ಗ್ರಾಮೀಣ ಭಾಗದ ಪಿಯು ಕಾಲೇಜು ಮುಚ್ಚದಂತೆ ಸರಕಾರಕ್ಕೆ ಮನವಿ
ಶಿಕ್ಷಣ ತಜ್ಞ ನಿರಂಜನಾರಾಧ್ಯ. ವಿ.ಪಿ
ಬೆಂಗಳೂರು: ಸರಕಾರದ ಉಪನ್ಯಾಸಕರ ವರ್ಗಾವಣೆ ನೀತಿಯಿಂದಾಗಿ ಅತ್ಯಂತ ಕೆಳಸ್ತರದ ಮಕ್ಕಳು ಕಲಿಯುತ್ತಿರುವ ಗ್ರಾಮೀಣ ಭಾಗದ ಪದವಿ ಪೂರ್ವ(ಪಿಯು) ಕಾಲೇಜುಗಳು ಮುಚ್ಚಬಾರದು ಎಂದು ಅಭಿವೃದ್ಧಿ ಶಿಕ್ಷಣ ತಜ್ಞ ನಿರಂಜನಾರಾಧ್ಯ. ವಿ.ಪಿ. ಸರಕಾರಕ್ಕೆ ಮನವಿ ಮಾಡಿದ್ದಾರೆ.
ಗ್ರಾಮಾಂತರ ಪ್ರದೇಶದ ಪದವಿಪೂರ್ವ ಕಾಲೇಜುಗಳು ಉಳಿಯುವ ಅವಶ್ಯಕತೆ ಇರುವುದರಿಂದ ಉಪನ್ಯಾಸಕರ ವರ್ಗಾವಣೆ ನೀತಿ ಹಾಗು ಕೌನ್ಸಿಲಿಂಗ್ ಪ್ರಕ್ರಿಯೆಯಲ್ಲಿ ಸೂಕ್ತ ಬದಲಾವಣೆಗಳನ್ನು ತರಬೇಕು. ವರ್ಗಾವಣೆ ವಿಚಾರವಾಗಿ ಇಲಾಖೆಯ ಅಧಿಕಾರಿಗಳಿಗೆ ಮತ್ತು ಸಚಿವರಿಗೆ ಗೊಂದಲವಿದೆ ಹಾಗಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಮಧ್ಯ ಪ್ರವೇಶಿಸಿ ಸೂಕ್ತ ಸೂಚನೆ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ರಾಜ್ಯ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ವರ್ಗಾವಣೆಗೆ ಸರಕಾರ ಚಾಲನೆ ನೀಡಿದ್ದು, ವರ್ಗಾವಣೆಗೆ ಹೊಸ ಮಾರ್ಗಸೂಚಿಯನ್ನು ಹೊರಡಿಸಿದೆ. ಈ ಮಾರ್ಗಸೂಚಿ ಅನ್ವಯ 2023ನೆ ಸಾಲಿನಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ವಿಷಯವಾರು, ಅಂದರೆ ನಿರ್ಧಿಷ್ಟ ವಿಷಯಗಳಲ್ಲಿ 40 ವಿದ್ಯಾರ್ಥಿಗಳಿಗಿಂತ ಕಡಿಮೆ ಇರುವ ಕಾಲೇಜುಗಳಲ್ಲಿ ವಿಷಯವಾರು ಉಪನ್ಯಾಸಕ ಹುದ್ದೆಗಳನ್ನು ವರ್ಗಾವಣೆಗೆ ನಡೆಯುವ ಕೌನ್ಸಿಲಿಂಗ್ನಲ್ಲಿ ತೋರಿಸದಂತೆ ಪದವಿಪೂರ್ವ ಇಲಾಖೆ ಆಂತರಿಕವಾಗಿ ಸೂಚಿಸಿದೆ ಎಂದು ನಿರಂಜನಾರಾಧ್ಯ. ವಿ.ಪಿ. ತಿಳಿಸಿದ್ದಾರೆ.
ಸರಕಾರದ ಈ ತಪ್ಪು ನೀತಿಯಿಂದ ಗ್ರಾಮೀಣ ಭಾಗದ ನೂರಾರು ಪದವಿಪೂರ್ವ ಕಾಲೇಜುಗಳು ಮುಚ್ಚಿ ಹೋಗುವುದು ಖಚಿತವಾಗಿದೆ. ಈ ಕಾಲೇಜುಗಳು ಮುಚ್ಚಿದರೆ ಗ್ರಾಮೀಣ ಮಕ್ಕಳು ಅದರಲ್ಲೂ ಹೆಣ್ಣು ಮಕ್ಕಳು ತಮ್ಮ ವಿದ್ಯಾಭ್ಯಾಸವನ್ನು ಅರ್ಧದಲ್ಲಿಯೇ ಮೊಟುಕುಗೊಳಿಸುವಂತಾಗುತ್ತದೆ. ಈ ಮಕ್ಕಳ ಹಿತದೃಷ್ಟಿಯಿಂದ ಗ್ರಾಮಾಂತರ ಪ್ರದೇಶದ ಕಾಲೇಜುಗಳು ಉಳಿಯುವ ಅವಶ್ಯಕತೆ ಇದೆ ಎಂದು ಅವರು ಹೇಳಿದ್ದಾರೆ.
ಕಾಲೇಜುಗಳಲ್ಲಿ ವಿಷಯವಾರು ಉಪನ್ಯಾಸಕರನ್ನು ನೀಡಲು ಕನಿಷ್ಠ 40ಕ್ಕಿಂತ ಹೆಚ್ಚು ವಿದ್ಯಾರ್ಥಿಗಳಿರಬೇಕೆಂಬ ನಿಬರ್ಂಧವನ್ನು ಸಡಿಲಗೊಳಿಸಬೇಕು. ವಿಷಯವಾರು ಉಪನ್ಯಾಸಕರ ಅಗತ್ಯವಿರುವ ಎಲ್ಲ ಗ್ರಾಮೀಣ ಕಾಲೇಜುಗಳನ್ನು ಕೌನ್ಸಿಲಿಂಗ್ ಸಂದರ್ಭದಲ್ಲಿ ತೋರಿಸುವ ಮೂಲಕ ಉಪನ್ಯಾಸಕರು ಸ್ಥಳ ಆಯ್ಕೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.