ಹಗರಣಗಳ ಕುರಿತು ಮೂರು ದಿನಗಳಿಂದ ಸದನದಲ್ಲಿ ಕಾವೇರಿದ ಚರ್ಚೆ, ವಾಗ್ವಾದ..!
ಬೆಂಗಳೂರು : ಮೂರು ದಿನಗಳಿಂದ ಹಗರಣಗಳ ಕುರಿತು ಪದೇ ಪದೇ ಆಡಳಿತ, ಪ್ರತಿಪಕ್ಷಗಳ ನಡುವೆ ವಿಧಾನಸಭೆಯಲ್ಲಿ ಕಾವೇರಿದ ಚರ್ಚೆ, ವಾಗ್ವಾದ ಮುಂದುವರೆದಿದೆ.
ಗುರುವಾರ ವಿಧಾನಸಭೆ ಕಲಾಪದಲ್ಲಿ ಪ್ರತಿಪಕ್ಷದ ಸದಸ್ಯರಾದ ಬಸನಗೌಡ ಪಾಟೀಲ್ ಯತ್ನಾಳ್, ಅರವಿಂದ ಬೆಲ್ಲದ್ ಸೇರಿದಂತೆ ಇತರರು ಚರ್ಚೆಯಲ್ಲಿ ಭಾಗಿಯಾಗಿ ಸರಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ಆಪಾದಿಸಿ ಆಕ್ರೋಶ ಹೊರಹಾಕಿದರೆ, ಇದಕ್ಕೆ ಪ್ರತಿಯಾಗಿ ಸಚಿವರಾದ ಪ್ರಿಯಾಂಕ್ ಖರ್ಗೆ, ಡಾ. ಮಹದೇವಪ್ಪ, ದಿನೇಶ್ ಗುಂಡೂರಾವ್, ಸದಸ್ಯರಾದ ನರೇಂದ್ರಸ್ವಾಮಿ, ಪ್ರಕಾಶ್ ಕೋಳಿವಾಡ ಸೇರಿದಂತೆ ಪ್ರಮುಖರು ವಿಪಕ್ಷ ಸದಸ್ಯರ ಟೀಕೆಗಳಿಗೆ ಉತ್ತರಿಸಿ ತಿರುಗೇಟು ನೀಡಿದರು.
ಇದೇ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಬಿಜೆಪಿ ಸದಸ್ಯರು ಶೇಕಡ ನೂರಷ್ಟು ಕಮಿಷನ್ ಆರೋಪ ಮಾಡಿದರು. ಇದಕ್ಕೆ ಕೆಂಡಾಮಂಡಲವಾದ ಮುಖ್ಯಮಂತ್ರಿ ತಮ್ಮ ಅವಧಿಯ ಹಗರಣ ಹೊರಬರಲಿದೆ ಎಂದು ಎಚ್ಚರಿಸಿದಾಗ ಸದನಲ್ಲಿ ಗದ್ದಲ ಕಂಡಿತು.
ಇನ್ನೊಂದೆಡೆ, ದಲಿತ ಪದ ಬಳಕೆ ಮಾಡುವಂತಿಲ್ಲ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರು ಎಂದು ಉಲ್ಲೇಖಿಸಿ ಎಂದು ಆಡಳಿತರೂಢ ಸದಸ್ಯರು ಸಲಹೆ ನೀಡಿದರು. ಇದಕ್ಕೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್, ಅಶ್ವತ್ ನಾರಾಯಣ್, ಸುರೇಶ್ ಕುಮಾರ್ ಮತ್ತಿತರರು ಎದ್ದು ನಿಂತು ಅಹಿಂದ ಬಳಕೆ ಮಾಡಿದ್ದು ನೀವೆ ಅಲ್ಲವೇ ಎಂದು ಉತ್ತರಿಸಿದರು.
ಸಿದ್ದರಾಮಯ್ಯ ಪ್ರಸ್ತಾಪಿಸಿ, ಬಿಜೆಪಿಯವರು ಪದೇ ಪದೇ ಇದೇ ಪದ ಬಳಕೆ ಮಾಡುತ್ತಿರುವುದನ್ನು ನೋಡಿದರೆ ಇವರಿಗೆ ದಲಿತರ ಬಗ್ಗೆ ಕಾಳಜಿ ಇಲ್ಲ ಎಂದರು. ಆಗ ಅಶ್ವಥ್ ನಾರಾಯಣ್, ಕಾಂಗ್ರೆಸ್ ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿದೆ ಎಂದರು.
