ರಾಜ್ಯದ ಸರಕಾರಿ ಆಸ್ಪತ್ರೆ, ಆರೋಗ್ಯ ಕೇಂದ್ರಗಳಲ್ಲಿ ಔಷಧ ಕೊರತೆ ಇಲ್ಲ: ಸಚಿವ ದಿನೇಶ್ ಗುಂಡೂರಾವ್
"ತಾಂತ್ರಿಕ ಕಾರಣದಿಂದಾಗಿ ಟೆಂಡರ್ ವಿಳಂಬವಾಗಿದೆ"
ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Photo:X)
ಬೆಂಗಳೂರು: ಕೆಲವು ತಾಂತ್ರಿಕ ಕಾರಣದಿಂದಾಗಿ ಟೆಂಡರ್ ವಿಳಂಬವಾಗಿದೆ. ಈ ವರ್ಷವೂ ಇಂಡೆಂಟ್ ಪ್ರಕಾರವೇ ಔಷಧ ಖರೀದಿಗೆ ವ್ಯವಸ್ಥೆ ಮಾಡಲಾಗುತ್ತಿದ್ದು, ಸದ್ಯ, ರಾಜ್ಯದ ಸರಕಾರಿ ಆಸ್ಪತ್ರೆಗಳಲ್ಲಿ, ಆರೋಗ್ಯ ಕೇಂದ್ರಗಳಲ್ಲಿ ಔಷಧ ಕೊರತೆ ಇಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸ್ಪಷ್ಟಪಡಿಸಿದ್ದಾರೆ.
ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ 250ಕ್ಕೂ ಹೆಚ್ಚು ಅಗತ್ಯ ಔಷಧಗಳು ʼಔಟ್ ಆಫ್ ಸ್ಟಾಕ್ʼ ಎಂಬ ವರದಿ ಬಗ್ಗೆ ಪ್ರತಿಕ್ರಿಯಿಸಿದ ಅವರು, ಆರೋಗ್ಯ ಕೇಂದ್ರಗಳಲ್ಲಿ ಔಷಧಗಳ ಕೊರತೆ ಇಲ್ಲ. ನಮ್ಮ ಸರಕಾರ ಬಂದ ಆರಂಭದಲ್ಲಿ ಕೇವಲ ಶೇ.40ರಷ್ಟು ಔಷಧ ಮಾತ್ರ ಸಿಗುತ್ತಿತ್ತು. ಉಳಿದ ಔಷಧಗಳನ್ನು ಆಸ್ಪತ್ರೆಗಳಲ್ಲೇ ಖರೀದಿ ಮಾಡಲಾಗುತ್ತಿತ್ತು. ಈಗ ಶೇ.75ರಷ್ಟು ವೈದ್ಯಕೀಯ ಸರಬರಾಜು ನಿಗಮದಿಂದಲೇ ಔಷಧ ಪೂರೈಕೆಯಾಗುತ್ತಿದೆ ಎಂದರು.
ಸರಕಾರಿ ಆಸ್ಪತ್ರೆಗಳಲ್ಲಿ, ಆರೋಗ್ಯ ಕೇಂದ್ರಗಳಲ್ಲಿ ಯಾವ ಔಷಧ ಇಲ್ಲವೋ ಅಂಥವನ್ನು ಸ್ಥಳೀಯವಾಗಿ ಖರೀದಿಸಲು ಸೂಚನೆ ನೀಡಲಾಗಿದೆ. ಈ ಮೂಲಕ, ಔಷಧ ಕೊರತೆಯಾಗದಂತೆ ನೋಡಿಕೊಳ್ಳಲು ಸೂಚಿಸಲಾಗಿದೆ ಎಂದು ದಿನೇಶ್ ಗುಂಡೂರಾವ್ ತಿಳಿಸಿದರು.