ಬಿಜೆಪಿ ಅವಧಿಯ ಕೋವಿಡ್ ಹಗರಣ | ಭ್ರಷ್ಟಾಚಾರವಲ್ಲ, ಸಾಮೂಹಿಕ ಹತ್ಯೆ : ಸಚಿವ ಪ್ರಿಯಾಂಕ್ ಖರ್ಗೆ
"ಯಡಿಯೂರಪ್ಪ, ಶ್ರೀರಾಮುಲು ಹೆಣದ ಮೇಲೆ ಹಣ ಮಾಡಿದರು"
ಪ್ರಿಯಾಂಕ್ ಖರ್ಗೆ
ಬೆಂಗಳೂರು: ʼಬಿಜೆಪಿಯವರು ಕೋವಿಡ್ 19ರ ಸಮಯದಲ್ಲಿ ಹೆಣದ ಮೇಲೆ ಹಣ ಮಾಡಿದ್ದರು. ಇದು ಕೊರೊನಾದಿಂದ ಆಗಿರುವ ಸಾವುಗಳಲ್ಲ, ಬಿಜೆಪಿಯ ಹತ್ಯೆ. ಬಿಜೆಪಿಯಿಂದ ಕರ್ನಾಟಕದ ಜನರ ಹತ್ಯಾಕಾಂಡ ನಡೆದಿದೆ. ದುಡ್ಡಿನ ಆಸೆಗೆ ಇದೆಲ್ಲಾ ನಡೆದಿದೆʼ ಎಂದು ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ.
ರವಿವಾರ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, "ಕೋವಿಡ್ 19 ರ ಸಮಯದಲ್ಲಿ ಯಡಿಯೂರಪ್ಪ ಹಾಗೂ ಶ್ರೀರಾಮುಲು ಅವರು ಹೆಣದ ಮೇಲೆ ಹೇಗೆ ಹಣ ಮಾಡಿದರು ಎಂಬುದು ಜಸ್ಟೀಜ್ ಕುನ್ಹಾ ಅವರ ಕೊರೋನ ಮಧ್ಯಂತರ ವರದಿಯಲ್ಲಿದೆ. ಈ ಮಧ್ಯಂತರ ವರದಿಯಲ್ಲಿ ಸುಮಾರು 700 ಕೋಟಿ ರೂ. ಹಗರಣದ ಬಗ್ಗೆ ಬೆಳಕು ಚೆಲ್ಲಲಾಗಿದೆ" ಎಂದು ತಿಳಿಸಿದ್ದಾರೆ. ಈ ಕುರಿತು ವಿವರವಾದ ಪೋಸ್ಟ್ ಕೂಡ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ನಾನು ತಿನ್ನಲ್ಲ, ತಿನ್ನಲು ಬಿಡುವುದಿಲ್ಲ ಎಂದು ಹೇಳುತ್ತಿದ್ದ ಪ್ರಧಾನಿ ಮೋದಿಯವರು ಕರ್ನಾಟಕದಲ್ಲಿ ಬಿಜೆಪಿ ಸರಕಾರದ ಅವಧಿಯ 700 ಕೋಟಿ ರೂ. ಕೋವಿಡ್ ಹಗರಣದ ಬಗ್ಗೆ ಉತ್ತರಿಸಬೇಕು ಎಂದು ಸಚಿವ ಪ್ರಿಯಾಂಕ್ ಖರ್ಗೆ ಒತ್ತಾಯಿಸಿದ್ದಾರೆ.
"17.03.2020 ರಂದು 416.48 ಕೋಟಿ ಮೊತ್ತದ ಔಷಧಿಗಳು, ಕೆಮಿಕಲ್ ಗಳು, ವೈದ್ಯಕೀಯ ಸಲಕರಣೆಗಳನ್ನು ಖರೀದಿ ಮಾಡಲಾಗುತ್ತದೆ. 18.03.2020 ರಂದು ಆರೋಗ್ಯ ಇಲಾಖೆಯ ಅಡಿಯಲ್ಲಿ ಬರುವ ಅಗತ್ಯ ವಸ್ತುಗಳ ನಿಗಾವಹಿಸುವ ಸಮಿತಿಯು ನಮಗೆ 1.2 ಲಕ್ಷ ಪಿಪಿಇ ಕಿಟ್ಗಳು ಬೇಕು ಎಂದು ತೀರ್ಮಾನಿಸಿ ಒಂದು ಕಿಟ್ ಗೆ 2,117.53 ರೂ. ಎಂದು ತೀರ್ಮಾನ ಮಾಡಿದ್ದರು" ಎಂದು ಅವರು ಹಗರಣದ ಕುರಿತು ಬೆಳಕು ಚೆಲ್ಲಿದರು.
