‘ಹೊನ್ನಾವರ ವಾಣಿಜ್ಯ ಬಂದರು- ರೈಲು ಮಾರ್ಗ ನಿರ್ಮಾಣ ಯೋಜನೆ ಕೈಬಿಡಿ’ : ಸಿಎಂಗೆ ರಾಷ್ಟ್ರೀಯ ಮೀನುಗಾರರ ಸಂಘಟನೆ ಮನವಿ

ಬೆಂಗಳೂರು : ಮೀನುಗಾರರ ಜೀವನೋಪಾಯಕ್ಕೆ ಮೀನುಗಾರಿಕೆಗೆ ಮತ್ತು ಸ್ಥಳೀಯ ಪರಿಸರಕ್ಕೆ ಆತಂಕ ಇರುವ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕಾಸರಕೋಡ ಟೊಂಕದ ಉದ್ದೇಶಿತ ಖಾಸಗಿ ವಾಣಿಜ್ಯ ಬಂದರು ಯೋಜನೆ ಮತ್ತು ಈ ಯೋಜನೆಗಾಗಿ ಇಲ್ಲಿನ ಪರಿಸರ ಸೂಕ್ಷ್ಮ ಕಡಲ ತೀರದ 5 ಕಿ.ಮೀ. ಉದ್ದದ ಮೀನುಗಾರರ ವಸತಿ ನೆಲೆಯಲ್ಲಿ ಚತುಷ್ಪತ ರಸ್ತೆ ಮತ್ತು ರೈಲು ಮಾರ್ಗದ ನಿರ್ಮಾಣ ಯೋಜನೆಯನ್ನು ಕೈ ಬಿಡಬೇಕು ಎಂದು ರಾಷ್ಟ್ರೀಯ ಮೀನುಗಾರರ ಸಂಘಟನೆ ಕರ್ನಾಟಕ ಮನವಿ ಮಾಡಿದೆ.
ಮಂಗಳವಾರ ನಗರದಲ್ಲಿರುವ ಸರಕಾರಿ ನಿವಾಸ ಕಾವೇರಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಭೇಟಿ ಮಾಡಿದ ರಾಷ್ಟ್ರೀಯ ಮೀನುಗಾರರ ಸಂಘಟನೆ ಕರ್ನಾಟಕದ ರಾಜ್ಯ ಕಾರ್ಯದರ್ಶಿ ಚಂದ್ರಕಾಂತ ಕೊಚರೇಕರ ನೇತೃತ್ವದ ನಿಯೋಗವು ಈ ಸಂಬಂಧ ಮನವಿ ಸಲ್ಲಿಸಿತು.
ಮನವಿ ಪತ್ರದಲ್ಲಿ ಏನಿದೇ?: ಕಾಸರಕೋಡ ಟೋಂಕದ ಕಡಲಾಮೆಗಳು ಮೊಟ್ಟೆ ಇಡುವ ಇಲ್ಲಿನ ಪರಿಸರ ಸೂಕ್ಷ್ಮ ಸುಂದರ ಕಡಲ ತೀರದಲ್ಲಿ ಸರಕಾರವು ಆರಂಭಿಸಲು ಉದ್ದೇಶಿಸಿದ್ದ ಖಾಸಗಿ ವಾಣಿಜ್ಯ ಬಂದರು ಯೋಜನೆಯ ವಿರುದ್ಧ ಮತ್ತು ಈ ಯೋಜನೆಗಾಗಿ ಅಲ್ಲಿನ 5 ಕಿ.ಮೀ.ಉದ್ದದ ಮೀನುಗಾರರ ವಸತಿ ನೆಲೆಯಲ್ಲಿ ಚತುಷ್ಪತ ರಸ್ತೆ ಮತ್ತು ರೈಲು ಮಾರ್ಗ ನಿರ್ಮಾಣ ಮಾಡುವುದರ ವಿರುದ್ಧ ಹಲವು ವರ್ಷಗಳಿಂದ ಸ್ಥಳೀಯ ಮೀನುಗಾರರು ಮತ್ತು ಸಾರ್ವಜನಿಕರು ಶಾಂತಿಯುತ ಪ್ರತಿಭಟನೆ ಮೂಲಕ ಸರಕಾರದ ಗಮನ ಸೆಳೆಯುತ್ತಾ ಬಂದಿದ್ದಾರೆ ಎಂದು ಸಂಘಟನೆ ಹೇಳಿದೆ.
