ಮೈಸೂರು | ಸಚಿವರ ಸಭೆಗೆ ಮುತ್ತಿಗೆ ಹಾಕಲು ರೈತರ ಯತ್ನ: ಹಲವರು ಪೊಲೀಸ್ ವಶಕ್ಕೆ
ಮೈಸೂರು: ಕಾವೇರಿ ನೀರು ತಮಿಳುನಾಡಿಗೆ ಹರಿಸುತ್ತಿರುವುದನ್ನು ಖಂಡಿಸಿ ನಗರಾಭಿವೃದ್ಧಿ ಹಾಗೂ ಪೌರಾಡಳಿತ ಸಚಿವರು ಸಭೆ ನಡೆಸುತ್ತಿದ್ದ ಜಿ.ಪಂ ಕಚೇರಿಗೆ ದಿಡೀರ್ ಮುತ್ತಿಗೆ ಹಾಕಲು ಯತ್ನಿಸಿದ ರೈತರನ್ನು ಪೊಲೀಸರು ಬಂಧಿಸಿದರು.
ನಗರದ ಜಿ.ಪಂ. ಅಬ್ದುಲ್ ನಝೀರ್ ಸಾಬ್ ಸಭಾಂಗಣದಲ್ಲಿ ನಗರಾಭಿವೃದ್ದಿ ಸಚಿವ ಭೈರತಿ ಸುರೇಶ್ ಹಾಗೂ ಪೌರಾಡಳಿತ ಸಚಿವ ರಹೀಂ ಖಾನ್ ಜಂಟಿಯಾಗಿ ಮೈಸೂರು ವಿಭಾಗ ಮಟ್ಟದ ನಗರಾಭಿವೃದ್ಧಿ ಮತ್ತು ಪೌರಾಡಳಿತ ಇಲಾಖೆ ಅಧಿಕಾರಿಗಳ ಸಭೆ ನಡೆಸುತ್ತಿದ್ದರು. ವಿಷಯ ತಿಳಿದು ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ ರೈತ, ಕನ್ನಡಪರ ಹಾಗೂ ಆಮ್ ಆದ್ಮಿ ಪಕ್ಷದ ಮುಖಂಡರುಗಳು ದಿಢೀರನೆ ಜಿ.ಪಂ ಕಚೇರಿಗೆ ಆಗಮಿಸಿದರು.
ಈ ವೇಳೆ ಪೊಲೀಸರು ಅವರನ್ನು ಗೇಟಿನಲ್ಲೇ ತಡೆದರು. ಇದರಿಂದ ಕೆರಳಿದ ರೈತರು ನಾವು ಸಚಿವರೊಂದಿಗೆ ಮಾತನಾಡಲುವಬಂದಿದ್ದೇವೆ.ನಮ್ಮನ್ನು ಒಳಗೆ ಬಿಡಿ ಎಂದು ಪಟ್ಟು ಹಿಡಿದರು. ಇದಕ್ಕೆ ಪೊಲೀಸರು ಒಪ್ಪದಿದ್ದಾಗ ರೈತರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು.
ಪೊಲೀಸರ ನಡೆಯಿಂದ ಆಕ್ರೋಶಗೊಂಡ ರೈತರು ಗೇಟಿನ ಮುಂಭಾಗವೇ ಕುಳಿತು ಖಾಲಿ ಮಡಕೆಗಳನ್ನು ತಲೆ ಮೇಲೆ ಹೊತ್ತುಕೊಂಡು ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ವಿರುದಗಧ ಧಿಕ್ಕಾರ ಕೂಗಿ ಪೊಲೀಸರ ನಡೆಯನ್ನು ಖಂಡಿಸಿದರು.
ಜಿ.ಪಂ ಆವರಣದಲ್ಲಿನ ಎರಡು ಗೇಟುಗಳ ಮುಂದೆ ಕುಳಿತು ಯಾರು ಒಳಹೋಗದಂತೆ ಮತ್ತು ಹೊರಬರದಂತೆ ದಿಗ್ಬಂಧನಹಾಕಿ ಪ್ರತಿಭಟನೆ ನಡೆಸಿದರು. ಈ ವೇಳೆ ಮಾತನಾಡಿದ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ʼʼನೀರಿನ ವಿಚಾರವಾಗಿ ಸಭೆ ಮಾಡುವ ಸಚಿವರು ಇಲ್ಲಿಗೆ ಬಂದು ಮಾತನಾಡುತ್ತಾರಾ? ಒಳಗಡೆ ಬಿಡಲು ನಿಮಗೆ ಏನು ಕಷ್ಟ, ನಾವೇನು ಆಫೀಸ್ ಲೂಟಿ ಮಾಡಲು ಬಂದಿದ್ದೇವ? ಇದು ನಮ್ಮ ಕಚೇರಿ ನಮ್ಮನ್ನು ಒಳಗಡೆ ಬಿಡುವುದಿಲ್ಲ ಎಂದರೆ ಏನರ್ಥ?ʼʼ ಎಂದು ಪ್ರಶ್ನಿಸಿದರು.
