ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ: ಓರ್ವ ಶಂಕಿತನನ್ನು ಬಂಧಿಸಿದ ಎನ್‌ಐಎ
ಬೆಂಗಳೂರು: ನಗರದ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಪೋಟ ಪ್ರಕರಣ ಸಂಬಂಧ ಶಂಕಿತ ಆರೋಪಿಯೊಬ್ಬನನ್ನು ರಾಷ್ಟ್ರೀಯ ತನಿಖಾ ದಳದ(ಎನ್‌ಐಎ) ಅಧಿಕಾರಿಗಳು ಗುರುವಾರ ಬಂಧಿಸಿರುವುದು ವರದಿಯಾಗಿದೆ.
ಮುಜಾಮಿಲ್ ಶರೀಫ್ ಎಂಬುವನನ್ನು ಬಂಧಿತ ಆರೋಪಿ ಎಂದು ಗುರುತಿಸಲಾಗಿದ್ದು, ಮಾ.1ರಂದು ನಡೆದಿದ್ದ ಬಾಂಬ್ ಸ್ಪೋಟ ಪ್ರಕರಣದ ಸಂಚಿನಲ್ಲಿ ಮುಜಾಮಿಲ್ ಶರೀಫ್ ಭಾಗಿಯಾಗಿದ್ದ. ಬಾಂಬ್ ಇರಿಸಿದ್ದಾನೆ ಎನ್ನಲಾದ ಮುಸಾವೀರ್ ಹುಸೇನ್ ಶಾಜೀಬ್ ಹಾಗೂ ಅಬ್ದುಲ್ ಮಥೀನ್ ತಾಹಾಗೆ ಸಹಕಾರ ನೀಡಿದ್ದ ಎಂದು ಎನ್‌ಐಎ ಮೂಲಗಳು ಹೇಳಿವೆ.
ಕರ್ನಾಟಕದ 12, ತಮಿಳುನಾಡಿನ 5 ಮತ್ತು ಉತ್ತರ ಪ್ರದೇಶದ 1 ಸೇರಿದಂತೆ 18 ಪ್ರಮುಖ ಸ್ಥಳಗಳ ಮೇಲೆ ದಾಳಿ ಮಾಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪುರಾವೆಗಳನ್ನು ಸಂಗ್ರಹಿಸಲಾಗಿದೆ. ಮುಜಾಮಿಲ್ ಶರೀಫ್, ಪ್ರಮುಖ ಶಂಕಿತರಿಗೆ ಸಹಾಯ ಮಾಡಿರುವುದು ಇದುವರೆಗಿನ ತನಿಖೆಯಿಂದ ಗೊತ್ತಾಗಿದೆ. ಹೀಗಾಗಿ, ಈತನನ್ನು ಬಂಧಿಸಲಾಗಿದೆ. ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗಾಗಿ ವಶಕ್ಕೆ ಪಡೆಯಲಾಗುವುದು ಎಂದು ಎನ್‌ಐಎ ಮೂಲಗಳು ತಿಳಿಸಿವೆ.
Next Story