ಪರೀಕ್ಷೆಗೆ 'ಹಿಜಾಬ್' ನಿಷೇಧವಿಲ್ಲ: ಕೆಇಎ ಆದೇಶದ ಬಗ್ಗೆ ಸಚಿವ ಸುಧಾಕರ್ ಸ್ಪಷ್ಟನೆ
ಡಾ ಎಂ.ಸಿ. ಸುಧಾಕರ್ - ಉನ್ನತ ಶಿಕ್ಷಣ ಸಚಿವರು
ಬೆಂಗಳೂರು : 'ಅನಗತ್ಯ ಕ್ಯಾಪ್ ಅಥವಾ ಸ್ಕಾರ್ಫ್ಗಳ ಮೇಲಿನ ನಿಷೇಧವು ಹಿಜಾಬ್ಗಳಿಗೆ ಅನ್ವಯಿಸುವುದಿಲ್ಲ' ಎಂದು ಉನ್ನತ ಶಿಕ್ಷಣ ಸಚಿವ ಡಾ ಎಂ.ಸಿ. ಸುಧಾಕರ್ ಮಂಗಳವಾರ ಸ್ಪಷ್ಟನೆ ನೀಡಿದ್ದಾರೆ.
ಪರೀಕ್ಷಾ ಅಕ್ರಮ ತಡೆಯುವ ಉದ್ದೇಶದಿಂದ ಕೆಇಎಯ ಹೊರಡಿಸಿದ್ದ ವಸ್ತ್ರ ಸಂಹಿತೆ ಆದೇಶ ಆಕ್ರೋಶಕ್ಕೆ ಕಾರಣವಾಗಿತ್ತು. ಎ ಐಎಂಐಎಂ ಮುಖ್ಯಸ್ಥ ಅಸದುದ್ದೀನ್ ಉವೈಸಿ ಮತ್ತು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಸೇರಿದಂತೆ ಹಲವು ರಾಜಕಾರಣಿಗಳಿಂದ ಟೀಕೆಗೆ ಗುರಿಯಾಗಿತ್ತು.
ಪರೀಕ್ಷಾ ಸಮಯದಲ್ಲಿ ನಡೆಯುವ ಅವ್ಯವಹಾರಗಳನ್ನು ತಡೆಯುವುದೇ ವಸ್ತ್ರ ಸಂಹಿತೆಯ ಹಿಂದಿನ ಮುಖ್ಯ ಉದ್ದೇಶ ಎಂದು ಒತ್ತಿ ಹೇಳಿರುವ ಸಚಿವ ಸುಧಾಕರ್, ಹಿಜಾಬ್ಗಳು ಇತರ ತಲೆ ಹೊದಿಕೆಗಳಂತೆ ಅಡ್ಡಿಯಾಗುವುದಿಲ್ಲ. ಹಿಜಾಬ್ ಧರಿಸಿ ಅಭ್ಯರ್ಥಿಗಳು ಪರೀಕ್ಷಾ ಅಕ್ರಮಕ್ಕೆ ಬ್ಲೂಟೂತ್ ಸಾಧನಗಳನ್ನು ಬಳಸಲು ಸಾಧ್ಯವಿಲ್ಲ. ಡ್ರೆಸ್ ಕೋಡ್ ನಿಯಮಗಳನ್ನು ತಪ್ಪಾಗಿ ಅರ್ಥೈಸಲಾಗುತ್ತಿದೆ ಎಂದು ಅವರು ಸ್ಪಷ್ಟಪಡಿಸಿದರು.
