ಚಿಕ್ಕಮಗಳೂರಿನ ಮುತ್ತೋಡಿ ಅಭಯಾರಣ್ಯದಲ್ಲಿ ಆನೆ ಶಿಬಿರ ಬೇಡ: ಪರಿಸರವಾದಿಗಳ ಆಕ್ಷೇಪ
ಸಾಂದರ್ಭಿಕ ಚಿತ್ರ
ಚಿಕ್ಕಮಗಳೂರು, ಸೆ.28: ಜಿಲ್ಲೆಯ ಮುತ್ತೋಡಿ ಅಭಯಾರಣ್ಯ ವಿಭಾಗದಲ್ಲಿ ಕಾಡಾನೆಗಳ ನಿಯಂತ್ರಣಕ್ಕೆ ಖಾಯಂ ಆನೆ ಶಿಬಿರ ನಿರ್ಮಾಣ ಸಂಬಂಧ ಅರಣ್ಯ ಇಲಾಖೆ ಅಧಿಕಾರಿಗಳು ಸರಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದು, ಇದು ಅಭಯಾರಣ್ಯದಲ್ಲಿ ಮಾನವ ಚಟುವಟಿಕೆಗಳನ್ನು ಹೆಚ್ಚಿಸುವುದರಿಂದ ವನ್ಯಜೀವಿಗಳ ಸ್ವಚ್ಛಂಧ ಬದುಕಿಗೆ ಮಾರಕವಾಗಲಿದೆ. ಆದ್ದರಿಂದ ಖಾಯಂ ಆನೆ ಶಿಬಿರ ನಿರ್ಮಾಣಕ್ಕೆ ಸರಕಾರ ಮುಂದಾಗಬಾರದು ಎಂದು ಜಿಲ್ಲೆಯ ವಿವಿಧ ಪರಿಸರವಾದಿಗಳು ಒತ್ತಾಯಿಸಿದ್ದಾರೆ.
ಈ ಸಂಬಂಧ ಪತ್ರಿಕಾ ಪ್ರಕಟನೆ ನೀಡಿರುವ ಭದ್ರಾ ವೈಲ್ಡ್ ಲೈಫ್ ಕನ್ಸರ್ವೇಶನ್ ಟ್ರಸ್ಟ್ ನ ಡಿ.ವಿ.ಗಿರೀಶ್, ರಾಜ್ಯ ವನ್ಯಜೀವಿ ಮಂಡಳಿ ಮಾಜಿ ಸದಸ್ಯ ಸ.ಗಿರಿಜಾಶಂಕರ್, ವೈಲ್ಡ್ ಕ್ಯಾಟ್-ಸಿ ಸಂಸ್ಥೆಯ ಶ್ರೀದೇವ್ ಹುಲಿಕೆರೆ, ʼʼಜಿಲ್ಲೆಯ ಮೂಡಿಗೆರೆ ತಾಲೂಕು ಸೇರಿದಂತೆ ಹಲವು ಕಡೆ ಕಾಡಾನೆ ಹಾಗೂ ಮಾನವ ಸಂಘರ್ಷ ಅಧಿಕವಾಗುತ್ತಿರುವ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಕಾಡಾನೆಗಳನ್ನು ಹಿಡಿದು ಬೇರೆಡೆಗೆ ಸ್ಥಳಾಂತರಿಸಲು ನಾಲ್ಕೈದು ಸಾಕಾನೆಗಳಿಂದ ಕೂಡಿದ ಆನೆ ಶಿಬಿರವೊಂದನ್ನು ಮುತ್ತೋಡಿ ಅಭಯಾರಣ್ಯದೊಳಗೆ ಮಾಡಲು ಹೊರಟಿರುವುದು ಸರಿಯಲ್ಲ. ಕಾಡಾನೆಗಳು ಭದ್ರಾ ಅಭಯಾರಣ್ಯವನ್ನು ತಮ್ಮ ಆವಾಸ ಸ್ಥಾನವಾಗಿ ಮಾಡಿಕೊಂಡು ಸ್ವಚ್ಛಂಧವಾಗಿ ಸಂಚರಿಸುತ್ತಿವೆ. ಈ ಪರಿಸರದಲ್ಲಿ ಸಾಕಿದ ಆನೆಗಳ ಶಿಬಿರವನ್ನು ಮಾಡಿದಲ್ಲಿ ಅವುಗಳಿಗೆ ನಿತ್ಯ ಆಹಾರ ಒದಗಿಸಲು ಮತ್ತೆ ಕಾಡಿನ ಮರಗಳನ್ನೇ ಕಡಿದು ಸೊಪ್ಪನ್ನು ನೀಡಬೇಕಾಗುತ್ತದೆ. ಈ ಆನೆಗಳ ನಿರ್ವಹಣೆಗೆ ಮೂರ್ನಾಲ್ಕು ಮಂದಿ ಮಾವುತರು ಹಾಗೂ ಅವರ ಕುಟುಂಬಕ್ಕೂ ನೆಲೆ ಕಲ್ಪಿಸಬೇಕಾಗುತ್ತದೆ. ಇದು ಅಭಯಾರಣ್ಯದಲ್ಲಿ ಮತ್ತೆ ಜನವಸತಿ ಹಾಗೂ ಹಲವು ರೀತಿಯ ಮಾನವ ಚಟುವಟಿಕೆಗೆ ಕಾರಣವಾಗುತ್ತದೆʼʼ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ʼʼಮತ್ತೋಡಿ ಅಭಯಾರಣ್ಯದಲ್ಲಿ ಈ ಹಿಂದೆ ಆನೆ ಶಿಬಿರ ಮಾಡಲು ಮುಂದಾದಾಗ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಇಲಾಖೆ ಅದನ್ನು ಕೈಬಿಟ್ಟಿತ್ತು. ಒಮ್ಮೆ ಆನೆ ಶಿಬಿರ ಮಾಡಿದಲ್ಲಿ ಅಭಯಾರಣ್ಯ ನೋಡಲು ಬರುವ ಪ್ರವಾಸಿಗರಿಗೆ ಇದೊಂದು ರೀತಿ ಮೋಜಿಗೆ ದಾರಿ ಮಾಡಿಕೊಡುತ್ತದೆ. ಅಲ್ಲದೇ ಶಿಬಿರದಲ್ಲಿನ ಆನೆಗಳನ್ನು ಪ್ರತಿನಿತ್ಯ ಆರೈಕೆ ಮಾಡುವುದು, ಅವುಗಳ ಮೈತೊಳೆಯುವಂತಹ ಚಟುವಟಿಕೆಗಳಿಂದಾಗಿ ಈ ಶಿಬಿರ ಒಂದು ರೀತಿಯಲ್ಲಿ ಸಕ್ರೆಬೈಲು ಆನೆ ಶಿಬಿರದಂತಾಗಿ ಪ್ರವಾಸಿಗರನ್ನು ಸೆಳೆಯಲು ಮತ್ತೊಂದು ದಾರಿ ನಿರ್ಮಿಸಿದಂತಾಗುತ್ತದೆ. ಅಲ್ಲದೇ ವನ್ಯಜೀವಿಗಳ ನಿರಾತಂಕ ಬದುಕಿಗೂ ಅಡಚಣೆ ಉಂಟು ಮಾಡುವ ಸಂಭವವಿದೆʼʼ ಎಂದು ಅವರು ಎಚ್ಚರಿಸಿದ್ದಾರೆ.
ʼʼಈಗಾಗಲೇ ಶಿವಮೊಗ್ಗ ಬಳಿ ಸಕ್ರೆಬೈಲಿನಲ್ಲಿ ಆನೆ ಶಿಬಿರವಿದ್ದು, ಜಿಲ್ಲೆಯಲ್ಲಿ ಕಾಡಾನೆಗಳ ನಿಯಂತ್ರಣ ಕಾರ್ಯಾಚರಣೆ ಅನಿವಾರ್ಯವಾದಾಗ ಸಕ್ರೇಬೈಲಿನ ಆನೆಗಳನುನಿಲ್ಲಿಗೆ ತಂದು ಕಾರ್ಯಾಚರಣೆ ಮುಂದುವರಿಸಬಹುದು. ಇಲಾಖೆ ಈ ರೀತಿ ಯೋಚಿಸದೆ ಮತ್ತೋಡಿಯಲ್ಲಿ ಹೊಸದಾಗಿ ಆನೆ ಶಿಬಿರವನ್ನು ಮಾಡುತ್ತಿರುವುದು ವನ್ಯಜೀವಿಗಳ ಹಿತದೃಷ್ಟಿಯಿಂದ ಉತ್ತಮ ಯೋಜನೆಯಲ್ಲ ಎಂದಿರುವ ಅವರು, ಇದು ಅರಣ್ಯ ಇಲಾಖೆಯ ಆರ್ಥಿಕ ಭಾರವನ್ನು ಮತ್ತಷ್ಟು ಹೆಚ್ಚಿಸಲಿದೆʼʼ ಎಂದು ತಿಳಿಸಿದ್ದಾರೆ.
ʼʼಇಲಾಖೆ ಆನೆ ಶಿಬಿರವನ್ನು ಮಾಡುವ ಬದಲು ಚಿಕ್ಕಮಗಳೂರು ಅರಣ್ಯ ವೃತ್ತದಲ್ಲಿ ಆನೆಗಳು ಹಾಗೂ ಇತರ ವನ್ಯಜೀವಿಗಳಿಂದ ಕೂಡಿರುವ ಭದ್ರಾ ಅಭಯಾರಣ್ಯ ಮತ್ತು ಕುದುರೆಮುಖ ರಾಷ್ಟ್ರೀಯ ಉದ್ಯಾನ ಹಾಗೂ ಮಲೆನಾಡು ಭಾಗದ ಇತರ ತಾಲೂಕುಗಳಲ್ಲಿರುವ ವನ್ಯಜೀವಿಗಳ ನಿರ್ವಹಣೆ ಹಾಗೂ ನಿಯಂತ್ರಣಕ್ಕಾಗಿ ಅತ್ಯಗತ್ಯವಾಗಿ ಬೇಕಾಗಿರುವ ಓರ್ವ ಪಶುವೈದ್ಯರನ್ನು ನೇಮಿಸುವುದು ಅತ್ಯಂತ ತುರ್ತು ಅಗತ್ಯವಾಗಿದೆ. ಇಲಾಖೆ ಆನೆ ಶಿಬಿರ ಮಾಡುವುದನ್ನು ಕೈಬಿಟ್ಟು ಪಶುವೈದ್ಯರನ್ನು ನೇಮಿಸಬೇಕೆಂದುʼʼ ಅವರು ಒತ್ತಾಯಿಸಿದ್ದಾರೆ.