ಮುಂದಿನ ಪಿಎಸ್ಐ ಪರೀಕ್ಷೆ ಕೆಇಎಗೆ ವಹಿಸಲು ಚಿಂತನೆ: ಗೃಹ ಸಚಿವ ಡಾ. ಜಿ.ಪರಮೇಶ್ವರ
ಬೆಂಗಳೂರು (ಜ.24):- ಪಿಎಸ್ಐ ಮರು ಪರೀಕ್ಷೆ ಸುಗಮವಾಗಿ ನಡೆದಿದ್ದು, ಆದಷ್ಟು ಬೇಗ ಮೌಲ್ಯಮಾಪನ ಮುಗಿಸಿ ಆಯ್ಕೆ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ ಅವರು ಹೇಳಿದ್ದಾರೆ.
ಬುಧವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಯಾವುದೇ ರೀತಿಯ ಅಹಿತಕರ ಘಟನೆ ನಡೆದಿಲ್ಲ. ಬ್ಲೂಟೂತ್ ಎಲೆಕ್ಟ್ರಾನಿಕ್ ಉಪಕರಣಗಳನ್ನು ತರಲು ಸಾಧ್ಯವಾಗಿಲ್ಲ. ಇದಕ್ಕೆ ಯಾರು ಸಹ ಪ್ರಯತ್ನಿಸಿಲ್ಲ ಎಂದು ಭಾವಿಸಿದ್ದೇನೆ. 54 ಸಾವಿರ ಅಭ್ಯರ್ಥಿಗಳು ಪರೀಕ್ಷೆ ಬರೆಯಬೇಕಿತ್ತು. ಕೆಲವರು ಗೈರಾಗಿದ್ದಾರೆ. ಆದಷ್ಟು ಬೇಗ ಮೌಲ್ಯಮಾಪನವನ್ನು ಮುಗಿಸಿ, ಆಯ್ಕೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಗುವುದು. ಯಾವುದೇ ರೀತಿಯ ಗೊಂದಲಗಳಾಗದಂತೆ ಅಚ್ಚುಕಟ್ಟಾಗಿ ಪರೀಕ್ಷೆ ನಡೆಸಿದ ಕೆಇಎ ನಿರ್ದೇಶಕಿ ರಮ್ಯಾ ಅವರಿಗೆ ಧನ್ಯವಾದ. ಮುಂದಿನ ನೇಮಕಾತಿಗಳಲ್ಲಿಯೂ ಇದೇ ರೀತಿ ಪರೀಕ್ಷೆ ನಡೆಸಿಕೊಡಲಿ ಎಂದರು.
ಮುಂದಿನ ಹಂತದಲ್ಲಿ 403 ಹುದ್ದೆಗಳ ನೇಮಕಾತಿ ಪರೀಕ್ಷೆ ನಡೆಸಲಾಗುವುದು. ಅದನ್ನು ಸಹ ಕೆಇಎ ಅವರಿಗೆ ವಹಿಸಲಾಗುವುದು. ನೋಟಿಫಿಕೇಷನ್ ಆಗಿ, ಫಿಸಿಕಲ್ ಟೆಸ್ಟ್ ಸಹ ಮುಗಿದಿದೆ. ಪರೀಕ್ಷೆ ಬಾಕಿ ಇದೆ. ಈ ಎರಡು ನೇಮಕಾತಿ ಪ್ರಕ್ರಿಯೆ ಮುಗಿದರೆ ಇಲಾಖೆಗೆ ಒಟ್ಟು 948 ಪಿಎಸ್ಐ ಸಿಗುತ್ತಾರೆ ಎಂದರು.
ಈ ಎರಡು ನೇಮಕಾತಿ ಪ್ರಕ್ರಿಯೆ ಮುಗಿದ ನಂತರ 660 ಪಿಎಸ್ಐ ಹುದ್ದೆಗಳಿಗೆ ನೇಮಕಾತಿಗೆ ನೋಟಿಫಿಕೇಷನ್ ಹೊರಡಿಸಲಾಗುವುದು. ಈಗಾಗಲೇ ಆರ್ಥಿಕ ಇಲಾಖೆಯ ಅನುಮೋದನೆ ದೊರೆತಿದ್ದು, ಹಂತ ಹಂತವಾಗಿ ನೇಮಕಾತಿ ಮಾಡಿಕೊಳ್ಳಲಾಗುವುದು. ಮುಂದಿನ ಎರಡು ವರ್ಷದೊಳಗೆ ಈ ಎಲ್ಲ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಮುಗಿಸಲಾಗುವುದು ಎಂದು ತಿಳಿಸಿದರು.