ಹಿಜಾಬ್ ಧರಿಸಿರುವ ಮಹಿಳಾ ಅಭ್ಯರ್ಥಿಗಳು ಎತ್ತಿರುವ ಕಳವಳಗಳನ್ನು ಪರಿಹರಿಸಿರುವ ಸಚಿವ ಸುಧಾಕರ್, ಪರೀಕ್ಷಾ ಕೇಂದ್ರದಲ್ಲಿ ಕಟ್ಟುನಿಟ್ಟಾದ ಭದ್ರತಾ ಕ್ರಮಗಳು ಇರಲಿವೆ. ಹಿಜಾಬ್ ಧರಿಸಿರುವ ಅಭ್ಯರ್ಥಿಗಳು ಒಂದು ಗಂಟೆ ಮುಂಚಿತವಾಗಿ ಪರೀಕ್ಷಾ ಕೇಂದ್ರಗಳಿಗೆ ವರದಿ ಮಾಡಿಕೊಳ್ಳಬೇಕು. ಹಿಂದಿನ ವರ್ಷಗಳಲ್ಲಿ ವರದಿಯಾಗಿರುವ ವಂಚನೆ ಘಟನೆಗಳನ್ನು ತಡೆಗಟ್ಟಲು ಹೆಚ್ಚಿನ ಮೆಟಲ್ ಡಿಟೆಕ್ಟರ್ಗಳನ್ನು ಬಳಸಲಾಗುತ್ತದೆ. ಹಾಗಾಗಿ ಸಂಪೂರ್ಣ ತಪಾಸಣೆ ಇರಲಿದೆ ಎಂದರು.
"ಈ ನಿಯಮಗಳು ಹೊಸದೇನಲ್ಲ. ಅವು ಮೊದಲೇ ಅಸ್ತಿತ್ವದಲ್ಲಿವೆ. ಅನಗತ್ಯ ಕ್ಯಾಪ್ ಅಥವಾ ಸ್ಕಾರ್ಫ್ಗಳನ್ನು ಧರಿಸುವುದನ್ನು ನಿಷೇಧಿಸಲಾಗಿದೆ. ಈ ನಿಷೇಧ ಹಿಜಾಬ್ಗೆ ಅನ್ವಯಿಸುವುದಿಲ್ಲ" ಎಂದು ಸುಧಾಕರ್ ಹೇಳಿದ್ದಾರೆ.
ವಿವಾದಾತ್ಮಕ ಡ್ರೆಸ್ ಕೋಡ್ ಆದೇಶದಲ್ಲಿ ಎಲ್ಲಾ ರೀತಿಯ ತಲೆ ಹೊದಿಕೆಯನ್ನು ನಿಷೇಧಿಸುವ ಬಗ್ಗೆ ಪ್ರಸ್ತಾಪವಿತ್ತು. ಬ್ಲೂಟೂತ್ ಸಾಧನಗಳ ಬಳಕೆಯ ಮೂಲಕ ಪರೀಕ್ಷಾ ಅಕ್ರಮ ತಡೆಯ ಕ್ರಮಯಲು ಈ ಅದೇಶ ಹೊರಡಿಸಲಾಗಿತ್ತು. ಈ ಆದೇಶ ಸಾಂಸ್ಕೃತಿಕ ಮತ್ತು ಧಾರ್ಮಿಕ ಹಕ್ಕುಗಳ ಬಗ್ಗೆ ಚರ್ಚೆ ಹುಟ್ಟುಹಾಕಿತ್ತು.
ರಾಜ್ಯಾದ್ಯಂತ ನ.18 ಮತ್ತು 19 ರಂದು ವಿವಿಧ ನೇಮಕಾತಿ ಪರೀಕ್ಷೆಗಳಿಗೆ ಮುಂಚಿತವಾಗಿ ಈ ಪ್ರಕಟನೆ ಬಂದಿದೆ. ಬ್ಲೂಟೂತ್ ಸಾಧನಗಳನ್ನು ಬಳಸಿ ಪರೀಕ್ಷಾ ಅಕ್ರಮ ಎಸಗುವುದನ್ನು ತಡೆಯಲು ಪರೀಕ್ಷಾ ಹಾಲ್ನಲ್ಲಿ "ತಲೆ, ಬಾಯಿ ಅಥವಾ ಕಿವಿಗಳನ್ನು ಮುಚ್ಚುವ ಯಾವುದೇ ಉಡುಪು ಅಥವಾ ಕ್ಯಾಪ್" ಧರಿಸುವುದನ್ನು ನಿಷೇಧಿಸಲಾಗುವುದು ಎಂದು KEA ಆದೇಶ ಹೊರಡಿಸಿತ್ತು.