ಸರ್ಕಾರಿ ಗೌರವದೊಂದಿಗೆ ಖ್ಯಾತ ಸರೋದ್ ವಾದಕ ಪಂಡಿತ್ ರಾಜೀವ್ ತಾರಾನಾಥ್ ಅಂತ್ಯಕ್ರಿಯೆ
ಮೈಸೂರು: ಸಕಲ ಸರ್ಕಾರಿ ಗೌರವದೊಂದಿಗೆ ಖ್ಯಾತ ಸರೋದ್ ವಾದಕ ಪಂಡಿತ್ ರಾಜೀವ್ ತಾರಾನಾಥ್ ಅವರ ಅಂತ್ಯಕ್ರಿಯೆ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ವಿದ್ಯುತ್ ಚಿತಾಗಾರದಲ್ಲಿ ಬುಧವಾರ ಮಧ್ಯಾಹ್ನ ನೆರವೇರಿತು.
ಅನಾರೋಗ್ಯದಿಂದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರಾಜೀವ್ ತಾರಾನಾಥ್ ಅವರು ಮಂಗಳವಾರ ಸಂಜೆ ನಿಧನರಾದರು. ಬುಧವಾರ ಕುವೆಂಪುನಗರದ ಪಂಚಮಂತ್ರ ರಸ್ತೆಯಲ್ಲಿರುವ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು.
ಸಂಗೀತಗಾರರು, ಸ್ನೇಹಿತರು, ಲೇಖಕರು, ಹೋರಾಟಗಾರರು, ರಾಜಕಾರಣಿಗಳು ಅಂತಿಮ ದರ್ಶನ ಪಡೆದು ಗೌರವ ಸಲ್ಲಿಸಿದರು. ಮಧ್ಯಾಹ್ನ 12.40ರ ಸುಮಾರಿಗೆ ಪಾರ್ಥೀವ ಶರೀರವನ್ನು ಆಂಬ್ಯುಲೆನ್ಸ್ ಮೂಲಕ ಕೊಂಡೊಯ್ಯಲಾಯಿತು.
ಚಿತಾಗಾರದ ಆವರಣದಲ್ಲಿ ಪೊಲೀಸ್ ಸಿಬ್ಬಂದಿ ಮೂರು ಸುತ್ತು ಕುಶಾಲತೋಪು ಸಿಡಿಸಿದರು. ಪೊಲೀಸ್ ಬ್ಯಾಂಡ್ನಿಂದ ರಾಷ್ಟ್ರಗೀತೆ ನುಡಿಸಲಾಯಿತು. ಯಾವುದೇ ಧಾರ್ಮಿಕ ಕ್ರಿಯೆಗಳಿಲ್ಲದೇ ಅಂತ್ಯಕ್ರಿಯೆ ನೆರವೇರಿಸಲಾಯಿತು. ನೆರೆದಿದ್ದವರು ಮೇರು ಸಂಗೀತಗಾರನಿಗೆ ಕಂಬನಿಯ ವಿದಾಯ ಸಲ್ಲಿಸಿದರು.
ಅಂತಿಮ ದರ್ಶನ: ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಚಂದ್ರಶೇಖರ ಕಂಬಾರ, ಸಾಹಿತಿಗಳಾದ ದೇವನೂರ ಮಹಾದೇವ, ಡಾ.ರಹಮತ್ ತರೀಕೆರೆ, ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ, ಜಿಲ್ಲಾ ಪಂಚಾಯಿತಿ ಸಿಇಒ ಕೆ.ಎಂ.ಗಾಯಿತ್ರಿ ಮುಂತಾದವರು ಅಂತಿಮ ದರ್ಶನ ಪಡೆದರು.
ರಾಜೀವ್ ತಾರನಾಥ್ ಶತಮಾನದ ಪುರುಷ: ಹಿಂದೂಸ್ತಾನಿ ಗಾಯಕ ಉಸ್ತಾದ್ ಫಯಾಜ್ ಖಾನ್ ಕಂಬನಿ
ಸರೋದ್ ಮಾಂತ್ರಿಕ ಪಂಡಿತ್ ರಾಜೀವ್ ತಾರಾನಾಥ್ ಶತಮಾನದ ಪುರುಷ ಎಂದು ಹಿಂದೂಸ್ತಾನಿ ಗಾಯಕ ಉಸ್ತಾದ್ ಫಯಾಜ್ ಖಾನ್ ಕಂಬನಿ ಮಿಡಿದರು.