ಕಳೆದ ವಿಧಾನಸಭೆ ಚುನಾವಣಾ ಪೂರ್ವದಲ್ಲಿ ಇಂದಿನ ಮೀನುಗಾರಿಕೆ ಸಚಿವ ಮಂಕಾಳ ವೈದ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸ್ಥಳಕ್ಕೆ ಭೇಟಿ ನೀಡಿ, ಸ್ಥಳೀಯರ ಅಹವಾಲುಗಳನ್ನು ಸ್ವೀಕರಿಸಿದ್ದು ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದರೆ, ಈ ಉದ್ದೇಶಿತ ವಾಣಿಜ್ಯ ಬಂದರು ಯೋಜನೆ ಹಾಗೂ ಚತುಷ್ಪತ ರಸ್ತೆ ನಿರ್ಮಿಸುವ ಯೋಜನೆಯನ್ನು ಕೈ ಬಿಟ್ಟು ಈ ಭಾಗದ ಮೀನುಗಾರರ ಹಿತ ರಕ್ಷಣೆ ಮಾಡುವುದಾಗಿ ಭರವಸೆ ನೀಡಿದ್ದರು ಎಂದು ಸಂಘಟನೆ ತಿಳಿಸಿದೆ.
ಖಾಸಗಿ ಬಂದರು ಯೋಜನೆಗಾಗಿ ಸಾಗರ ಮಾಲಾ ಯೋಜನೆಯಡಿ ಚತುಷ್ಪತ ರಸ್ತೆ ನಿರ್ಮಿಸುವ ಸಿದ್ಧತೆಗೆ ಕಾಸರಕೋಡ ಟೊಂಕದ ಮೀನುಗಾರರ ವಸತಿ ನೆಲೆಯಲ್ಲಿರುವ ಸುಮಾರು 300ಕ್ಕೂ ಹೆಚ್ಚು ಬಡ ಮೀನುಗಾರರ ಮನೆಗಳನ್ನು ನೆಲಸಮಗೊಳಿಸುವ ಹುನ್ನಾರ ಖಾಸಗಿ ಕಂಪೆನಿಯವರೊಂದಿಗೆ ಸೇರಿ ಬಂದರು ಇಲಾಖೆಯು ನಡೆಸುತ್ತಿದೆ ಎಂದು ಸಂಘಟನೆ ದೂರಿದೆ.
ಅಲ್ಲದೇ, ಮೀನುಗಾರರ ನ್ಯಾಯಯುತ ಹೋರಾಟವನ್ನು ಹತ್ತಿಕ್ಕಲು ಇಲ್ಲಿ ನಿಯಮ ಬಾಹಿರವಾಗಿ ಪೊಲೀಸ್ ಬಲದ ದುರ್ಬಳಕೆ ಆಗಿದ್ದು, ಮೀನುಗಾರರ ಮೇಲೆ ಸುಳ್ಳು ಪ್ರಕರಣಗಳನ್ನು ದಾಖಲಿಸಿ ಜೈಲಿಗೆ ಕಳುಹಿಸಿರುವ ಹಾಗೂ ಹಲವರ ಮೇಲೆ ರೌಡಿ ಶೀಟರ್ ಕೇಸ್‍ಗಳನ್ನು ಹಾಕಿ ಮಾನವ ಹಕ್ಕುಗಳನ್ನು ದಮನಿಸಿ ದೌರ್ಜನ್ಯ ಎಸಗಿದ್ದಾರೆ. ಈ ಸಂಬಂಧ ಉನ್ನತಮಟ್ಟದ ತನಿಖೆಗೆ ಒಪ್ಪಿಸಿ ಮೀನುಗಾರರ ಹಿತರಕ್ಷಣೆ ಮಾಡಬೇಕು ಎಂದು ಸಂಘಟನೆ ಆಗ್ರಹಿಸಿದೆ.
ಈ ಉದ್ದೇಶಿತ ಯೋಜನೆಗಳನ್ನು ಕೈಬಿಡುವುದರ ಜೊತೆಗೆ ಬಡ ಮೀನುಗಾರರ ಮೇಲೆ ಬಂದರು ವಿರೋಧಿ ಹೋರಾಟಗಾರರ ಮೇಲೆ ಪೊಲೀಸರು ದಾಖಲಿಸಿರುವ ಎಲ್ಲ ಪ್ರಕರಣಗಳನ್ನು ಕೈ ಬಿಡಲು ಸಹಾನುಭೂತಿಯಿಂದ ಪರಿಶೀಲಿಸಿ ನ್ಯಾಯ ನೀಡುವಂತೆ ಸಂಘಟನೆ ಮನವಿ ಮಾಡಿದೆ.