ನಾನು ಹೇಳಿದ್ದು ಹಾಗಲ್ಲ, ಹೀಗೆ | ರಾಜ್ಯೋತ್ಸವ ಪ್ರಶಸ್ತಿಗೆ ಮಲ ಹೊರುವವರ ಯೋಗ್ಯತೆ ಕುರಿತ ಬರಹದ ಬಗ್ಗೆ ನಾಗೇಶ್ ಹೆಗಡೆ ಸ್ಪಷ್ಟೀಕರಣ
Photo : The Hindu
ಬೆಂಗಳೂರು : ಮಲಹೊರುವವರ ʼಯೋಗ್ಯತೆʼಯ ಕುರಿತು ಫೇಸ್ ಬುಕ್ ಪೋಸ್ಟ್ ನಲ್ಲಿ ಬರೆದಿದ್ದ ನಾಗೇಶ ಹೆಗಡೆಯವರು ನಾನು ಹಾಗೆ ಹೇಳಿದ್ದು ಅಲ್ಲ ಎಂದು ಸ್ಪಷ್ಟೀಕರಣ ನೀಡಿದ್ದಾರೆ.
ರಾಜ್ಯೋತ್ಸವ ಪ್ರಶಸ್ತಿಯ ಆಯ್ಕೆ ಸಮಿತಿಯಲ್ಲಿ ಸದಸ್ಯರಾಗಿದ್ದ ನಾಗೇಶ ಹೆಗಡೆಯವರು ತಮ್ಮ ಫೇಸ್ ಬುಕ್ ಬರಹದಲ್ಲಿ ಪ್ರಶಸ್ತಿ ಪಡೆಯಲು ಮಲಹೊರುವವವರ ʼಯೋಗ್ಯತೆʼ ಬಗ್ಗೆ ಪ್ರಶ್ನಿಸಿದ್ದು ವಿವಾದ ಸ್ವರೂಪ ಪಡೆದುಕೊಂಡು ಆಕ್ರೋಶಕ್ಕೆ ಕಾರಣವಾಗಿತ್ತು.
ತಮ್ಮ ಫೇಸ್ ಬುಕ್ ಖಾತೆಯಲ್ಲಿ ನಾಗೇಶ ಹೆಗಡೆಯವರು ಪ್ರಶಸ್ತಿ ಆಯ್ಕೆ ಮಾಡುವಾಗ ಎದುರಾಗಿದ್ದ ಸವಾಲುಗಳ ಕುರಿತು ದೀರ್ಘವಾದ ಪೋಸ್ಟ್ ಹಂಚಿಕೊಂಡಿದ್ದರು. ಅದರಲ್ಲಿ ಅವರು ಪ್ರಶಸ್ತಿಗೆ ಆಯ್ಕೆ ಮಾಡುವ ಸಂದರ್ಭದಲ್ಲಿ ಮಲಹೊರುವವರಿಗೆ ಪ್ರಶಸ್ತಿ ಕೊಡುವ ಬಗ್ಗೆ ಬಂದ ಸಲಹೆಯ ಕುರಿತು ಬರೆದಿದ್ದರು.
“ಮಲ ಹೊರುವ ಶ್ರಮಿಕರಿಗೆ ವಯಸ್ಸಿನ ನಿರ್ಬಂಧ ಇರಲೇಬಾರದು, ಅವರಲ್ಲಿ 50 ವರ್ಷದಾಚೆ ಬದುಕುವುದೇ ಅಪರೂಪ, ಅಂಥವರಲ್ಲಿ ಯೋಗ್ಯರಾದ ಒಬ್ಬರಿಗೆ ಪ್ರಶಸ್ತಿ ಕೊಡಬೇಕು ಎಂಬ ಒತ್ತಾಯವೂ ಈ ವರ್ಷ ಬಂತು. ಕೊಡಬೇಕು ಸರಿ, ಆದರೆ ಅವರಲ್ಲಿ ಯೋಗ್ಯತೆಯ ಮಾನದಂಡ ಏನು? ನನ್ನ ಪ್ರಕಾರ, ಯಾರು 60 ಮೀರಿಯೂ ಬದುಕಿರುತ್ತಾರೊ (ಕುಡಿತ, ಅನಾರೋಗ್ಯವನ್ನೂ ಮೆಟ್ಟಿ ನಿಂತ) ಅಂಥವರನ್ನೇ ಹುಡುಕಿ ಪ್ರಶಸ್ತಿ ಕೊಡಬೇಕು ತಾನೆ?” ಎಂದು ತಮ್ಮ ಪೋಸ್ಟ್ ನಲ್ಲಿ ಹೇಳಿದ್ದರು.