ಗುರುಗಳ ಅಗಲಿಕೆಯ ದುಃಖದ್ದಲ್ಲಿ ಅವರೊಂದಿಗಿನ ಒಡನಾಟವನ್ನು ಸ್ಮರಿಸಿದ ಅವರು, ಸಾಹಿತ್ಯ ಮತ್ತು ಸಂಗೀತದಲ್ಲಿ ವಿದ್ವತ್ ಮತ್ತು ಸಾಮಾಜಿಕ ಕಳಕಳಿಯ ರಾಜೀವ್ ತಾರಾನಾಥ್ರಂತಹ ಮನುಷ್ಯರನ್ನು ಈ ಶತಮಾನದೊಳಗೆ ಕಾಣುವುದು ಅಪರೂಪ ಎಂದರು.
ರಾಜೀವ್ ತಾರಾನಾಥ್ ಅವರು ವಿದ್ವಾಂಸರು ಮತ್ತು ಸರೋದ್ ಮಾಂತ್ರಿಕರು. ಅವರ ಅಗಲಿಕೆಯೂ ಶಿಷ್ಯ ಬಳಗಕ್ಕೆ ಅಘಾತ ಮತ್ತು ಸಂಗೀತ ಲೋಕಕ್ಕೆ ತುಂಬಲಾರದ ನಷ್ಟ. ದೊಡ್ಡ ಮನಸ್ಸು ಮತ್ತು ಮಾತೃಹೃದಯಿ ಎಂದು ನುಡಿದರು.
ದಿನದ 24 ಗಂಟೆಯೂ ಸಂಗೀತವೇ ಧ್ಯಾನವಾಗಿತ್ತು. ಶಿಷ್ಯರಿಗೆ ಕಲಿಸುವುದು ಬಹಳ. ಸಂಗೀತಗಾರರು ಅವರನ್ನು ಭೇಟಿ ಮಾಡಿದರೆ ವಿದ್ಯೆ ಕೊಟ್ಟು ಕಳಿಸುತ್ತಿದ್ದರು. ಯಾರಿಂದಲೂ ಏನನ್ನು ತೆಗೆದುಕೊಳ್ಳಲಿಲ್ಲ. ಇನ್ನೊಬ್ಬರಿಗಾಗಿ ಮಿಡಿಯುವ ಕಲಾವಿದ ಅಪರೂಪ. ನಮ್ಮ ಕ್ಷೇತ್ರ ಬಡವಾಗಿದೆ.
ನನ್ನನ್ನು ಮಗನೆಂದು ಕರೆಯುತ್ತಿದ್ದಾರೆ. ಅವರ ನಿಧನದಿಂದ ಅನಾಥ ಪ್ರಜ್ಞೆ ಕಾಡುತ್ತಿದೆ. ದುಃಖದ ಸನ್ನಿವೇಶ. ಸಂಗೀತ ಕ್ಷೇತ್ರ ಬಡವಾಯಿತು ಎಂದು ಕಂಬನಿಗೆರೆದರು.
ಪಂಡಿತ್ ರಾಜೀವ್ ತಾರಾನಾಥ್ ಅವರ ಅಗಲಿಕೆಯಿಂದ ಜಾತ್ಯಾತೀತ ಕೊಂಡಿ ಕಳಚಿತು ಎಂದು ಲೇಖಕ ಡಾ.ರಹಮತ್ ತರಿಕೇರೆ ಶೋಕ ವ್ಯಕ್ತಪಡಿಸಿದರು.
ಅಂತಿಮ ದರ್ಶನ ಪಡೆದವರು: ಕನ್ನಡ ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನ ಸ್ವಾಮಿ, ಸಹಾಯಕ ನಿರ್ದೇಶಕ ಡಾ.ಎಂ.ಡಿ.ಸುದರ್ಶನ್, ದೂರದರ್ಶನ ನಿವೃತ್ತ ನಿರ್ದೇಶಕ ಬಸವರಾಜು, ನಿವೃತ್ತ ಪ್ರಾಧ್ಯಾಪಕ ನಾರಾಯಣ ಶೆಟ್ಟಿ, ಜಯಂತ್ ಕಾಯ್ಕಿಣಿ, ಜಿ.ಬಿ.ಬಸವರಾಜು, ಜಯಶಂಕರ್, ಪ್ರೊ.ಎನ್.ಎಸ್. ರಂಗರಾಜು, ಸವಿತಾ ಪ. ಮಲ್ಲೇಶ್, ಮಾಜಿ ಶಾಸಕ ಎಲ್.ನಾಗೇಂದ್ರ, ನಿವೃತ್ತ ಪೊಲೀಸ್ ಆಯುಕ್ತ ಸಿ.ಚಂದ್ರಶೇಖರ್.