ಪೊಲೀಸಿನವರು ನಾಡಿನ ಹಿತ ಕಾಯುವಲ್ಲಿ ಗಮನ ಹರಿಸಿ ತಮಿಳುನಾಡಿನ ಗುಲಾಮರಂತೆ ಕೆಲಸ ಮಾಡಬೇಡಿ, ನೀವು ಕುಡಿಯುತ್ತಿರುವು ಕಾವೇರಿ ನೀರನ್ನೇ ಎಲ್ಲಾ ನೀರನ್ನು ತಮಿಳುನಾಡಿಗೆ ಬಿಟ್ಟುಬಿಟ್ಟರೆ ನೀವು ಏನು ಕುಡಿಯುತ್ತೀರಿ? ಪೊಲೀಸ್ ವಾಹನ ತಂದು ನಮ್ಮನ್ನು ಬಂಧಿಸುತ್ತೀರ ಇದಕ್ಕೆಲ್ಲಾ ನಾವು ಜಗ್ಗುವುದಿಲ್ಲ ಎಂದು ಕಿಡಿಕಾರಿದರು.
ಈ ವೇಳೆ ಪೊಲೀಸರು ಅಧಿಕಾರಿಯೊಬ್ಬರನ್ನು ಗೇಟಿನ ಒಳಗಡೆ ಬಿಡುತ್ತಿದ್ದಂತೆ ರೈತರು ಆಕ್ರೋಶ ವ್ಯಕ್ತಪಡಿಸಿದರು. ಆಗ ರೈತಮುಖಂಡ ಅತ್ತಹಳ್ಳಿ ದೇವರಾಜ್ ಗೇಟನ್ನು ಹತ್ತಿ ಒಳಹೋಗುವ ಪ್ರಯತ್ನ ಮಾಡುತ್ತಿದ್ದಂತೆ ಡಿಸಿಪಿ ಮುತ್ತುರಾಜ್ ಎಲ್ಲರನ್ನು ಬಂಧಿಸುವಂತೆ ಆದೇಶಿಸಿದರು. ಇದರಿಂದ ಕೆರಳಿದ ರೈತರು ತಾವು ತಂದಿದ್ದ ಮಡಕೆಯನ್ನು ಜಿ.ಪಂ ಕಚೇರಿ ಗೇಟಿನ ಮುಂಭಾಗವೇ ಹೊಡೆದು ಹಾಕಿ ಆಕ್ರೋಶ ವ್ಯಕ್ತಪಡಿಸಿದರು.
ನಂತರ ಪೊಲೀಸರು ರೈತರನ್ನು ಎಳೆದುಕೊಂಡು ಪೊಲೀಸ್ ವಾಹನದೊಳಗೆ ತಳ್ಳಿ ಬಂಧಿಸಿ ಸಿಎಆರ್ ಮೈದಾನಕ್ಕೆ ಕರೆದೊಯ್ಯಲಾಯಿತು.ಈ ವೇಳೆ ರೈತರು ಪೊಲೀಸರು, ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್, ಮುಖಂಡರುಗಳಾದ ಅತ್ತಹಳ್ಳಿ ದೇವರಾಜ್, ಹಳ್ಳಿಕೆರೆಹುಂಡಿ ಭಾಗ್ಯರಾಜ್, ಕಿರಗಸೂರು ಶಂಕರ್, ಕನ್ನಡ ಹೋರಾಟಗಾರ ಮೂಗೂರು ನಂಜುಂಡಸ್ವಾಮಿ, ಆಮ್ ಆದ್ಮಿ ಪಕ್ಷದ ಧರ್ಮಶ್ರೀ, ಸೋಸಲೆ ಸಿದ್ಧರಾಜು ಸೇರಿದಂತೆ ಹಲವರು ಭಾಗವಹಿಸಿದ್ದರು.