ತಮ್ಮ ಬರಹ ವಿವಾದದ ಸ್ವರೂಪ ಪಡೆದುಕೊಂಡ ಬಳಿಕ ನಾಗೇಶ ಹೆಗಡೆಯವರು “ಮಲಹೊರುವ ವೃತ್ತಿ ಮತ್ತು ಪ್ರಶಸ್ತಿಯ ಮಾನದಂಡ....” ಎಂಬ ಮತ್ತೊಂದು ಪೋಸ್ಟ್ ಹಾಕಿ ಸ್ಪಷ್ಟೀಕರಣ ನೀಡಿದ್ದಾರೆ.
ʼರಾಜ್ಯೋತ್ಸವ ಪ್ರಶಸ್ತಿಗಳ ಹಪಾಹಪಿ ಕುರಿತಂತೆ ನಾನು ಹಾಕಿದ್ದ ಸ್ಟೇಟಸ್ಗೆ ಅನೇಕರು ಆಕ್ಷೇಪಣೆ ಎತ್ತಿದ್ದಾರೆ. ಅದರಲ್ಲೂ ಪ್ರಶಸ್ತಿ ಸಿಗಲೇಬೇಕಾದ ಶ್ರಮಿಕ ವರ್ಗದ ಬಗ್ಗೆ ನನಗೆ ಸಂವೇದನೆಯೇ ಇಲ್ಲವೆಂದು ಟೀಕಿಸಿದ್ದಾರೆ. ಆ ಕುರಿತು ಒಂದು ಪೂರಕ ಬರಹ ಇದುʼ ಎಂದು ಅವರು ತಿಳಿಸಿದ್ದಾರೆ.
ʻಮಂಗಳಯಾನ ನೌಕೆಯನ್ನು ಯಶಸ್ವಿಯಾಗಿ ಮಂಗಳ ಗ್ರಹದ ಸುತ್ತ ಪ್ರದಕ್ಷಿಣೆ ಹಾಕಿಸಿದ ಇಸ್ರೊ ವಿಜ್ಞಾನಿಗಳ ಅಪೂರ್ವ ಸಾಧನೆಯನ್ನು ನಾನು ಅನೇಕ ಬಾರಿ ಕೊಂಡಾಡಿದ್ದೇನೆ. ಆ ನೌಕೆಯಲ್ಲಿ ಒಂದು ಪುಟ್ಟ ಸಾಧನವಿದ್ದು ಅದು ಮಂಗಳನ ನೆಲದಲ್ಲಿ ಮೀಥೇನ್ ಇದೆಯೇ ಇಲ್ಲವೆ ಎಂಬುದನ್ನು ನಮಗೆ ವರದಿ ಮಾಡುತ್ತಿತ್ತುʼ.
