ಹಾಲಿನ ಪ್ರೋತ್ಸಾಹ ಧನ ಕಡಿತ ಇಲ್ಲ: ಸಚಿವ ಕೆ. ವೆಂಕಟೇಶ್ ಸ್ಪಷ್ಟನೆ
ಕೆ.ವೆಂಕಟೇಶ್- ಸಚಿವರು
ಬೆಂಗಳೂರು, ಜು.12: ರಾಜ್ಯದಲ್ಲಿ ಹಾಲು ಉತ್ಪಾದಕರಿಗೆ ನೀಡುತ್ತಿರುವ 5 ರೂಪಾಯಿ ಪ್ರೋತ್ಸಾಹ ಧನವನ್ನು ಕಡಿತ ಮಾಡಿಲ್ಲ ಎಂದು ಪಶುಸಂಗೋಪನಾ ಸಚಿವ ಕೆ.ವೆಂಕಟೇಶ್ ಸ್ಪಷ್ಟಪಡಿಸಿದ್ದಾರೆ.
ಬುಧವಾರ ಪರಿಷತ್ತಿನ ಪ್ರಶ್ನೋತ್ತರ ವೇಳೆಯಲ್ಲಿ ಬಿಜೆಪಿಯ ಸದಸ್ಯ ಎನ್.ರವಿಕುಮಾರ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಬೇಸಿಗೆ ಅವಧಿಯಲ್ಲಿ 5 ರೂಪಾಯಿ ಪ್ರೋತ್ಸಾಹ ಧನದ ಜತೆಗೆ ಬೆಂಗಳೂರು ಹಾಲು ಒಕ್ಕೂಟ ಹೆಚ್ಚುವರಿಯಾಗಿ 3 ರೂಪಾಯಿ ಪ್ರತಿ ಲೀಟರ್ ಗೆ ಪ್ರೋತ್ಸಾಹ ಕೊಡುತ್ತಿತ್ತು. ಅದರಲ್ಲಿ ಒಂದೂವರೆ ರೂಪಾಯಿಯನ್ನು ಕಡಿತ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದರು.
ಬೆಂಗಳೂರು ಹಾಲು ಒಕ್ಕೂಟ ತಾನು ನೀಡುತ್ತಿದ್ದ 3 ರೂಪಾಯಿ ಹೆಚ್ಚುವರಿ ಸಹಾಯ ಧನ ಕಡಿತ ಮಾಡಲು ಸರಕಾರಕ್ಕೆ ಮನವಿ ಮಾಡಿತು. ಸರಕಾರ ಮಧ್ಯೆ ಪ್ರವೇಶಿಸಿದ್ದರಿಂದ ಒಂದೂವರೆ ರೂಪಾಯಿ ಮಾತ್ರ ಕಡಿತ ಮಾಡಲಾಗಿದೆ. ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿ ಹಾಲಿನ ಪ್ರೋತ್ಸಾಹ ದರ ಹೆಚ್ಚಳ ಮಾಡಲು ಭರವಸೆ ನೀಡಲಾಗಿದೆ. ಅದರ ಬಗ್ಗೆ ಸದ್ಯದಲ್ಲೇ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. ಕೇರಳದ ಪಶುಸಂಗೋಪನಾ ಸಚಿವರು ನಂದಿನಿ ಹಾಲಿನ ಬಗ್ಗೆ ನೀಡಿರುವ ಹೇಳಿಕೆಗೆ ಸೂಕ್ತ ಉತ್ತರ ನೀಡಲಾಗುವುದು ಎಂದು ಸಚಿವರು ತಿಳಿಸಿದರು.