ಎಷ್ಟೇ ಕಷ್ಟವಾದರೂ ಸಂವಿಧಾನವನ್ನು ಉಳಿಸಿಕೊಳ್ಳುವ ಕೆಲಸ ಮಾಡಬೇಕು: ವಕೀಲರ ಪರಿಷತ್ ಸಮ್ಮೇಳನದಲ್ಲಿ ಸಿಎಂ ಸಿದ್ದರಾಮಯ್ಯ ಕರೆ
ಮೈಸೂರು,ಆ.12: ಎಷ್ಟೇ ಕಷ್ಟವಾದರೂ ಎಲ್ಲರೂ ಸಂವಿಧಾನವನ್ನು ಉಳಿಸಿಕೊಳ್ಳುವ ಕೆಲಸ ಮಾಡಬೇಕು. ವಿಶೇಷವಾಗಿ ವಕೀಲರು ಆ ಕೆಲಸ ಮಾಡಬೇಕು ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಕರೆ ನೀಡಿದ್ದಾರೆ.
ನಗರದ ವಸ್ತು ಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿ ಶನಿವಾರ ರಾಜ್ಯ ವಕೀಲರ ಪರಿಷತ್ ಆಯೋಜಿಸಿದ್ದ 10 ನೇ ರಾಜ್ಯಮಟ್ಟದ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಂವಿಧಾನಕ್ಕೆ ಬದ್ಧರಾಗಿ ಎಲ್ಲರೂ ನಡೆದುಕೊಳ್ಳಬೇಕು. ಸಂವಿಧಾನ ಜಾರಿಯಾದ್ದರಿಂದ ಎಲ್ಲರೂ ಸಮಾನರು. ಹಾಗಾಗಿ ಅಂತಹ ಸಂವಿಧಾನವನ್ನು ಉಳಿಸಿಕೊಳ್ಳು ಕೆಲಸವನ್ನು ಎಲ್ಲರೂ ಮಾಡಬೇಕು ಎಂದು ಹೇಳಿದರು.
ಈ ಹಿಂದೆ ರಾಜ ಪ್ರಭುತ್ವ ಇತ್ತು. ತಪ್ಪು ಮಾಡಿದರೆ ಶ್ರೀಮಂತರಿಗೆ ಒಂದು ಶಿಕ್ಷೆ ಬಡವರಿಗೆ ಒಂದು ಶಿಕ್ಷೆ ಎಂಬುದಿತ್ತು. ಆಗ ಜಾತಿ ವ್ಯವಸ್ಥೆ ಹೆಚ್ಚಿತ್ತು.ರಾಜ ಪ್ರಭುತ್ವದಲ್ಲಿ ಮನುವಾದ ಶಿಕ್ಷೆಯನ್ನು ತೀರ್ಮಾನ ಮಾಡುತ್ತಿತ್ತು. ಸಂವಿಧಾನ ಬಂದ ಮೇಲೆ ಪರಿಚ್ಛೇದ 14 ರಡಿಯಲ್ಲಿ ಎಲ್ಲರಿಗೂ ಒಂದೇ ಕಾನೂನು ಜಾರಿಯಾಯಿತು ಎಂದು ಹೇಳಿದರು.
ಸಮಾಜ ಮತ್ತು ಕಾನೂನಲ್ಲಿ ಯಾರೂ ಪೆದ್ದರೂ ಇಲ್ಲ.ಬುದ್ಧಿವಂತರೂ ಇಲ್ಲ.ಅವಕಾಶ ಸಿಕ್ಕಿದವರು ಮೇಲೆ ಹೋಗುತ್ತಾರೆ. ನಾನು ವಕೀಲ ನಾಗಿದ್ದವನು. ನಮ್ಮ ಅಪ್ಪ ವಕೀಲ ವೃತ್ತಿ ಬೇಡ ಎಂದು ವಿರೋಧಿಸುತ್ತಿದ್ದ. ವಕೀಲನಾದ ಮೇಲೆ ನಾನು ಮುಖ್ಯಮಂತ್ರಿಯಾಗಿದ್ದೇನೆ ಎಂದು ಹೇಳಿದರು.
ಅಂಬೇಡ್ಕರ್ ದಲಿತ ಸಮುದಾಯದಲ್ಲಿ ಹುಟ್ಟಿ ಹಲವಾರು ನೋವು ಸಂಕಟಗಳನ್ನು ಅನುಭವಿಸಿದರು. ಅವರ ಓದಿಗೆ ಬರೋಡ ಮಹರಾಜರು ಮತ್ತು ಶಾಹು ಮಹರಾಜರು ಸಹಾಯ ಮಾಡಿದರು. ಹಾಗಾಗಿ ಅವರು ಉತ್ತಮ ವಿದ್ಯಾಭ್ಯಾಸ ಮಾಡಿದರು. ಅವರ ಮೇದಾವಿನಿಂದ ಅವರು ಎಲ್ಲರೂ ಒಪ್ಪಿಕೊಳ್ಳುವ ಸಂವಿಧಾನ ನೀಡಿದರು. ಆ ಸಂವಿಧಾನ ಎಲ್ಲರನ್ನು ಒಳಗೊಂಡಿದೆ. ಅದನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ನಾವೆಲ್ಲರೂ ಕಾರ್ಯಪ್ರವೃತ್ತರಾಗಬೇಕಿದೆ ಎಂದು ಹೇಳಿದರು.
ವಕೀಲರಾದ ನೀವು ಬಡವರು, ಶಕ್ತಿ ಇಲ್ಲದವರ ಬಗ್ಗೆ ಸಿಂಪತಿ ತೋರಿ ಸಹಾಯ ಮಾಡುವ ಮನುಷ್ಯತ್ವ ಬೆಳೆಸಿಕೊಳ್ಳಬೇಕು. ಸಮಾಜದಲ್ಲಿ ಅಸಮಾನತೆ ಇದೆ. ಹಾಗಾಗಿ ನೀವು ಅಸಮಾನತೆಯನ್ನು ತೊಡೆದುಹಾಕುವ ಕೆಲಸ ಮಾಡಬೇಕು ಎಂದು ಹೇಳಿದರು.