ʼಕೋಟಿ ಕಿಲೊಮೀಟರ್ ಆಚಿನ ವಿಷಗಾಳಿಯನ್ನು ಪತ್ತೆ ಮಾಡುವಷ್ಟು ಸಾಮರ್ಥ್ಯ ನಮ್ಮ ವಿಜ್ಞಾನಿಗಳಿಗೆ ಇದೆ. ಆದರೂ ನಮ್ಮ ನಗರಗಳ ಕೊಚ್ಚೆಗುಂಡಿಯನ್ನು ಇಳಿಯುವವರು ಅಲ್ಲಿ ವಿಷಾನಿಲ (ಮೀಥೇನ್, ಕಾರ್ಬನ್ ಮೊನಾಕ್ಸೈಡ್, ಕಾರ್ಬನ್ ಡೈ ಆಕ್ಸೈಡ್) ಇದೆ ಎಂಬುದು ಗೊತ್ತಿಲ್ಲದೇ ಸಾವನ್ನಪ್ಪುತ್ತಾರೆ. ವಿಷಾನಿಲವನ್ನು ಪತ್ತೆ ಹಚ್ಚಲು ಒಂದು ಪುಟ್ಟ ಮೊಬೈಲ್ ನಂಥ ಸಾಧನ ಇದ್ದರೆ ಸಾಕು. ಅನೇಕ ಶ್ರಮಜೀವಿಗಳ ಸಾವನ್ನು ತಪ್ಪಿಸಬಹುದು. ಏಕೆ ನಗರಪಾಲಿಕೆಯ ಗುತ್ತಿಗೆದಾರರ ಬಳಿ ಆ ಸಾಧನ ಇರುವುದಿಲ್ಲ?ʼ
ʼಈ ವ್ಯಂಗ್ಯದ ಕುರಿತು ನಾನು ಅನೇಕ ವಿಜ್ಞಾನ ಕಮ್ಮಟಗಳಲ್ಲಿ ಹೇಳಿದ್ದೇನೆ. ಚರಂಡಿ ಶುದ್ಧ ಮಾಡುವವರ ಆರೋಗ್ಯ ಕುರಿತು ಯಾಕಿಷ್ಟು ನಿಷ್ಕಾಳಜಿ ಎಂದು ನಗರಪಾಲಿಕೆಯ ಆರೋಗ್ಯ ತಪಾಸಕರನ್ನೂ ಇಂಜಿನಿಯರ್ ಗಳನ್ನೂ ಕೇಳಿದ್ದೇನೆ. ಆ ರೇಜಿಗೆ ಕೆಲಸದಲ್ಲಿ ಅದೆಷ್ಟು ಶ್ರಮಿಕರು ಸಾವಿಗೀಡಾಗುತ್ತಾರೆ ಎಂಬೆಲ್ಲ ವಿವರಗಳನ್ನೂ ಚಿತ್ರಗಳನ್ನೂ ವರ್ಷದಿಂದ ವರ್ಷಕ್ಕೆ ಸಂಗ್ರಹಿಸುತ್ತ ಬಂದಿದ್ದೇನೆ. ಜರ್ನಲಿಸಂ ವಿದ್ಯಾರ್ಥಿಗಳಿಗೆ ಆ ಕುರಿತು ಪಾಠ ಮಾಡಿದ್ದೇನೆ. ಅಂಥ ವಿಷಯಗಳ ತನಿಖಾ ವರದಿ ತಯಾರಿಸಲು ಮಾರ್ಗದರ್ಶನ ಮಾಡಿದ್ದೇನೆʼ.
ʼನಿನ್ನೆ ರಾಜ್ಯೋತ್ಸವ ಪ್ರಶಸ್ತಿಗಳ ಕುರಿತು ಇಲ್ಲಿ ಬರೆಯುವಾಗ ಅಂಥ ಮಲಹೊರುವ ಶ್ರಮಿಕರಿಗೆ ನೀಡಬೇಕಾದ ಪ್ರಶಸ್ತಿಯ ಮಾನದಂಡ ಕುರಿತು ತೀರ ಸಂಕ್ಷಿಪ್ತವಾಗಿ ಬರೆದಿದ್ದರಿಂದಲೋ ಏನೋ, ಕೆಲವರು ನನ್ನ ವಾದವನ್ನು ಸರಿಯಾಗಿ ಗ್ರಹಿಸಿದಂತಿಲ್ಲ. ನನಗೆ ಆ ಶ್ರಮಿಕರ ಬಗ್ಗೆ ಸಂವೇದನೆಯೇ ಇಲ್ಲ ಎಂದು ಕೆಲವರು ಆಕ್ಷೇಪಿಸಿದ್ದಾರೆʼ.
"ʻಮಲ ಹೊರುವ ಶ್ರಮಿಕರಿಗೆ ವಯಸ್ಸಿನ ನಿರ್ಬಂಧ ಇರಲೇಬಾರದು, ಅವರಲ್ಲಿ 50 ವರ್ಷದಾಚೆ ಬದುಕುವುದೇ ಅಪರೂಪ; ಅಂಥವರಲ್ಲಿ ಯೋಗ್ಯರಾದ ಒಬ್ಬರಿಗೆ ಪ್ರಶಸ್ತಿ ಕೊಡಬೇಕು" ಎಂಬ ಒತ್ತಾಯವೂ ಈ ವರ್ಷ ಬಂತು.
