ʼಖಾಸಗಿತನದ ಹಕ್ಕುʼ ಪ್ರಕರಣದ ಪ್ರಮುಖ ಅರ್ಜಿದಾರ, ನ್ಯಾ.ಕೆ.ಎಸ್.ಪುಟ್ಟಸ್ವಾಮಿ ನಿಧನ
ನ್ಯಾ.ಕೆ.ಎಸ್.ಪುಟ್ಟಸ್ವಾಮಿ(PC: livelaw.in)
ಬೆಂಗಳೂರು : ಕರ್ನಾಟಕ ಹೈಕೋರ್ಟ್ನ ಮಾಜಿ ನ್ಯಾಯಾಧೀಶ, ʼಖಾಸಗಿತನದ ಹಕ್ಕುʼ ಕುರಿತ ಪ್ರಕರಣದ ಪ್ರಮುಖ ಅರ್ಜಿದಾರ ನ್ಯಾ.ಕೆ.ಎಸ್.ಪುಟ್ಟಸ್ವಾಮಿ ನಿಧನರಾಗಿದ್ದಾರೆ.
98ನೇ ವಯಸ್ಸಿನಲ್ಲಿ ನ್ಯಾಯಮೂರ್ತಿ ಕೆ.ಎಸ್.ಪುಟ್ಟಸ್ವಾಮಿ ನಿಧನರಾಗಿದ್ದಾರೆ. ನ್ಯಾಯಮೂರ್ತಿ ಪುಟ್ಟಸ್ವಾಮಿ ಅವರು 1952ರಲ್ಲಿ ವಕೀಲರಾಗಿ ನೋಂದಾಯಿಸಿಕೊಂಡಿದ್ದು, 1977ರಲ್ಲಿ ಕರ್ನಾಟಕ ಹೈಕೋರ್ಟ್ನಲ್ಲಿ ನ್ಯಾಯಾಧೀಶರಾಗಿ ನೇಮಕಗೊಂಡಿದ್ದರು. 1986 ರಲ್ಲಿ ನಿವೃತ್ತರಾಗುವವರೆಗೂ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿದ್ದ ಪುಟ್ಟಸ್ವಾಮಿ, ಬೆಂಗಳೂರಿನ ಕೇಂದ್ರೀಯ ಆಡಳಿತಾತ್ಮಕ ನ್ಯಾಯಮಂಡಳಿಯ ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.
2012ರಲ್ಲಿ ನ್ಯಾ.ಪುಟ್ಟಸ್ವಾಮಿ ಸುಪ್ರೀಂ ಕೋರ್ಟ್ನಲ್ಲಿ ಆಧಾರ್ ಯೋಜನೆಯ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ರಿಟ್ ಅರ್ಜಿ ಸಲ್ಲಿಸಿದ್ದರು. 21ನೇ ವಿಧಿಯ ಅಡಿಯಲ್ಲಿ ʼಖಾಸಗಿತನದ ಹಕ್ಕʼನ್ನು ಸುಪ್ರೀಂಕೋರ್ಟ್ ʼಮೂಲಭೂತ ಹಕ್ಕುʼ ಎಂದು ಹೇಳಿತ್ತು. ನ್ಯಾ.ಕೆ.ಎಸ್.ಪುಟ್ಟಸ್ವಾಮಿ 'ಖಾಸಗಿತನದ ಹಕ್ಕು' ಕುರಿತ ಪ್ರಮುಖ ಅರ್ಜಿದಾರರಾಗಿದ್ದರು.