯದ ಅಂಬಾರಿ ಆನೆಗಳಾಗುವ ಸೂಚನೆ ಸಿಕ್ಕಿದೆ. ಸಣ್ಣಪುಟ್ಟ ವ್ಯತ್ಯಾಸಗಳ ನಡುವೆ ದಸರಾ ಮಹೋತ್ಸವ ಅದ್ದೂರಿಯಾಗಿ ನೆರವೇರಿದ್ದು ಸಂತಸ ತಂದಿದೆʼ ಎಂದರು.
-------------------------------
ʼನಾಡ ದಸರಾ ಯಶಸ್ವಿಯಾಗಿದೆ. ಆನೆಗಳಿಗೆ ವಿಶೇಷ ಪೂಜೆ ಸಲ್ಲಿಸಿ ನಾಡಿಗೆ ಒಳಿತು ಮಾಡಲಿ ಎಂದು ಹೇಳಿಕೊಳ್ಳಲಾಗಿದೆʼ
-ಪ್ರಹ್ಲಾದ್, ಪ್ರಧಾನ ಅರ್ಚಕ.