ʼಅವರ ಕುರಿತು ನಮಗೆಲ್ಲ ಅನುಕಂಪ ಇರಬೇಕು. ಚರಂಡಿಯಲ್ಲಿ ಇಳಿಯುವ ಮುನ್ನ ಅಲ್ಲಿನ ವಿಷಾನಿಲವನ್ನು ಪತ್ತೆ ಮಾಡಬಲ್ಲ ಸರಳ ಸಾಧನಗಳನ್ನು ಅವರಿಗೆ ಕೊಡಬೇಕೆಂದು ನಾನು ಅನೇಕ ವಿಜ್ಞಾನ ವೇದಿಕೆಗಳಲ್ಲಿ ಹಿಂದೆಲ್ಲ ಹೇಳಿದ್ದೇನೆ. ನಗರಪಾಲಿಕೆಗಳ, ಗುತ್ತಿಗೆದಾರರ ನಿಷ್ಕಾಳಜಿಯನ್ನು ಎತ್ತಿ ತೋರಿಸಿದ್ದೇನೆ. ನಗರದ ನರನಾಡಿಗಳನ್ನು ಶುದ್ಧ ಇಡಲೆಂದು ತಮ್ಮನ್ನೇ ಅಪಾಯಕ್ಕೆ ಒಡ್ಡಿಕೊಳ್ಳುವ ಅಂಥ ಶ್ರಮಜೀವಿಗಳಿಗೆ ಪ್ರಶಸ್ತಿಯನ್ನೂ ಕೊಡಬೇಕು ಸರಿ. ಆದರೆ ಅವರಲ್ಲಿ ಯೋಗ್ಯತೆಯ ಮಾನದಂಡ ಏನು?ʼ
ʼಮಲಹೊರುವವರ ಕುಟುಂಬದಿಂದ ಬಂದು ಮಲಹೊರುತ್ತಲೇ ಆ ಕುರಿತು ಕೂಲಿಕಾರರನ್ನು ಸಂಘಟಿಸಿ ಎತ್ತರಕ್ಕೇರಿದ ಕೆಜಿಎಫ್ ನ ಬೆಝ್ವಾಡಾ ವಿಲ್ಸನ್ ಮ್ಯಾಗ್ಸೆಸೆ ಪ್ರಶಸ್ತಿಯನ್ನು ಪಡೆದಿದ್ದು ನಮಗೆ ಗೊತ್ತಿದೆ. ಅವರಷ್ಟೆತ್ತರ ಏರದಿದ್ದರೂ ವಿಪರೀತ ಕುಡಿತದ ಚಟಕ್ಕೆ ಬೀಳದೆ, ತಮ್ಮ ಆರೋಗ್ಯವನ್ನೂ ಕೌಟುಂಬಿಕ ಜವಾಬ್ದಾರಿಯನ್ನೂ ಅರಿತು, ಮುಖವಾಡದಂಥ ಸುರಕ್ಷಾ ಸಾಧನಗಳನ್ನು ಧರಿಸಿಯೇ ಕೆಲಸಕ್ಕೆ ಇಳಿಯಬೇಕೆಂದು ಸಹೋದ್ಯೋಗಿಗಳ ಮನವೊಲಿಸಿ ಕೆಲಮಟ್ಟಿನ ನಾಯಕತ್ವ ತೋರಿದವರನ್ನು ಹುಡುಕಬೇಕುʼ.
ʼಅಂಥ ಜಾಗ್ರತಿ ಇರುವ, 60-70 ವರ್ಷ ಬದುಕಿರುವವರನ್ನು ಗುರುತಿಸಲು ದು.ಸರಸ್ವತಿಯಂಥ ಸಾಮಾಜಿಕ ಕಾರ್ಯಕರ್ತೆಯರ ನೆರವು ಪಡೆದರೆ ಯೋಗ್ಯವ್ಯಕ್ತಿ ಸಿಕ್ಕೇ ಸಿಗುತ್ತಾರೆ. ಅವರಿಗೆಂದೇ ವಯೋಮಿತಿ ಸಡಿಲಿಸುವ ಅಗತ್ಯವಿರುವುದಿಲ್ಲʼ ಎಂದು ತಮ್ಮ ಪೋಸ್ಟ್ ನಲ್ಲಿ ತಿಳಿಸಿದ್ದಾರೆ.