ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರದಿಂದ ಕರ್ನಾಟಕಕ್ಕೆ ಬಂದ ತೆರಿಗೆ ಪಾಲಿನ ಅಂಕಿ-ಅಂಶ ಕೊಡಿ : ಎನ್.ರವಿಕುಮಾರ್

ಬೆಂಗಳೂರು : "ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿ ಇದ್ದಾಗ ಎಷ್ಟು ಹಣವನ್ನು ಕರ್ನಾಟಕಕ್ಕೆ ಬಿಡುಗಡೆ ಮಾಡುತ್ತಿದ್ದರು ಎಂಬ ಅಂಕಿ-ಅಂಶ ಬಿಡುಗಡೆ ಮಾಡಿ" ಎಂದು ಪರಿಷತ್ ಸದಸ್ಯ ಎನ್.ರವಿಕುಮಾರ್ ಅವರು ಆಗ್ರಹಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಶುಕ್ರವಾರ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು,"ದಕ್ಷಿಣ ಭಾರತದ ವಿವಿಧ ರಾಜ್ಯಗಳಿಗೆ ಎಷ್ಟು ತೆರಿಗೆ ಹಣವನ್ನು ನಿಮ್ಮ ಪಕ್ಷ ಅಧಿಕಾರದಲ್ಲಿ ಇದ್ದಾಗ ಬಿಡುಗಡೆ ಮಾಡಿದ್ದೀರೆಂದು ಅಂಕಿ-ಅಂಶ ಕೊಡಬೇಕು. ನರೇಂದ್ರ ಮೋದಿಯವರ ನೇತೃತ್ವದ ನಮ್ಮ ಕೇಂದ್ರ ಸರಕಾರವು ಎಷ್ಟು ಹಣಕಾಸು ನೀಡಿದೆ ಎಂಬುದನ್ನು ನಾವೂ ಬಿಡುಗಡೆಗೊಳಿಸಲು ಸಿದ್ಧ" ಎಂದು ಸವಾಲು ಹಾಕಿದರು.
ಉತ್ತರ ಪ್ರದೇಶ ಮತ್ತು ಕರ್ನಾಟಕಕ್ಕೆ ಕೊಡುವ ಹಣವನ್ನು ಹೋಲಿಸಿ ಡಿ.ಕೆ.ಸುರೇಶ್ ಅವರು ಪ್ರತ್ಯೇಕತೆಯ ಮಾತನ್ನು ಆಡಿದ್ದಾರೆ. ತೆರಿಗೆ ಪಾಲು ಕೊಡುವುದರಲ್ಲಿ ಕರ್ನಾಟಕಕ್ಕೆ ಕೇಂದ್ರ ಸರಕಾರ ಅನ್ಯಾಯ ಮಾಡುತ್ತಿದೆ ಎನ್ನುತ್ತಿದ್ದಾರೆ. ಡಿ.ಕೆ.ಸುರೇಶ್ ಮಾಡುವ ಆರೋಪ ಸರಿಯಲ್ಲ, ಇದು ಖಂಡನೀಯ ಎಂದರು.
ಕೇಂದ್ರದಲ್ಲಿ ರಾಜೀವ್ ಗಾಂಧಿ, ಪಿ.ವಿ.ನರಸಿಂಹರಾವ್, ಡಾ.ಮನಮೋಹನ್ ಸಿಂಗ್ ಅವರ ಕಾಂಗ್ರೆಸ್ ಸರಕಾರ ಇದ್ದಾಗ ಕರ್ನಾಟಕಕ್ಕೆ ಎಷ್ಟು ತೆರಿಗೆ ಪಾಲು ಕೊಡುತ್ತಿದ್ದರು. ಎಷ್ಟು ಹಣ ಕೊಡಲಾಗುತ್ತಿತ್ತು ಎಂಬುದು ಎಲ್ಲರಿಗೂ ಗೊತ್ತಿದೆ ಎಂದರು.
ಕ್ಯಾಬಿನೆಟ್ ನಿರ್ಣಯ - ತೀವ್ರ ಆಕ್ಷೇಪ :
"ದುಷ್ಟ ಶಕ್ತಿಗಳ ವಿರುದ್ಧ ಸತ್ಯಕ್ಕೆ ಜಯ ಎಂದು ಪೇಪರ್ ನಲ್ಲಿ ನೋಡಿದ್ದೇನೆ. ದುಷ್ಟ ಶಕ್ತಿಗಳು ಯಾರು? ಹುಬ್ಬಳ್ಳಿಯಲ್ಲಿ 2022ರಂದು ಕಿಡಿಗೇಡಿಯೊಬ್ಬ ಒಂದು ವಾಟ್ಸಪ್ ಮೆಸೇಜ್‍ನಲ್ಲಿ ಇಸ್ಲಾಂ ಧರ್ಮಕ್ಕೆ ಅವಹೇಳನ ಮಾಡಿದ್ದಾನೆಂಬ ಕಾರಣಕ್ಕೆ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದ್ದರು. ಅಷ್ಟೊತ್ತಿಗಾಗಲೇ ಪೊಲೀಸರು ಆತನನ್ನು ಬಂಧಿಸಿದ್ದರು. ಅವನನ್ನು ತಮ್ಮ ಕೈಗೆ ಒಪ್ಪಿಸಲು ಆಗ್ರಹಿಸಿ, ಕಾನೂನನ್ನು ಕೈಗೆತ್ತಿಕೊಳ್ಳಲು ಮುಂದಾಗಿದ್ದರು. ಮರುದಿನ ಸಾವಿರಾರು ಜನ ಸೇರಿ ಮೆರವಣಿಗೆ ಮಾಡಿ, ಪೊಲೀಸ್ ಜೀಪಿನ ಮೇಲೆ ಹತ್ತಿ ಧರ್ಮದ ಧ್ವಜ ಹಾರಿಸಿದ್ದರು. ಪೊಲೀಸರ ಮೇಲೆ ಕಲ್ಲುತೂರಾಟ ಮಾಡಿದ್ದರು. ಅನೇಕ ಜನ ಪೊಲೀಸರಿಗೂ ಗಾಯಗಳಾಗಿದ್ದವು. ಆ ದಿನ ಅರ್ಧ ಹುಬ್ಬಳ್ಳಿ ಬಂದ್ ಆಗಿತ್ತು. ಇಂಥಹ ಘಟನೆಯನ್ನು ಸಹಜವಾಗಿ ತೆಗೆದುಕೊಂಡು ನಿನ್ನೆ ಸಚಿವ ಸಂಪುಟ ಸಭೆಯಲ್ಲಿ ಎಫ್‍ಐಆರ್ ರದ್ದು ಮಾಡಿದ್ದಾರೆ. ಇದಕ್ಕಿಂತ ನಾಚಿಕೆಗೇಡಿನ ಸಂಗತಿ ಇದೆಯೇ" ಎಂದು ಪ್ರಶ್ನಿಸಿದರು.