ನಿರ್ಮಲಾ ಸೀತಾರಾಮನ್ ಹಣಕಾಸು ಆಯೋಗದ ಶಿಫಾರಸುಗಳನ್ನು ನಿರಾಕರಿಸುತ್ತಿದ್ದಾರೆ : ಸಿಎಂ ಸಿದ್ದರಾಮಯ್ಯ
“ಗ್ಯಾರಂಟಿಗೆ ನಿಮ್ಮ ಹಣ ಬೇಡ, ಅದಕ್ಕೆ ನಮ್ಮ ಬಜೆಟ್ ನಲ್ಲಿ ನಾವು ಹಣ ಮೀಸಲಿಟ್ಟಿದ್ದೇವೆ”
Photo: X/@siddaramaiah
ಬೆಂಗಳೂರು: ‘ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸತ್ಯವನ್ನು ಮಾತನಾಡುತ್ತಾರೆಂದು ನಾವು ನಿರೀಕ್ಷೆ ಮಾಡುತ್ತೇವೆ. ದುರದೃಷ್ಟವಶಾತ್, ಅವರೇ ಲಿಖಿತ ದಾಖಲೆಗಳನ್ನು ನಿರಾಕರಿಸುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದಿಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ.
ರವಿವಾರ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಹಾಕಿರುವ ಅವರು, ‘2020-21ರ 15 ಹಣಕಾಸು ಆಯೋಗದ ಮಧ್ಯಂತರ ವರದಿಯು ಮೂರು ರಾಜ್ಯಗಳಿಗೆ 6,764 ಕೋಟಿ ರೂ.ಗಳನ್ನು ಮಂಜೂರು ಮಾಡಿದೆ. ಅದರಲ್ಲಿ ಕರ್ನಾಟಕಕ್ಕೆ 5,495 ಕೋಟಿ ರೂ., ತೆಲಂಗಾಣಕ್ಕೆ 723 ಕೋಟಿ ರೂ. ಮತ್ತು ಮಿಜೋರಾಂ 546 ಕೋಟಿ ರೂ.ಗಳಾಗಿದೆ. ಈ ರಾಜ್ಯಗಳ ಮೇಲಿನ ಯಾವುದೇ ವಿಶೇಷ ಕನಿಕರದಿಂದಾಗಿ ಈ ಅನುದಾನಗಳನ್ನು ಶಿಫಾರಸು ಮಾಡಿಲ್ಲ. ಈ ರಾಜ್ಯಗಳು ಹಿಂದಿನ ವರ್ಷದಲ್ಲಿ ಕಡಿಮೆ ಪಾಲನ್ನು ಪಡೆದಿದ್ದವು ಎಂದು ಹಣಕಾಸು ಆಯೋಗವು ಶಿಫಾರಸು ಮಾಡಿತ್ತು’ ಎಂದು ತಿಳಿಸಿದ್ದಾರೆ.
‘15ನೆ ಹಣಕಾಸು ಆಯೋಗವು ಅಂತಿಮ ವರದಿಯಲ್ಲಿ ಕರ್ನಾಟಕಕ್ಕೆ 6,000 ಕೋಟಿ ರೂ.ಗಳನ್ನು ನೀಡಬೇಕು ಎಂದು ಶಿಫಾರಸು ಮಾಡಿದೆ. ಜಲಮೂಲಗಳ ಪುನರುಜ್ಜೀವನಕ್ಕೆ 3 ಸಾವಿರ ಕೋಟಿ ರೂ. ಮತ್ತು ಬೆಂಗಳೂರಿನ ಪೆರಿಫೆರಲ್ ರಿಂಗ್ ರೋಡ್ಗೆ 3 ಸಾವಿರ ಕೋಟಿ ರೂ.ಗಳನ್ನು ಶಿಫಾರಸು ಮಾಡಿದೆ. ಆದರೆ ನಿರ್ಮಲಾ ಸೀತಾರಾಮನ್ ಅವರ ನೇತೃತ್ವದ ಹಣಕಾಸು ಸಚಿವಾಲಯವು ಈ ಎರಡು ಶಿಫಾರಸುಗಳನ್ನು ಸ್ವೀಕರಿಸಲು ನಿರಾಕರಿಸಿದೆ. ಹೀಗಾಗಿ ಕರ್ನಾಟಕಕ್ಕೆ ಸರಿಯಾದ ಪಾಲನ್ನು ನೀಡಲು ನಿರಾಕರಿಸಿತು ಎಂದು ಅವರು ಹೇಳಿದ್ದಾರೆ.
ನಿರ್ಮಲಾ ಸೀತಾರಾಮನ್ ಅವರೇ, ನಾವು ನಮ್ಮ 5 ಗ್ಯಾರಂಟಿಗಳಿಗೆ ಹಣವನ್ನು ಕೇಳುತ್ತಿಲ್ಲ. ನಮ್ಮ ಬಜೆಟ್ನಲ್ಲಿ ಅದಕ್ಕಾಗಿ ಹಣವನ್ನು ಮೀಸಲಿಟ್ಟಿದೇವೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.
‘ನಮ್ಮ ಸಂವಿಧಾನದಲ್ಲಿ ಪ್ರತಿಪಾದಿಸಲಾದ ಒಕ್ಕೂಟ ವ್ಯವಸ್ಥೆಯಲ್ಲಿ ನಿಮಗೆ ಯಾವುದೇ ನಂಬಿಕೆ ಅಥವಾ ಬದ್ಧತೆ ಇಲ್ಲದಿರುವ ಕಾರಣ, ನೀವು ರಾಜ್ಯಗಳಿಗೆ ಸರಿಯಾಗಿ ಹಂಚಿಕೆಯಾಗಬೇಕಾದ ಪಾಲು ಪರಿಕಲ್ಪನೆಯನ್ನು ಅರ್ಥಮಾಡಿಕೊಂಡಂತೆ ತೋರುತ್ತಿಲ್ಲ. ಕನ್ನಡಿಗರು ತಮ್ಮ ಪಾಲು ಕೇಳುತ್ತಾರೆ, ಹೊರತಾಗಿ ಅವರು ಭಿಕ್ಷೆ ಬೇಡುತ್ತಿಲ್ಲ’ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
One expects the country’s Finance Minister to speak the truth. Unfortunately, she has been consistently denying the written word. The interim report of the 15 FC for 2020-21 sanctioned Rs 6764 crores for three states, viz Karnataka (Rs 5495 crores), Telangana (Rs 723 crores) &… pic.twitter.com/8kFhl70oo2
— Siddaramaiah (@siddaramaiah) March 24, 2024