ಇದಕ್ಕೆ ಮತ್ತೆ ಸಿದ್ದರಾಮಯ್ಯ, ನಿಮ್ಮ ಹಗರಣಗಳು ಏನೇನಿವೆ ಎಂದು ತೆಗೆಯಬೇಕಾ? ಎಂದು ಹೇಳಿದಾಗ, ಅಶ್ವತ್ ನಾರಾಯಣ್ ಏರು ಧ್ವನಿಯಲ್ಲಿ ‘ಪೇ ಸಿಎಂ’, ಶೇ.100ರಷ್ಟು ಸಿಎಂ ಏನು ಬೆದರಿಕೆ ಹಾಕುತ್ತೀರಾ ತೆಗೆಯಿರಿ ಎಂದರು.
ಇದಕ್ಕೆ ಸಿಟ್ಟಾಗಿ ಉತ್ತರಿಸಿದ ಸಿದ್ದರಾಮಯ್ಯ, ಶೇ.40ರಷ್ಟು ಕಮಿಷನ್ ಪಡೆದ ನಿಮಿಂದ ನಾವು ಭ್ರಷ್ಟಚಾರದ ವಿರುದ್ಧ ಪಾಠ ಕಲಿಯಬೇಕಾ? ಇವರ ಭ್ರಷ್ಟಚಾರ ಬಯಲಾಗಿದೆ. ಇವರಿಗೆ ನಾಚಿಕೆಯಾಗಬೇಕು ಎಂದು ಹೇಳಿದರು. ಈ ಸಂದರ್ಭದಲ್ಲಿ ಆಡಳಿತ ಮತ್ತು ಪ್ರತಿಪಕ್ಷದ ಶಾಸಕರ ನಡುವೆ ಏರಿದ ಧ್ವನಿಯಲ್ಲಿ ಕಾವೇರಿದ ಚರ್ಚೆ, ಗದ್ದಲ ಜರುಗಿತು.
ಆನಂತರವೂ, ಸಿದ್ದರಾಮಯ್ಯ ಮಾತನಾಡಿ, ಕೆಪಿಎಸ್ಸಿ ನೇಮಕಾತಿಯಲ್ಲಿ ಏನಾಗಿದೆ ಎಲ್ಲರಿಗೂ ಗೊತ್ತಿದೆ. ಭೋವಿ ಅಭಿವೃದ್ಧಿ ನಿಗಮ, ದೇವರಾಜ ಅರಸು ಟ್ರಕ್ ಟರ್ಮಿನಲ್‍ನಲ್ಲಿ ನಡೆದಿರುವುದರ ಬಗ್ಗೆ ಬಿಜೆಪಿಯವರು ಬಾಯಿ ಬಿಡುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು. ಇದಕ್ಕೂ ಅಶ್ವಥ್ ನಾರಾಯಣ್ ಪ್ರತಿಕ್ರಿಯಿಸಿ, ಈ ಸರಕಾರಕ್ಕೆ ಲೂಟಿ ಹೊಡೆಯುವುದೇ ಕೆಲಸವಾಗಿದೆ ಎಂದು ಆಪಾದಿಸಿದರು.
ನಾಚಿಕೆ ಇಲ್ಲವೇ: ಇದೇ ವೇಳೆ ಅಶ್ವಥ್ ನಾರಾಯಣ್, ಸಚಿವ ದಿನೇಶ್ ಗುಂಡುರಾವ್ ನಡುವೆ ಮಾತಿನ ಚಕಮಕಿ ನಡೆಯಿತು. ಪರಸ್ಪರ ನಾಚಿಕೆಯಾಗುವುದಿಲ್ಲವೇ ಎಂದು ಟೀಕಿಸಿಕೊಂಡರು. ಆಗ ಬಿಜೆಪಿಯ ಕೆಲ ಶಾಸಕರು ಹದ್ದು ಮೀರಿದ ವರ್ತನೆ ಪ್ರದರ್ಶಿಸುತ್ತಿದ್ದು, ಈ ಕೂಡಲೇ ಅವರನ್ನು ಸದನದಿಂದ ಅಮಾನತು ಮಾಡಿ ಎಂದು ಆಡಳಿತರೂಢ ಸದಸ್ಯರು ಆಗ್ರಹಿಸಿದರು.