ಹುಲಿ ಉಗುರು ಧರಿಸಿದ್ದ ಆರೋಪ: ಸ್ಪಷ್ಟನೆ ನೀಡಿದ ನಿಖಿಲ್ ಕುಮಾರಸ್ವಾಮಿ
ನಿಖಿಲ್ ಕುಮಾರಸ್ವಾಮಿ (Photo:Twitter)
ಬೆಂಗಳೂರು: ವನ್ಯಜೀವಿ ಸಂರಕ್ಷಣಾ ಕಾಯ್ದೆ ಉಲ್ಲಂಘಿಸಿ ಬಿಜೆಪಿ ರಾಜ್ಯಸಭಾ ಸದಸ್ಯ ಜಗ್ಗೇಶ್, ನಟರಾದ ದರ್ಶನ್, ರಾಕ್ಲೈನ್ ವೆಂಕಟೇಶ್, ನಿಖಿಲ್ ಕುಮಾರಸ್ವಾಮಿ, ಉಪೇಂದ್ರ ಸೇರಿದಂತೆ ಗಣ್ಯ ವ್ಯಕ್ತಿಗಳೇ ‘ಹುಲಿ ಉಗುರು’ ಬಳಕೆ ಮಾಡುತ್ತಿರುವ ಆರೋಪ ಬೆನ್ನಲ್ಲೇ ಅರಣ್ಯಾಧಿಕಾರಿಗಳು ಸಂಬಂಧಿಸಿದವರ ನಿವಾಸಗಳ ಮೇಲೆ ದಾಳಿ ನಡೆಸಿ ಶೋಧ ಕಾರ್ಯ ಕೈಗೊಂಡರು.
ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ವಿವಾಹದ ಸಂದರ್ಭದಲ್ಲಿ ಹುಲಿ ಉಗುರಿನ ಪೆಂಡೆಂಟ್ ಇರುವ ಸರ ಧರಿಸಿದ್ದರು ಎಂಬ ಸುದ್ದಿ ಬೆನ್ನಲ್ಲೇ ಸ್ಪಷ್ಟನೆ ನೀಡಿರುವ ಅವರು, ಇದು ಸತ್ಯಕ್ಕೆ ದೂರ. ವನ್ಯಜೀವಿ ಸಂರಕ್ಷಣಾ ಕಾಯ್ದೆ, ಅದರ ಗಂಭೀರತೆ ಬಗ್ಗೆ ನನಗೆ ಖಂಡಿತಾ ಅರಿವಿದೆ ಎಂದು ಹೇಳಿದ್ದಾರೆ.
ನಾನು ಧರಿಸಿದ್ದ ಹುಲಿ ಉಗುರು ಮಾದರಿಯ ಪೆಂಡೆಂಟ್ ಕೃತಕವಾದದ್ದೇ ಹೊರತು ನೈಜವಾದುದ್ದಲ್ಲ. ಅದನ್ನು ನನ್ನ ಮದುವೆ ಸಮಯದಲ್ಲಿ ಉಡುಗೊರೆ ನೀಡಿದ್ದು. ಅದು ಈಗಲೂ ನನ್ನ ಬಳಿ ಇದೆ. ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲಿಸಬಹುದು. ದಯಮಾಡಿ ಯಾರೂ ಸತ್ಯಕ್ಕೆ ದೂರವಾದ ಸುದ್ದಿಗಳನ್ನು ಪ್ರಸಾರ ಮಾಡಬಾರದು ಎಂದು ವಿನಂತಿ ಮಾಡಿಕೊಳ್ಳುತ್ತೇನೆ ಎಂದು ಅವರು ಉಲ್ಲೇಖಿಸಿದ್ದಾರೆ.