ಪಿಪಿಇ ಕಿಟ್ ಖರೀದಿಸುವಾಗ ತರಾತುರಿಯ ಕ್ರಮ ಕೈಗೊಂಡಿದ್ದಾರೆ ಎಂದು ಆರೋಪಿಸಿರುವ ಸಚಿವ ಪ್ರಿಯಾಂಕ್ ಖರ್ಗೆ ಯಾವುದೇ ಮುಂದಾಲೋಚನೆ ಮಾಡದೇ, ಇತರಡೆ ದರವನ್ನು ಪರಿಶೀಲನೆ ಮಾಡದೆ ಪಿಪಿಇ ಕಿಟ್ಗಳನ್ನು ಖರೀದಿ ಮಾಡಿದ್ದಾರೆ. ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪನವರು ಹಾಗೂ ಆರೋಗ್ಯ ಸಚಿವ ಶ್ರೀರಾಮುಲು ಅವರು ಅಧಿಕಾರಿಗಳಿಗೆ ನೀವು ಕಡತವನ್ನು ತಯಾರು ಮಾಡಿ ಮುಂದಿನದು ನಾವು ನೋಡಿಕೊಳ್ಳುತ್ತೇವೆ ಎಂದು ಸೂಚನೆ ನೀಡಿದ್ದರು ಎಂದು ತನಿಖೆಯ ವರದಿಯಲ್ಲಿದೆ ಎಂದು ಮಾಹಿತಿ ನೀಡಿದರು.
ʼ02.04.2020 ರಲ್ಲಿ ಯಡಿಯೂರಪ್ಪ ಅವರು ಡಿಎಚ್ ಬಿ ಹಾಂಕಾಂಗ್ ಗ್ಲೋಬಲ್ ಕಂಪನಿ ಗೆ ಪ್ರತಿ ಕಿಟ್ ಗೆ 2117 ರೂ.ವಿನಂತೆ 1 ಲಕ್ಷ ಪಿಪಿಇ ಕಿಟ್ ಸರಬರಾಜು ಮಾಡುವಂತೆ ನೇರ ಆದೇಶ ಕೊಡುತ್ತಾರೆ. ಅಂದರೆ ಒಟ್ಟು 21.18 ಕೋಟಿ ರೂಪಾಯಿಯಾಯಿತು. ಜೊತೆಗೆ ಇಷ್ಟು ಪ್ರಮಾಣದ ಪಿಪಿಇ ಕಿಟ್ ಗಳನ್ನು ಏಳು ದಿನದ ಒಳಗಾಗಿ ಸರಬರಾಜು ಮಾಡಬೇಕು ಇಲ್ಲದಿದ್ದರೆ ದಂಡ ವಿಧಿಸಲಾಗುವುದು ಎನ್ನುವ ಷರತ್ತನ್ನು ವಿಧಿಸಲಾಗುತ್ತದೆʼ ಎಂದು ಅವರು ತಿಳಿಸಿದ್ದಾರೆ.
