ಬಿಜೆಪಿಯಲ್ಲಿ ಆಂತರಿಕ ಕಿತ್ತಾಟವಿಲ್ಲ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
ಹುಬ್ಬಳ್ಳಿ: ಬಿಜೆಪಿಯಲ್ಲಿ ಆಂತರಿಕ ಕಿತ್ತಾಟವಿಲ್ಲ. ಸಂವಹನದ ಕೊರತೆಯಿಂದ ವಿಧಾನಸಭೆ ಅಧಿವೇಶನದಲ್ಲಿ ಧರಣಿ ಅಥವಾ ಸಭಾತ್ಯಾಗ ಮಾಡುವ ಬಗ್ಗೆ ಗೊಂದಲ ಉಂಟಾಗಿತ್ತು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದ್ದಾರೆ.
ಶನಿವಾರ ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನಸಭೆ ಅಧಿವೇಶನದಲ್ಲಿ ನಡೆದ ಗೊಂದಲದ ಕುರಿತು ಶಾಸಕ ಎಸ್.ಆರ್.ವಿಶ್ವನಾಥ್ ಬಹಿರಂಗ ಹೇಳಿಕೆ ನೀಡಿದ್ದು ಸರಿಯಲ್ಲ. ಈ ಬಗ್ಗೆ ನಾವು ಸಹ ಶೀಘ್ರವೇ ಸಭೆ ಮಾಡುತ್ತೇವೆ ಎಂದರು.
ಬಕೆಟ್ ರಾಜಕಾರಣ ಮಾಡಲಾಗುತ್ತಿದೆ ಎಂದು ವಿಶ್ವನಾಥ್ ನೀಡಿರುವ ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ವಿಶ್ವನಾಥ್ ಏನು ಹೇಳಿದ್ದಾರೆ ಎಂದು ನನಗೆ ಗೊತ್ತಿಲ್ಲ. ನಮ್ಮ ಪಕ್ಷದಲ್ಲಿ ಒಂದು ವ್ಯವಸ್ಥೆ ಇದೆ, ಪಕ್ಷದ ಯಾವುದೇ ವಿಷಯವನ್ನು ಬಹಿರಂಗವಾಗಿ ಮಾತನಾಡಬಾರದು. ಈ ನಿಟ್ಟಿನಲ್ಲಿ ವಿಶ್ವನಾಥ್ ಅವರನ್ನು ಕರೆದು ಮಾತನಾಡುತ್ತೇನೆ ಎಂದರು.
ಕೇಂದ್ರ ಸರಕಾರದಿಂದ 'ಕಿನ್ಯಾ ದೇಶಕ್ಕೆ ಬೆಣ್ಣೆ ಕರ್ನಾಟಕಕ್ಕೆ ಸುಣ್ಣ' ಎಂಬ ಸಿಎಂ ಸಿದ್ದರಾಮಯ್ಯ ಮಾಡಿರುವ ಆರೋಪದ ಕುರಿತು ಪ್ರತಿಕ್ರಿಯಿಸಿದ ಅವರು, ವಿದೇಶ ಮಂತ್ರಾಲಯಕ್ಕೆ ಜಾಗತಿಕ ಮಟ್ಟದಲ್ಲಿ ಅನೇಕ ನೆರವು ನೀಡಬೇಕಾಗುತ್ತೆ. ಬೇರೆ ಬೇರೆ ರಾಜ್ಯಗಳಿಗೆ ಎಸ್.ಡಿ.ಆರ್.ಎಫ್ ಮತ್ತು ಎನ್.ಡಿ.ಆರ್.ಎಫ್ ಮೂಲಕ ಹಣ ಕೊಡುತ್ತಾ ಇರುತ್ತೇವೆ. ರಾಜ್ಯ ಸರಕಾರ ತನ್ನ ಖಾತೆಯಲ್ಲಿರುವ ಕೇಂದ್ರ ಸರಕಾರ ನೀಡಿರುವ ಹಣ ಮೊದಲು ಖರ್ಚು ಮಾಡಲಿ. ಅದನ್ನು ಬಿಟ್ಟು ಈ ರೀತಿ ಆರೋಪ ಮಾಡೋದು ಸರಿಯಲ್ಲ ಎಂದರು.
ರಾಜ್ಯ ಸರಕಾರದ ಬಳಿ ಹಣ ಇಲ್ಲದೆ ಇರೋದರಿಂದ ಬರ ಪರಿಹಾರ, ಕಾಮಗಾರಿ ಕೈಗೊಳ್ಳುತ್ತಿಲ್ಲ. ಭ್ರಷ್ಟಾಚಾರ, ಬೇರೆ ಬೇರೆ ಯೋಜನೆಗಳ ಗಳ ಹೆಸರಲ್ಲಿ ಹಣ ವ್ಯಯ ಮಾಡಲಾಗುತ್ತಿದೆ. ಕೆ.ಎಸ್.ಆರ್.ಟಿ.ಸಿ ಮತ್ತು ವಿದ್ಯುತ್ ನಿಗಮಗಳಿಗೆ ದುಡ್ಡು ಕೊಟ್ಟಿಲ್ಲ. ಮೊದಲು ನೀವು ಬರ ಪರಿಹಾರ ಕಾಮಗಾರಿ ಆರಂಭಿಸಿ ಎಂದರು.
ಮೋದಿ ಸರಕಾರ ಬಂದ ನಂತರ ಕರ್ನಾಟಕಕ್ಕೆ ಎಷ್ಟು ಹಣ ಕೊಟ್ಟಿದ್ದೇವೆ ಅನ್ನೋದನ್ನ ಶೀಘ್ರವೇ ನಿಮ್ಮ ಮುಂದೆ ಇಡುತ್ತೇನೆ ಎಂದು ಪ್ರಹ್ಲಾದ್ ಜೋಶಿ ಹೇಳಿದರು.