ಇತ್ತೀಚಿಗೆ ಬಂಧನಕ್ಕೊಳಗಾದ ವರ್ತೂರ್ ಸಂತೋಷ್ ಮಾತ್ರವಲ್ಲದೆ, ನಟರಾದ ದರ್ಶನ್, ಜಗ್ಗೇಶ್, ನಿಖಿಲ್ ಕುಮಾರಸ್ವಾಮಿ, ಉಪೇಂದ್ರ, ರಾಕ್ಲೈನ್ ವೆಂಕಟೇಶ್ ಸೇರಿದಂತೆ ಹಲವು ನಟರು ಹಾಗೂ ಕುಣಿಗಲ್ ತಾಲೂಕಿನ ಬಿದನಗೆರೆ ಸತ್ಯ ಶನೇಶ್ವರ ಸ್ವಾಮಿ ದೇಗುಲ ಪ್ರಧಾನ ಅರ್ಚಕ ಧನಂಜಯ ಸ್ವಾಮಿ ಸೇರಿದಂತೆ ಕೆಲ ಸ್ವಾಮೀಜಿಗಳು ಹುಲಿ ಉಗುರಿನ ಲಾಕೆಟ್ ಧರಿಸಿದ್ದಾರೆ ಎನ್ನಲಾದ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ಜತೆಗೆ, ಇವರೆಲ್ಲರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ವಿವಿಧ ಸಂಘಟನೆಗಳು, ಸಾರ್ವಜನಿಕರು ಆಗ್ರಹಿಸಿದ್ದರು.
ಜೆಪಿ ನಗರದ ನಿಖಿಲ್ ಕುಮಾರಸ್ವಾಮಿ ನಿವಾಸಕ್ಕೆ ನೋಟೀಸ್ ನೀಡಲು ಬಂದ ನಾಲ್ಕು ಜನ ಅಧಿಕಾರಿಗಳ ತಂಡ, ನಿಖಿಲ್ ಮನೆಯಲ್ಲಿ ಇಲ್ಲದ ಕಾರಣ ವಾಪಸ್ ತೆರಳಿದ್ದಾರೆ.
ಜಗ್ಗೇಶ್ಗೆ ಸಂಕಷ್ಟ..?
ಖಾಸಗಿ ಮಾಧ್ಯಮವೊಂದರ ಸಂದರ್ಶನದಲ್ಲಿ ಮಾತಾಡಿದ್ದ ನಟ ಜಗ್ಗೇಶ್ ನನ್ನ ಬಳಿ ಹುಲಿ ಉಗುರಿನ ಲಾಕೆಟ್ ಇದೆ ಎಂದು ಹೇಳಿದ್ದಾರೆ. ನನಗೆ 20 ವರ್ಷ ತುಂಬಿದಾಗ ಅಮ್ಮ ನನಗಾಗಿ ಈ ಲಾಕೆಟ್ ನೀಡಿದ್ದರು. ಮಗ ಹುಲಿ ಇದ್ದಾಂಗೆ ಇರಬೇಕು ಎಂದು ಅಮ್ಮ ಈ ಲಾಕೆಟ್ನ ಹಾಕಿದ್ದರು ಎಂದು ಜಗ್ಗೇಶ್ ಹೇಳಿದ್ದರು. ಸದ್ಯ ಇದನ್ನೆ ಆಧಾರವಾಗಿಟ್ಟುಕೊಂಡಿರುವ ಅರಣ್ಯಾಧಿಕಾರಿಗಳು ಅವರನ್ನು ವಿಚಾರಣೆಗೊಳಪಡಿಸಿ ಲಾಕೆಟ್ ಅನ್ನು ಪರಿಶೀಲಿಸುವ ಸಾಧ್ಯತೆ ದಟ್ಟವಾಗಿದೆ.
ಏನಿದು ಕಾಯ್ದೆ..?
ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ಅಡಿಯಲ್ಲಿ ಯಾವುದೇ ವನ್ಯ ಜೀವಿಗೆ ಸಂಬಂಧಿಸಿದ ವಸ್ತುಗಳು, ಅಂದರೆ ಚರ್ಮ, ಮೂಳೆ. ಕೊಂಬು, ಕೂದಲು ಇತ್ಯಾದಿ ವಸ್ತುಗಳ ಸಂಗ್ರಹ ತಪ್ಪು. ಈ ರೀತಿಯ ಸಂಗ್ರಹಗಳಿದ್ದರೆ ಕೂಡಲೇ ಇಲಾಖೆಗೆ ಒಪ್ಪಿಸಬೇಕು. ಇಲ್ಲವೇ ಇಲಾಖೆಯಿಂದ ಸೂಕ್ತ ಪ್ರಮಾಣ ಪತ್ರ ಪಡೆಯಬೇಕು. ಅಕ್ರಮ ಎಂದು ಸಾಬೀತಾದರೆ 3 ರಿಂದ 7 ವರ್ಷ ಜೈಲು ಮತ್ತು ಕನಿಷ್ಠ 10,000 ರೂ., ದಂಡ ವಿಧಿಸುವ ಸಾಧ್ಯತೆ ಇದೆ.