ನಂತರ 10.04.2020 ರಂದು ಯಡಿಯೂರಪ್ಪ ಅವರಿಂದ ಮತ್ತೊಂದು ನೇರ ಆದೇಶ ಇದೇ ಡಿಎಚ್ ಬಿ ಕಂಪನಿಗೆ ಮತ್ತೊಮ್ಮೆ 1 ಲಕ್ಷ ಪಿಪಿಇ ಕಿಟ್ ಗಳನ್ನು ಸರಬರಾಜು ಮಾಡುವಂತೆ ಸೂಚಿಸಲಾಗುತ್ತದೆ. ಆದರೆ ಈ ಬಾರಿ 2,104.53 ರೂಪಾಯಿಗೆ ನೀಡುವಂತೆ ಹೇಳಲಾಗುತ್ತದೆ. ಇದೇ ದಿನದಂದು ಬಿಗ್ ಫಾರ್ಮಸಿಟಿಕಲ್ ಕಂಪನಿ ಅವರಿಗೂ 1 ಲಕ್ಷ ಕಿಟ್ ಗಳನ್ನು ಸರಬರಾಜು ಮಾಡುವಂತೆ ಸೂಚಿಸಲಾಗುತ್ತದೆ. ಇದನ್ನು ರೂ 2,049.84 ಗಳಿಗೆ ನೀಡುವಂತೆ ಸೂಚನೆ ನೀಡಲಾಗುತ್ತದೇ. ಅಂದರೆ 62.57 ಕೋಟಿ ಹಣದ ವಹಿವಾಟು ನಡೆದಿದೆ ಎಂದು ಸಚಿವ ಖರ್ಗೆ ಹೇಳಿದರು.
ಪ್ರಧಾನಿ ನರೇಂದ್ರ ಮೋದಿಯವರು ಡಿಜಿಟಲ್ ಇಂಡಿಯಾ, ಸ್ಕಿಲ್ ಇಂಡಿಯಾ, ಮೇಕ್ ಇನ್ ಇಂಡಿಯಾ ಹೀಗೆ ಅನೇಕ ಯೋಜನೆಗಳನ್ನು ಜಾರಿಗೆ ತರುತ್ತಾರೆ. ಪಾಪ ಇದನ್ನು ಬಿಜೆಪಿಯವರೇ ಹಾಳು ಮಾಡುತ್ತಿದ್ದಾರೆ. ಕರ್ನಾಟಕದಲ್ಲಿ ಹಾಗೂ ಭಾರತದಲ್ಲಿಯೇ ಸ್ಥಳೀಯವಾಗಿ ಪಿಪಿಇ ಕಿಟ್ ಗಳನ್ನು ತಯಾರು ಮಾಡುತ್ತಿದ್ದರೂ ಯಡಿಯೂರಪ್ಪನವರು ಏಕೆ ಚೀನಾದಿಂದ ತರಿಸಿಕೊಂಡರು ಎಂಬುದಕ್ಕೆ ಉತ್ತರವಿಲ್ಲ ಎಂದು ಟೀಕಿಸಿದ್ದಾರೆ.
ಕರ್ನಾಟಕ ಸ್ಟೇಟ್ ಮೆಡಿಕಲ್ ಸಪ್ಲೈ ಕಾರ್ಪೊರೇಷನ್ ಅವರು ವರದಿ ಪ್ರಕಾರ 14.03.2020 ರಂದು ಸುಮಾರು 1.2 ಲಕ್ಷ ಪಿಪಿಇ ಕಿಟ್ ಗಳನ್ನು 330.40 ರೂ.ಗೆ ಅಂದರೆ ಒಂದು ತಿಂಗಳ ಹಿಂದೆಯೇ ಖರೀದಿ ಮಾಡಿತ್ತು. ನಂತರ ಸುಮಾರು 1,900 ರೂ. ದರ ವ್ಯತ್ಯಾಸದಲ್ಲಿ ಖರೀದಿ ಮಾಡಲಾಗಿದೆ ಎಂದು ಪ್ರಿಯಾಂಕ್ ಖರ್ಗೆ ಆರೋಪಿಸಿದರು.
