ರೌಡಿ ಶೀಟರ್ ಗೆ ಮೈಸೂರು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ: ವಿವಾದದ ಬೆನ್ನಲ್ಲೇ ಪ್ರಶಸ್ತಿ ಹಿಂಪಡೆದ ಜಿಲ್ಲಾಡಳಿತ
ಮೈಸೂರು, ನ.22: ಸಮಾಜ ಸೇವೆ ಹೆಸರಿನಲ್ಲಿ ರೌಡಿ ಶೀಟರ್ ಒಬ್ಬರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗಿದೆ ಎಂಬ ವಿಚಾರ ವಿವಾದವಾಗುತ್ತಿದ್ದಂತೆ ಮೈಸೂರು ಜಿಲ್ಲಾಡಳಿತವು ಪ್ರಶಸ್ತಿಯನ್ನು ಹಿಂಪಡೆಯಲು ಮುಂದಾಗಿದೆ.
ಕಾಂಗ್ರೆಸ್ ಮುಖಂಡ ಅಶೋಕ್ ಎಂಬವರಿಗೆ ನವೆಂಬರ್ 1ರಂದು ಮೈಸೂರು ಜಿಲ್ಲಾಡಳಿತದ ವತಿಯಿಂದ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ತಶಸ್ತಿ ನೀಡಲಾಗಿತ್ತು. ಇದರ ಬೆನ್ನಲ್ಲೇ ರೌಡಿ ಶೀಟರ್ ರೊಬ್ಬರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗಿದೆ ಎಂಬ ಸುದ್ದಿ ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿದ್ದಂತೆ ಜಿಲ್ಲಾಡಳಿತ ಎಚ್ಚೆತ್ತುಕೊಂಡಿದೆ. ಈ ಕುರಿತು ಹೇಳಿಕೆ ನೀಡಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರು ಅಶೋಕ್ ರಿಗೆ ನೀಡಿರುವ ಪ್ರಶಸ್ತಿ ಹಿಂಪಡೆಯುವುದಾಗಿ ತಿಳಿಸಿದ್ದಾರೆ.
ಅಶೋಕ್ ಅವರ ಪುತ್ರ ನೇವಲ್ ಯುವ ಕಾಂಗ್ರೆಸ್ ಮುಖಂಡರಾಗಿದ್ದು, ಅವನ ಪುಂಡಾಟದಿಂದ ಅಶೋಕ್ ರೌಡಿ ಪಟ್ಟಿಗೆ ಸೇರಿದ್ದಾರೆ ಎನ್ನಲಾಗಿದ್ದು, ಲಷ್ಕರ್ ಪೊಲೀಸ್ ಠಾಣೆಯಲ್ಲಿ ಅಶೋಕ್ ಮೇಲೆ ರೌಡಿ ಶೀಟರ್ ತೆರೆಯಲಾಗಿದೆ ಎಂದು ತಿಳಿದು ಬಂದಿದೆ.
ಅಶೋಕ್ ಹೆಸರು ಕೊನೆ ಕ್ಷಣದಲ್ಲಿ ಪಟ್ಟಿಯಲ್ಲಿ ಸೇರಿಸಿದ್ದರಿಂದ ಅವರ ಪೂರ್ವಾಪರ ಪರಿಶೀಲಿಸಲು ಸಾಧ್ಯವಾಗಿರಲಿಲ್ಲ. ಹಾಗಾಗಿ ಅವರಿಗೆ ನೀಡಿರುವ ಪ್ರಶಸ್ತಿಯನ್ನು ಹಿಂಪಡೆಯುವುದಾಗಿ ಇದೀಗ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.