ನಂದಿನಿ ಹಾಲಿನ ದರ ಏರಿಕೆ : ಸಿಎಂ ಪರೋಕ್ಷ ಸುಳಿವು
ಬೆಂಗಳೂರು: ‘ನಂದಿನಿ ಹಾಲಿನ ದರವನ್ನು ಹೆಚ್ಚಳ ಮಾಡುವ ಸಂಬಂಧ ಕೆಎಂಎಫ್ ಅವರೊಂದಿಗೆ ಚರ್ಚೆ ಮಾಡುತ್ತೇವೆ. ಆ ಹೆಚ್ಚಳ ಮಾಡಿದ ಮೊತ್ತವನ್ನು ಹೈನುಗಾರಿಕೆ ಮಾಡುವ ರೈತರಿಗೆ ನೀಡುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪರೋಕ್ಷವಾಗಿ ನಂದಿನಿ ಹಾಲಿನ ದರ ಏರಿಕೆ ಮುನ್ಸೂಚನೆ ನೀಡಿದ್ದಾರೆ.
ಶುಕ್ರವಾರ ಮಾಗಡಿಯಲ್ಲಿ ಏರ್ಪಡಿಸಿದ್ದ ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನೆ, ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ‘ನಂದಿನಿ ಹಾಲಿನ ದರ ಹೆಚ್ಚಳ ಸಂಬಂಧ ಕರ್ನಾಟಕ ಹಾಲು ಉತ್ಪಾದಕರ ಮಹಾ ಮಂಡಳಿ(ಕೆಎಂಎಫ್) ಸಭೆ ಕರೆದು ಸಮಾಲೋಚನೆ ನಡೆಸಿ ಹಾಲಿನ ದರ ಹೆಚ್ಚಳ ಮಾಡೋಣ’ ಎಂದು ತಿಳಿಸಿದರು.
ಇಲ್ಲಿ ನೆರೆದಿರುವ ನೀವೆಲ್ಲ ರೈತರ ಮಕ್ಕಳು. ಲೀಟರ್ ನಂದಿನಿ ಹಾಲಿಗೆ 3 ರೂ.ಹೆಚ್ಚಳ ಮಾಡಿದರೆ ವಿರೋಧ ಪಕ್ಷದವರು ಬಾಯಿಬಡಿದುಕೊಳ್ಳುತ್ತಾರೆ. ‘ನಾವು ರೈತರ ಮಕ್ಕಳು, ರೈತರು ಮಕ್ಕಳು’ ಎಂದು ಹೇಳಿಕೊಳ್ಳುತ್ತಾರೆ. ಆದರೆ, ರೈತರ ಮಕ್ಕಳಿಗೆ ನೀವೇನಾದ್ರೂ ಕೊಟ್ಟಿದ್ದೀರಾ? ಏನೂ ಮಾಡದೇ ನಾವು ರೈತರ ಮಕ್ಕಳು ಎಂದು ಹೇಳುತ್ತಾರೆಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.
ಹಾಲಿಗೆ 5 ರೂ.ಪ್ರೋತ್ಸಾಹ ಧನ ಘೋಷಿಸಿದ್ದು ನಮ್ಮ ಸರಕಾರ. ಕ್ಷೀರಭಾಗ್ಯ ಯೋಜನೆ ಜಾರಿಗೆ ತಂದದ್ದು ನಮ್ಮ ಸರಕಾರ. ಈ ರೀತಿ ರೈತರಿಗೆ ನಾವು ನೆರವು ನೀಡಿದ್ದೇವೆ ಎಂದು ಮುಖ್ಯಮಂತ್ರಿ ಹೇಳಿದರು.