ನೇಹಾ ಹತ್ಯೆ ಪ್ರಕರಣವನ್ನು ರಾಜಕೀಯ ಅಸ್ತ್ರ ಮಾಡಿಕೊಳ್ಳಬೇಡಿ: ಮಠಾಧೀಶರ ಆಗ್ರಹ
ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ವಿದ್ಯಾರ್ಥಿನಿ ನೇಹಾ ಹತ್ಯೆ ಪ್ರಕರಣವನ್ನು ರಾಜಕೀಯ ಅಸ್ತ್ರವನ್ನಾಗಿ ಮಾಡಿಕೊಳ್ಳದೇ ರಾಜ್ಯ ಸರಕಾರ ಸೂಕ್ತ ತನಿಖೆ ನಡೆಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ವಿವಿಧ ಮಠಗಳ ಸ್ವಾಮೀಜಿಗಳು ಒತ್ತಾಯ ಮಾಡಿದ್ದಾರೆ.
ಶನಿವಾರ ನಗರದ ಚೆನ್ನಮ್ಮ ವೃತ್ತದಲ್ಲಿ ನೇಹಾ ಕೊಲೆ ಖಂಡಿಸಿ ನಡೆದ ಪ್ರತಿಭಟನಾ ಸಮಾವೇಶದಲ್ಲಿ ವಿವಿಧ ಮಠಗಳ ಮುಖ್ಯಸ್ಥರು, ಸ್ವಾಮೀಜಿಗಳು ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಫಕೀರ ದಿಂಗಾಲೇಶ್ವರ ಶ್ರೀ ಮಾತನಾಡಿ, ಮಹಿಳೆಯರಿಗೆ ರಕ್ಷಣೆ ಹಾಗೂ ಸ್ವಾತಂತ್ರ್ಯ ಸಿಗಬೇಕು. ಆದರೆ, ಬಿಜೆಪಿ ಪಕ್ಷದವರು ಚುನಾವಣೆ ಅಸ್ತ್ರವಾಗಿ ಬಳಸಿಕೊಳ್ಳುವ ನೀಚ ಕೆಲಸ ಮಾಡಿಕೊಳ್ಳುತ್ತಿದ್ದಾರೆ. ಮಾನವೀಯತೆ ಇಲ್ಲದಂತಹ ಪರಿಸ್ಥಿತಿ ಉದ್ಭವಿಸಿದೆ ಎಂದು ಟೀಕಿಸಿದರು.
ಆದರೆ, ಯಾವುದೇ ಸರಕಾರ ಇರಲಿ ಇಂತಹ ಘಟನೆ ಹಾಗೂ ಕೊಲೆಯನ್ನು ಸಾಮಾನ್ಯವಾಗಿ ತೆಗೆದುಕೊಳ್ಳಬಾರದು. ಆರೋಪಿಗೆ ತಕ್ಷಣವೇ ಕಠಿಣ ಶಿಕ್ಷೆ ಆಗಬೇಕು. ಇನ್ನೂ ಪ್ರಧಾನಿಯವರ ಬೇಟಿ ಬಚಾವೋ, ಬೇಟಿ ಪಢಾವೋ ಎಂಬುದು ಅಕ್ಷರಶಃ ಅನುಷ್ಠಾನಕ್ಕೆ ಬರಬೇಕು. ಸರಕಾರವೇ ಮಹಿಳೆಯರ ರಕ್ಷಣೆಗೆ ಪರವಾನಿಗೆಯ ಆಯುಧ ನೀಡುವಂತಹ ವ್ಯವಸ್ಥೆ ಜಾರಿಗೆ ಬರಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನಾ ಸಮಾವೇಶದಲ್ಲಿ ಶಿಗ್ಗಾಂವಿ ಸಂಗನಬಸವ ಸ್ವಾಮೀಜಿ, ಬೊಮ್ಮನಹಳ್ಳಿ ಶಿವಯೋಗಿ ಮಹಾಸ್ವಾಮಿಜಿ, ಬಸವಧರ್ಮ ಪೀಠದ ಶ್ರೀ, ಮುರಘಾಮಠದ ಮಲ್ಲಿಕಾರ್ಜುನ ಶ್ರೀ, ಸವಣೂರಿನ ದೊಡ್ಡ ಕಲ್ಮಠದ ಶ್ರೀ ಸೇರಿದಂತೆ ಮೊದಲಾದವರು ಆರೋಪಿಗೆ ಕಾನೂನಿನಲ್ಲಿರುವ ಕ್ರೂರ ಶಿಕ್ಷೆ ನೀಡಿ, ನೇಹಾಳ ಸಾವಿಗೆ ನ್ಯಾಯ ಸಿಗಬೇಕು ಎಂದು ಒತ್ತಾಯಿಸಿದರು.