ಶಿವಮೊಗ್ಗದಲ್ಲಿ ಎನ್‌ಕೌಂಟರ್ ನಡೆದಿಲ್ಲ, ಸುಳ್ಳು ಸುದ್ದಿ: ಎಸ್ಪಿ ಸ್ಪಷ್ಟನೆ
ಶಿವಮೊಗ್ಗ: ‘ರಾಗಿಗುಡ್ಡದಲ್ಲಿ ಮಿಲಾದುನ್ನಬಿ ಮೆರವಣಿಗೆ ವೇಳೆ ಪೊಲೀಸ್ ಎನ್‌ಕೌಂಟರ್‌ನಲ್ಲಿ ಮುಸ್ಲಿಮ್ ಯುವಕ ಸಾವಿಗೀಡಾಗಿದ್ದಾನೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಅದು ಸುಳ್ಳು‘ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.
ಈ ಬಗ್ಗೆ ಮಂಗಳವಾರ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಅವರು, ‘ರಾಗಿಗುಡ್ಡದಲ್ಲಿ ನಡೆದ ಗಲಭೆಗೆ ಸಂಬಂಧಿಸಿದಂತೆ ಯಾವುದೇ ರೀತಿಯ ಅಪಪ್ರಚಾರಕ್ಕೆ ಕಿವಿಗೊಡಬೇಡಿ. ಪೊಲೀಸರಿಂದ ಎನ್‌ಕೌಂಟರ್ ಎಂದು ಸುಳ್ಳು ಸುದ್ದಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದವರ ವಿರುದ್ಧ ಈಗಾಗಲೇ ಎಫ್ಐಆರ್ ದಾಖಲಾಗಿದೆ‘ ಎಂದು ತಿಳಿಸಿದರು.
ಸಾಗರದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಕತ್ತಿ ಪ್ರದರ್ಶನ ಮಾಡಿರುವ ಆರೋಪದ ಕುರಿತು ಪ್ರತಿಕ್ರಿಯಿಸಿದ ಅವರು, ʼʼಸಾಗರದಲ್ಲಿ ಪ್ರದರ್ಶನ ಮಾಡಿರುವುದು ಪ್ಲಾಸ್ಟಿಕ್ ಕತ್ತಿ.ಪ್ರಚೋದನಾಕಾರಿ ಹೇಳಿಕೆ ನೀಡಿದ್ದರೆ ಆ ಬಗ್ಗೆ ಪರಿಶೀಲನೆ ನಡೆಸಲಾಗುವುದು. ಯಾರೊ ಒಬ್ಬರು ಕಳಿಸಿದ ವಿಡಿಯೊಗೆ ಬೆಲೆ ನೀಡಿದರೆ, ನಗರದ ಶಾಂತಿ ಹಾಳಾಗುತ್ತದೆ. ಕಾನೂನಿಗೆ ವಿರುದ್ದ ಕೆಲಸ ಮಾಡಿದವರ ಬಗ್ಗೆ ಕ್ರಮ ತೆಗೆದುಕೊಳ್ಳಲಾಗುವುದುʼʼ ಎಂದರು.
ಒಮ್ನಿ ವಾಹನಗಳ ಬಗ್ಗೆ ಕಥೆ ಕಟ್ಟಬೇಡಿ: ಎಸ್ಪಿ ಸ್ಪಷ್ಟನೆ
ನಗರದ ರಾಗಿಗುಡ್ಡದಲ್ಲಿ ಮಿಲಾದುನ್ನಬಿ ಮೆರವಣಿಗೆ ವೇಳೆ ಒಮ್ನಿ ವಾಹನಗಳಲ್ಲಿ ಬಂದು ಕಲ್ಲು ತೂರಾಟ ನಡೆಸಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿ ಸ್ಪಷ್ಟನೆ ನೀಡಿದ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್, ʼʼಒಮ್ನಿ ವಾಹನದಲ್ಲಿ ಬಂದವರು ದಾವಣಗೆರೆ ಜಿಲ್ಲೆ ನ್ಯಾಮತಿಯವರು. ವಾಹನದಲ್ಲಿ ಮುಸ್ಲಿಮರು ಮಾತ್ರವಲ್ಲ ಹಿಂದೂಗಳು ಇದ್ದರು. ಎಲ್ಲರೂ ಸ್ನೇಹಿತರು. ಶಿವಮೊಗ್ಗದಲ್ಲಿ ಈದ್ ಮಿಲಾದ್ ಮೆರವಣಿಗೆ ನೋಡಲು ಬಂದವರು ರಾಗಿಗುಡ್ಡಕ್ಕೂ ಬಂದಿದ್ದಾರೆ. ಅಲ್ಲಿ ಗಲಾಟೆ ಆರಂಭವಾಗುತ್ತಿದ್ದಂತೆಯೇ ಅವರೆಲ್ಲರೂ ತಮ್ಮೂರಿಗೆ ಮರಳಿದ್ದಾರೆʼʼ ಎಂದು ತಿಳಿಸಿದರು.