ಪೂರೈಕೆದಾರ ಕಂಪನಿಗಳು ತಾವು ಒಪ್ಪಿಕೊಂಡಂತೆ ಎಲ್ಲಾ ಬೇಡಿಕೆಗಳನ್ನು ಈಡೇರಿಸಿದ ಮೇಲೆ ಸರಕಾರದಿಂದ ಪಾವತಿಯಾಗಬೇಕು. ಆದರೆ ಯಡಿಯೂರಪ್ಪನವರ ಸರಕಾರ ತಲೆಬುಡವಿಲ್ಲದ ಚೀನಾ ಕಂಪನಿಗೆ ಶೇ. ನೂರರಷ್ಟು ಮುಂಗಡ ಹಣ ಪಾವತಿ ಮಾಡಿದೆ ಎಂದು ಪ್ರಿಯಾಂಕ್ ಆರೋಪಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರು, ಮೇಕಿಂಗ್ ಇಂಡಿಯಾ ಹೆಸರಿನಲ್ಲಿ ಚೀನಾದಿಂದ ಯಾವುದೇ ವಸ್ತುಗಳನ್ನು ಖರೀದಿಸಬಾರದು ಎಂದು ಹೇಳುತ್ತಾರೆ. ಆದರೆ ಅಂದಿನ ಗೃಹ ಸಚಿವರಾಗಿದ್ದ ಬಸವರಾಜ ಬೊಮ್ಮಾಯಿ ಅವರು, ಅಮಿತ್ ಶಾ ಅವರ ಆದೇಶವನ್ನು ಉಲ್ಲೇಖಿಸಿ ಎಲ್ಲರಿಗೂ ಆದೇಶವನ್ನು ನೀಡಿರುತ್ತಾರೆ. ಆದರೆ ಯಡಿಯೂರಪ್ಪನವರು ಚೀನಾ ಕಂಪನಿಯಿಂದಲೇ ನೇರವಾಗಿ ಖರೀದಿ ಮಾಡಿದ್ದಾರೆ. ಪ್ರಧಾನಿ ಅವರ ಆದೇಶವನ್ನು ಉಲ್ಲಂಘಿಸಿ, ಚೀನಾದಿಂದ ಖರೀದಿ ಮಾಡಲಾಗಿದೆ ಎಂದರೆ ಇದು ದೇಶದ್ರೋಹದ ಕೆಲಸವಲ್ಲವೇ? ಇದೇ ಕೆಲಸವನ್ನು ಕಾಂಗ್ರೆಸ್ ಸರಕಾರ ಮಾಡಿದ್ದರೆ, ದೇಶದ್ರೋಹಿಗಳು ಎಂದು ಹೇಳುತ್ತಿದ್ದರು. ಬಿಜೆಪಿ ಅವರ ನಿರ್ಲಕ್ಷಿತ ಧೋರಣೆಯಿಂದ ಹೆಚ್ಚು ಜನರು ಸತ್ತಿದ್ದಾರೆ ಹೊರತು, ಕೋವಿಡ್ ರೋಗದಿಂದ ಜನ ಸತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಡೈರೆಕ್ಟರೇಟ್ ಆಫ್ ಎಕನಾಮಿಕ್ಸ್ ಅಂಡ್ ಸ್ಟಾಟಿಸ್ಟಿಕ್ಸ್, ಭಾರತ ಸರಕಾರ ನೀಡಿರುವ ವರದಿಯಂತೆ 2 ಲಕ್ಷ 29 ಸಾವಿರ ಜನರು 2020 ಜನವರಿಯಿಂದ ಜುಲೈ ಅವಧಿಯಲ್ಲಿ ಹಾಗೂ 2021 ರ ಜನವರಿಯಿಂದ ಜುಲೈ ತನಕ 4.26 ಲಕ್ಷ ಜನರು ಸಾವನಪ್ಪಿದ್ದಾರೆ. ಆದರೆ ಬಿಜೆಪಿ ಸರಕಾರ 37,206 ಎಂದು ಸುಳ್ಳು ಹೇಳಿದೆ. ಜನರು ಅಂದಿನ ಬಿಜೆಪಿ ಸರಕಾರದ ನಿರ್ಲಕ್ಷ ಮತ್ತು ದುರಾಸೆಯಿಂದ ಸತ್ತಿದ್ದಾರೆ. ಈ ಅಂಕಿ-ಅಂಶಗಳನ್ನು ಕಾಂಗ್ರೆಸ್ ಸರಕಾರ ನೀಡಿರುವುದಲ್ಲ, ಬದಲಾಗಿ ಮೋದಿ ಸರಕಾರವೇ ನೀಡಿರುವುದು. ಕಳಪೆ ಮಾತ್ರೆಗಳು, ಕಳಪೆ ವ್ಯಾಕ್ಸಿನ್, ಪಿಪಿಇ ಕಿಟ್ ಹಾಗೂ ಇತರೆ ವೈದ್ಯಕೀಯ ಸಲಕರಣೆಗಳನ್ನು ತಂದು ಜನರ ಜೀವ ತೆಗೆಯಲಾಗಿದೆ. ಅನೇಕ ಮಕ್ಕಳು ತಂದೆ ತಾಯಿಗಳನ್ನು ಕರೆದುಕೊಂಡಿದ್ದಾರೆ. ಕುಟುಂಬದ ಆಧಾರವೇ ಬಿದ್ದು ಹೋಗಿದೆ. ಮಾಧ್ಯಮ ವರ್ಗವೇ ಸಂಕಷ್ಟದಲ್ಲಿದೆ. ಅನೇಕ ಉದ್ದಿಮೆಗಳು ಬಿದ್ದು ಹೋಗಿದ್ದು, ಜನ ಕೆಲಸವಿಲ್ಲದೆ ಅಲೆಯುತ್ತಿದ್ದಾರೆ. ಇದು ಭ್ರಷ್ಟಾಚಾರವಲ್ಲ ಸಾಮೂಹಿಕ ಹತ್ಯೆ ಎಂದು ಖರ್ಗೆ ಆರೋಪಿಸಿದ್ದಾರೆ.
ಬಿಜೆಪಿಯ ಬಾಡಿಗೆ ಭಾಷಣಕಾರರು ಹೇಳುವಂತೆ. ಪ್ರಧಾನಿ ಮೋದಿ ಅವರ ಲ್ಯಾಪ್ ಟಾಪ್ ಗೆ ದೇಶದ ಎಲ್ಲಾ ಆಸ್ಪತ್ರೆಗಳ ಸಿಸ್ಟಮ್ ಗಳು ಕನೆಕ್ಟ್ ಆಗಿವೆಯಂತೆ. ನೋಟು ಬ್ಯಾನ್ ಸಂದರ್ಭದಲ್ಲಿ ಹೊಸ ಎರಡು ಸಾವಿರ ರೂಪಾಯಿ ನೋಟುಗಳಿಗೆ ಜಿಪಿಎಸ್ ಚಿಪ್ ಗಳನ್ನು ಅಳವಡಿಸಲಾಗಿದೆ. ಐನೂರು ನೋಟುಗಳಿಗೆ ಯಾವುದೋ ಬಣ್ಣ ಬಳಿಯಲಾಗಿದೆ. ಎಲ್ಲಾ ನೋಟುಗಳನ್ನು ಒಂದೇ ಕಡೆ ಇಟ್ಟರೆ ಅದನ್ನು ಉಪಗ್ರಹದ ಮೂಲಕ ಕಂಡುಹಿಡಿಯಬಹುದು ಎಂದು ಮೋದಿ ಪ್ರಣೀತ ಬಾಡಿಗೆ ಭಾಷಣಕಾರರು ಹೇಳುತ್ತಿದ್ದರು ಎಂದು ವ್ಯಂಗ್ಯವಾಡಿದರು.
ಇಂತಹ ಮೋದಿ ಅವರಿಗೆ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ಏನು ನಡೆಯುತ್ತಿದೆ ಎಂಬುದು ತಿಳಿಯಲಿಲ್ಲವೇ? ನಾವು ಇಂದು ಬಿಜೆಪಿ ಕಾರ್ಯದಲ್ಲಿ ನಡೆದ ಕೋವಿಡ್ ಹಗರಣದ ಬಗ್ಗೆ ಸಾಕ್ಷಿ ಸಮೇತ ಮಾತನಾಡುತ್ತಿದ್ದೇವೆ. ನಾವುಗಳು ಸುಳ್ಳಿನ ಕಾರ್ಖಾನೆಯ ಮಾಲೀಕರಲ್ಲ ಎಂದು ವಾಗ್ದಾಳಿ ನಡೆಸಿದರು.