ಯುಪಿಎ ಅವಧಿಯಲ್ಲಿ ರಾಜ್ಯಕ್ಕೆ ಅನ್ಯಾಯವಾಗಿಲ್ಲ: ಗೃಹ ಸಚಿವ ಜಿ.ಪರಮೇಶ್ವರ್
Photo: (PTI)
ಬೆಂಗಳೂರು: ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದ ಅವಧಿಯಲ್ಲಿ ಅನುದಾನ ನೀಡುವ ವಿಚಾರದಲ್ಲಿ ರಾಜ್ಯಕ್ಕೆ ಯಾವುದೇ ರೀತಿಯ ಅನ್ಯಾಯವಾಗಿಲ್ಲ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್ ಅವರು ಹೇಳಿದರು.
ಸದಾಶಿವನಗರದ ತಮ್ಮ ನಿವಾಸದ ಬಳಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಮನಮೋಹನ್ ಸಿಂಗ್ ಅವರು ಆರ್ಥಿಕ ತಜ್ಞರಾಗಿ ಬ್ಯಾಲೆನ್ಸ್ ಮಾಡುತ್ತಿದ್ದರು. ಈ ಹಿಂದೆ ಪ್ರವಾಹ ಉಂಟಾದಾಗ ವೈಮಾನಿಕ ಸಮೀಕ್ಷೆ ನಡೆಸಿ ಎರಡು ಸಾವಿರ ಕೋಟಿ ರೂ. ಮಂಜೂರು ಮಾಡಿದ್ದರು. ಅವರ ಅವಧಿಯಲ್ಲಿ ಅನ್ಯಾಯವಾಗಿತ್ತು ಎನ್ನುವುದಾದರೆ ಬಿಜೆಪಿಯವರು ಸಾಬೀತುಪಡಿಸಲಿ ಎಂದರು.
ಜಿಎಸ್ಟಿ ಜಾರಿಯಾದ ನಂತರ ತೆರಿಗೆ ಸಂಗ್ರಹದಲ್ಲಿ ಕರ್ನಾಟಕ ದೇಶದಲ್ಲಿ ಎರಡನೇ ಸ್ಥಾನದಲ್ಲಿದೆ. ನಮ್ಮ ರಾಜ್ಯಕ್ಕೆ ಬರಬೇಕಾದ ಜಿಎಸ್ಟಿ ಪಾಲು ಸಂಪೂರ್ಣವಾಗಿ ಸಿಕ್ಕಿಲ್ಲ. ಬರ ಪರಿಹಾರಕ್ಕೆ 17 ಸಾವಿರ ಕೋಟಿ ರೂ. ಕೇಳಿದರು ಈವರೆಗೂ ಕೊಟ್ಟಿಲ್ಲ. ಎನ್ಡಿಆರ್ಎಫ್ ಫಂಡ್ ಸಹ ಬಂದಿಲ್ಲ. ಆದರೂ ನಾವು ಇದನ್ನೆಲ್ಲ ರಾಜಕೀಯ ಮಾಡೋದಿಕ್ಕೆ ಹೋಗಿಲ್ಲ. ರಾಜ್ಯಕ್ಕೆ ಆಗಿರುವ ಅನ್ಯಾಯದ ಕುರಿತು ನಾವು ದಿಲ್ಲಿಗೆ ಹೋಗಿ ಪ್ರತಿಭಟನೆ ನಡೆಸುತ್ತೇವೆ. ದೇಶದ ಜನತೆಗೆ ಗೊತ್ತಾಗಲಿ ಎಂದು ಹೇಳಿದರು.
ಕೇಂದ್ರ ಸರಕಾರ ರಾಜ್ಯಕ್ಕೆ ಮಾಡುತ್ತಿರುವ ಅನ್ಯಾಯ ಜನರಿಗೆ ಗೊತ್ತಾಗಿದೆ. ವಿಶೇಷ ಅನುದಾನವನ್ನು ನಾವು ಕೇಳಿಲ್ಲ. ಆದರೆ, ನಮಗೆ ಬರಬೇಕಾದ ಪಾಲು ಕೊಟ್ಟರೆ ಸಾಕು. ಯುಪಿಎ ಮತ್ತು ಎನ್ಡಿಎ ಅವಧಿಯ ಅನುದಾನ ಬಗ್ಗೆ ಕೇಂದ್ರ ಸರರ್ಕಾರ ಶ್ವೇತಪತ್ರ ಹೊರಡಿಸಲಿ. ರಾಜ್ಯದ್ದು ನಾವು ಹೊರಡಿಸುತ್ತೇವೆ ಎಂದರು.
ರಾಜಸ್ವಸಂಗ್ರಹ ಕಡಿಮೆಯಾಗಿದೆ. ಹೀಗಾಗಿ ರಾಜ್ಯ ಸರಕಾರ ಕೇಂದ್ರದ ಮೇಲೆ ಆರೋಪ ಮಾಡುತ್ತಿದೆ ಎಂಬ ವಿಜಯೇಂದ್ರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ದೇಶದಲ್ಲಿ ಕರ್ನಾಟಕ ಎರಡನೇ ದೊಡ್ಡ ಟ್ಯಾಕ್ಸ್ ಪೇಯರ್ ಅಲ್ಲ ಎಂಬುದನ್ನು ಅವರು ಹೇಳಲಿ. ನಂತರ ರಾಜಸ್ವಸಂಗ್ರಹದ ಬಗ್ಗೆ ಚರ್ಚಿಸೋಣ. ನಮಗೆ ಬರಗಾಲ ಇದೆ. ನಮ್ಮ ಹಕ್ಕು ಅದನ್ನು ಕೇಳುತ್ತಿದ್ದೇವೆ ಅಷ್ಟೇ ಎಂದು ತಿರುಗೇಟು ನೀಡಿದರು.
ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಕೆಯಾಗಿಲ್ಲ: ಪ್ರತಿಭಟನೆ ಮಾಡುವದಿದ್ದರೆ ಫ್ರೀಡಂಪಾರ್ಕ್ನಲ್ಲಿ ಶಾಂತಿಯುತವಾಗಿ ಮಾಡಲಿ. ಮನೆಗೆ ಯಾರಾದ್ರು ನುಗ್ಗುತ್ತಾರೆ ಅಂದಾಗ ಪೊಲೀಸರು ಸುಮ್ಮನೆ ಇರುವುದಿಲ್ಲ. ರಾಜ್ಯದಲ್ಲಿ ಶಾಂತಿ-ಸುವ್ಯವಸ್ಥೆ ಕಾಪಾಡಬೇಕು. ಆ ಕೆಲಸವನ್ನು ಪೊಲೀಸರು ಮಾಡಿದ್ದಾರೆ. ಡಿ.ಕೆ.ಸುರೇಶ್ ಅವರ ಮನೆಗೆ ಮುತ್ತಿಗೆ ಹಾಕುತ್ತೇವೆ ಅಂತ ಬಂದಾಗ ಪೊಲೀಸರು ಕ್ರಮ ತೆಗೆದುಕೊಂಡಿದ್ದಾರೆ. ಪೊಲೀಸರಿಂದ ಯಾರ ಮೇಲೂ ಹಲ್ಲೆಯಾಗಿಲ್ಲ ಎಂದು ಸ್ಪಷ್ಟಪಡಿಸಿದರು.