ನ.ರತ್ನಾ, ರಾಮಕೃಷ್ಣ, ಡಿ.ಎ.ಶಂಕರ್, ಸಚಿನ್ ಹಂಪಿ ಮನೆ, ಕೃಷ್ಞ ಮನೋಹಳ್ಳಿ, ಗೋಪಿನಾಥ್, ವಿದುಷಿ ಕೃಪಾ ಫಡ್ಕೆ, ಶಶಿಧರ್, ಪ್ರೊ.ಕಾಳಚೆನ್ನೇಗೌಡ, ನಾ.ದಿವಾಕರ, ಓಂಕಾರ್, ಚುಕ್ಕಿ ನಂಜುಂಡಸ್ವಾಮಿ, ಪ್ರೊ.ಮುಜಾಫರ್ ಅಸಾದಿ, ಮೊರಬದ ಮಲ್ಲಿಕಾರ್ಜುನ, ಬಿ.ಎಂ. ರಾಮಚಂದ್ರ, ವಿಕ್ರಮ್ ಚದುರಂಗ, ಚಿನ್ನಪ್ಪ, ಕೆ.ವಿ.ಮಲ್ಲೇಶ್, ಅಬ್ದುಲ್ ರಶೀದ್, ಹಿರಿಯ ರಂಗಕರ್ಮಿ ಸಿ.ಬಸವಲಿಂಗಯ್ಯ, ಡಾ.ವಿಜಯ, ಎಚ್.ಜನಾರ್ಧನ್, ಡಾ.ಎಸ್.ತುಕಾರಾಮ್, ರಾಜಶೇಖರ್ ಕದಂಬ, ಒಡನಾಡಿಯ ಸ್ಟ್ಯಾನ್ಲಿ, ಪರಶು, ಸ್ನೇಕ್ ಶ್ಯಾಮ್, ಎಸ್ಬಿಎಂ ಮಂಜು, ಅಭಿರುಚಿ ಗಣೇಶ್, ನಿಂಗಣ್ಣ ಚಿತ್ತಣ್ಣನವರ್, ಕೆ.ಆರ್.ಗೋಪಾಲಕೃಷ್ಣ, ದೀಪಕ್ ಮೈಸೂರು, ಲೋಕೇಶ್ ಮೊಸಳೆ, ಗಣೇಶ ಅಮೀನಗಡ ಮುಂತಾದವರು ಅಂತಿಮ ದರ್ಶನ ಪಡೆದರು.
ರಾಜೀವ್ ತಾರಾನಾಥ್ ನನ್ನ ಗುರು: ಡಾ.ಚಂದ್ರಶೇಖರ ಕಂಬಾರ
ಪಂಡಿತ್ ರಾಜೀವ್ ತಾರಾನಾಥ್ ನನ್ನ ಗುರು ಎಂದು ನುಡಿದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಲೇಖಕ ಡಾ.ಚಂದ್ರಶೇಖರ ಕಂಬಾರ ಗದ್ಗಿತರಾಗಿ ಕಣ್ಣೀರಿಟ್ಟರು. ರಾಜೀವ್ ತಾರಾನಾಥರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಗುರು ನಿಧನರಾದದ್ದು ಬಹಳ ದುಃಖ ಇದೆ ಎಂದರು.
ರಾಜೀವ್ ತಾರಾನಾಥ್ ನಮ್ಮ ಕಾಲದ ಎಲ್ಲ ನವ್ಯರಿಗಿಂತ ಮುಂದೋಗಿ ಯೋಚನೆ ಮಾಡುತ್ತಿದ್ದರು. ನಮ್ಮನ್ನು ತಿದ್ದುತಿದ್ದರು. ಅವರ ವಿಚಾರಗಳನ್ನು ನಾವು ಒಪ್ಪಿಕೊಂಡೆವು. ರಾಜೀವ್ ಬಿತ್ತದ್ದು ನಿಜವಾದ ನವ್ಯತೆ. ಅದನ್ನು ಆಚರಿಸಿದೆವು. ಅದನ್ನು ಅನುಸರಿಸಿದ ನಾನು ಉಳಿದವರಿಗಿಂತ ಭಿನ್ನವಾಗಿ ಬೆಳೆದೆ ಎಂದು ನುಡಿದರು.