ನವಜಾತ ಶಿಶು ಮಾರಾಟ ದಂಧೆ ಪ್ರಕರಣ: ಬಂಧಿತರ ಸಂಖ್ಯೆ 10ಕ್ಕೆ ಏರಿಕೆ
ಸಾಂದರ್ಭಿಕ ಚಿತ್ರ
ಬೆಂಗಳೂರು: ಹಸುಗೂಸುಗಳ ಮಾರಾಟ ದಂಧೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಿಬ್ಬರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿರುವುದು ವರದಿಯಾಗಿದೆ.
ನಕಲಿ ವೈದ್ಯ ಕೆವಿನ್(32) ಹಾಗೂ ಮಧ್ಯವರ್ತಿಯಾಗಿದ್ದ ರಮ್ಯಾ(42) ಎಂಬುವರನ್ನು ಬಂಧಿಸಲಾಗಿದೆ. ಆ ಮೂಲಕ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 10ಕ್ಕೇರಿದೆ.
ರಾಜಾಜಿನಗರದಲ್ಲಿ ತನ್ನದೇ ಕ್ಲಿನಿಕ್ವೊಂದನ್ನು ನಡೆಸುತ್ತಿದ್ದ ಕೆವಿನ್, ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದ. ಆದರೆ, ಮೂರನೇ ವರ್ಷದ ಎಂಬಿಬಿಎಂಸ್ ಫೇಲ್ ಆಗಿದ್ದ ಕೆವಿನ್, ತಾನೊಬ್ಬ ವೈದ್ಯ ಎಂದು ಹೇಳಿಕೊಂಡಿದ್ದ. ಅಲ್ಲದೇ ಹಸುಗೂಸುಗಳ ಮಾರಾಟ ದಂಧೆಯಲ್ಲಿ ಭಾಗಿಯಾಗಿದ್ದ. ಮಕ್ಕಳನ್ನು ಖರೀದಿಸುವವರ ಬಳಿ ಹಣ ಪಡೆದು ನಕಲಿ ಸರ್ಟಿಫಿಕೇಟ್ ತಯಾರಿಸಿ ಕೊಡುವ ಕೆಲಸವನ್ನು ಕೆವಿನ್ ಮಾಡುತ್ತಿದ್ದ ಎಂಬುದಾಗಿ ತಿಳಿದು ಬಂದಿದೆ.
ಮತ್ತೋರ್ವ ಬಂಧಿತ ಆರೋಪಿ ರಮ್ಯಾ, ತನ್ನ ಸಂಬಂಧಿಯೊಬ್ಬರು ಮದುವೆಗೂ ಮೊದಲೇ ಗರ್ಭಿಣಿಯಾಗಿದ್ದಾಗ ತಾನೇ ಆ ಗರ್ಭಿಣಿಯನ್ನು ಆರೈಕೆ ಮಾಡಿ, ಮಗು ಹೆತ್ತ ಬಳಿಕ ಮಕ್ಕಳ ಮಾರಾಟದ ಗುಂಪಿನ ಬಗ್ಗೆ ತಿಳಿದುಕೊಂಡು ಮಾರಾಟ ಮಾಡಿದ್ದಳು. ಅಲ್ಲದೇ ಮಗು ಹೆತ್ತು ಕೊಟ್ಟಿದ್ದ ಆ ಗರ್ಭಿಣಿಗೆ ಹಣ ಕೂಡ ನೀಡಿದ್ದಳು. ನಂತರ ದಂಧೆಯಲ್ಲಿ ತಾನೂ ಸಹ ಮುಂದುವರೆದಿದ್ದಳು ಎಂಬುದಾಗಿ ಪೊಲೀಸರ ತನಿಖೆಯಲ್ಲಿ ತಿಳಿದು ಬಂದಿದೆ.
ಮಗು ಮಾರಾಟ ಜಾಲ ಭೇದಿಸಿದ್ದ ಸಿಸಿಬಿ ಪೊಲೀಸರು: ಆರ್.ಆರ್.ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನ.24 ಹಾಗೂ 25ರಂದು ಮಗು ಮಾರಾಟಕ್ಕೆ ಯತ್ನಿಸಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ಕೈಗೊಂಡ ಸಿಸಿಬಿ ಸಂಘಟಿತ ಅಪರಾಧ ವಿಭಾಗದ ಅಧಿಕಾರಿಗಳು, ಕಣ್ಣನ್ ರಾಮಸ್ವಾಮಿ, ಹೇಮಲತಾ, ಮಹಾಲಕ್ಷ್ಮೀ, ಶರಣ್ಯ, ಸಹಾಸಿನಿ, ರಾಧಾ ಹಾಗೂ ಗೋಮತಿ ಸೇರಿ ಒಟ್ಟು 8 ಮಂದಿ ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು.
ಬಂಧಿತ ಆರೋಪಿಗಳು, ಗರ್ಭ ಧರಿಸಿ ಮಗುವಿಗೆ ಜನ್ಮ ನೀಡಲು ಇಷ್ಟವಿಲ್ಲದವರ ಬಳಿ ಹಣದ ಆಮಿಷವೊಡ್ಡಿ, ಅವರ ಮಗುವನ್ನು ಮಾರಾಟ ಮಾಡಿಕೊಡುತ್ತೇವೆ ಎಂದು ಹೇಳಿ ಹೆರಿಗೆಯ ಬಳಿಕ ನವಜಾತ ಶಿಶುಗಳನ್ನು ತಮಿಳುನಾಡಿನಿಂದ ಬೆಂಗಳೂರಿಗೆ ತಂದು ಮಾರಾಟ ಮಾಡುತ್ತಿದ್ದರು. ಆರೋಪಿಗಳು ಗರ್ಭಿಣಿಯರಿಗೆ ಮಾತ್ರವಲ್ಲದೇ, ಯುವತಿಯರಿಗೂ ಬಾಡಿಗೆ ತಾಯ್ತನದ ಮೂಲಕ ಮಗುವಿಗೆ ಜನ್ಮ ನೀಡಿ, ಮಗು ಮಾರಾಟ ಮಾಡಿ ಹಣ ಮಾಡಬಹುದು ಎಂದೂ ಆಮಿಷವೊಡ್ಡುತ್ತಿದ್ದರು ಎಂಬುದಾಗಿ ತನಿಖೆಯಲ್ಲಿ ತಿಳಿದು ಬಂದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.