ಬಿಜೆಪಿ ನುಡಿದಂತೆ ನಡೆಯುವ ಪಕ್ಷ ಅಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ
ಕೊಪ್ಪಳ, ನವೆಂಬರ್ 20 : ಬಿಜೆಪಿ ನುಡಿದಂತೆ ನಡೆಯುವ ಪಕ್ಷ ಅಲ್ಲ. ಆದ್ದರಿಂದ ಅವರ ಯಾವ ಭರವಸೆಗಳನ್ನು ಜನರು ನಂಬುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಸೋಮವಾರ ಕೊಪ್ಪಳದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವಿಧಾನಸಭೆ ಚುನಾವಣೆ ಎದುರಿಸುತ್ತಿರುವ ರಾಜ್ಯಗಳಲ್ಲಿ ಬಿಜೆಪಿಯವರು ಈಗ ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡುತ್ತಿದ್ದಾರೆ. ಬಿಜೆಪಿಯವರು ಬಹಳ ವರ್ಷಗಳಿಂದ ಮಧ್ಯಪ್ರದೇಶದಲ್ಲಿ ಅಧಿಕಾರದಲ್ಲಿದ್ದರೂ, ಯಾವ ಪ್ರಗತಿಯನ್ನೂ ಸಾಧಿಸಿಲ್ಲ. ಈಗ ಪ್ರಗತಿ ಸಾಧಿಸುವುದಾಗಿ ಭರವಸೆಗಳನ್ನು ನೀಡುತ್ತಿದ್ದಾರೆ. ಆದರೆ ಅವರ ಮಾತುಗಳನ್ನು ಜನರು ನಂಬುವುದಿಲ್ಲ ಎಂದರು.
ವಿದ್ಯುತ್ ಕಳ್ಳತನ ಎಸಗಿ ದಂಡ ಕಟ್ಟಿರುವ ಕುಮಾರಸ್ವಾಮಿಯವರಿಗೆ ನಮ್ಮನ್ನು ಆಕ್ಷೇಪಿಸಲು ಯಾವ ನೈತಿಕತೆಯೂ ಇಲ್ಲ. ಮಾಜಿ ಶಾಸಕ ಯತೀಂದ್ರ ಅವರು ದುಡ್ಡಿನ ವ್ಯವಹಾರದ ಬಗ್ಗೆ ಮಾತನಾಡಿದ್ದಾರೆ ಎಂಬುವುದಕ್ಕೆ ಅವರ ಬಳಿ ಏನಾದರೂ ಪುರಾವೆ ಇದೆಯೇ ಎಂದು ಪ್ರಶ್ನಿಸಿದರು.
ಯತೀಂದ್ರ ಅವರು ಸಿಎಸ್ಆರ್ ಫಂಡ್ ಬಗ್ಗೆ ಮಾತನಾಡಿದ್ದನ್ನು ವರ್ಗಾವಣೆ ಬಗ್ಗೆ ಮಾತನಾಡಿದ್ದಾರೆ ಎಂದು ಆರೋಪಿಸುತ್ತಾರೆ. ಕುಮಾರಸ್ವಾಮಿಯವರ ಕಾಲದಲ್ಲಿ ವರ್ಗಾವಣೆಗಳ ಮೂಲಕ ದುಡ್ಡು ಮಾಡಿರುವುದು ಜಗಜ್ಜಾಹೀರಾಗಿದೆ. ಅವರಿಗೆ ನಮ್ಮ ವಿರುದ್ದ ಆರೋಪಗಳನ್ನು ಮಾಡುವ ನೈತಿಕತೆ ಇಲ್ಲ ಎಂದರು.