ಹೋಳಿ ಹಬ್ಬಕ್ಕೆ ರೈನ್ ಡ್ಯಾನ್ಸ್, ಪೂಲ್ ಡ್ಯಾನ್ಸ್ ಗೆ ಕಾವೇರಿ, ಬೋರ್ ವೆಲ್ ನೀರು ಬಳಸದಂತೆ ಸೂಚನೆ
ಬೆಂಗಳೂರು: ಹೋಳಿ ಸಾಂಸ್ಕೃತಿಕ ಆಚರಣೆಯ ಹಬ್ಬ. ಇದನ್ನು ತಮ್ಮ ಮನೆಗಳಲ್ಲಿ, ವಾಸಸ್ಥಳಗಳಲ್ಲಿ ಆಚರಿಸುವುದಕ್ಕೆ ಯಾವುದೇ ಅಭ್ಯಂತರ ಇಲ್ಲ. ಆದರೆ, ಮನೋರಂಜನೆಗಾಗಿ ವಾಣಿಜ್ಯ ಉದ್ದೇಶದಿಂದ ಆಯೋಜಿಸುವಂತಹ ರೈನ್ ಡ್ಯಾನ್ಸ್, ಪೂಲ್ ಡ್ಯಾನ್ಸ್ ಗಳಿಗೆ ಸಾರ್ವಜನಿಕ ಹಿತದೃಷ್ಠಿಯಿಂದ ಕಾವೇರಿ ನೀರು ಹಾಗೂ ಬೋರ್ ವೆಲ್ ನೀರು ಬಳಸದಂತೆ ಬೆಂಗಳೂರು ಜಲಮಂಡಳಿ ಸೂಚನೆ ನೀಡಿದೆ.
ಬುಧವಾರ ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಬೆಂಗಳೂರು ಜಲಮಂಡಳಿ ಅಧ್ಯಕ್ಷ ಡಾ.ವಿ.ರಾಮ್ ಪ್ರಸಾತ್ ಮನೋಹರ್, ಬೆಂಗಳೂರು ನಗರದಲ್ಲಿ ಮಳೆಯ ಅಭಾವದಿಂದಾಗಿ ಅಂತರ್ಜಲ ಮಟ್ಟ ಕುಸಿದಿರುವುದರಿಂದ ಸಾಕಷ್ಟು ಕೊಳವೆ ಬಾವಿಗಳು ಬತ್ತಿ ಹೋಗಿವೆ. ಈ ಸಂಬಂಧ, ಉಲ್ಬಣವಾಗಿರುವ ಸಮಸ್ಯೆಗಳನ್ನು ಮಂಡಳಿಯೂ ಸಮರ್ಪಕವಾಗಿ ನಿರ್ವಹಿಸಲು ಎಲ್ಲರ ಸಹಕಾರ ಬಹಳ ಮಹತ್ವದಾಗಿದೆ ಎಂದು ತಿಳಿಸಿದ್ದಾರೆ.
ಹೋಳಿ ಹಬ್ಬವನ್ನು ಸಾಂಸ್ಕೃತಿಕವಾಗಿ ಆಚರಣೆ ಮಾಡುವುದಕ್ಕೆ ಯಾವುದೆ ನಿಷೇಧ ಹೇರುವುದಿಲ್ಲ. ಆದರೆ, ಈ ಸಂದರ್ಭದಲ್ಲಿ ಮನೋರಂಜನೆಯಾಗಿ ವಾಣಿಜ್ಯ ಉದ್ದೇಶದಿಂದ ರೈನ್ ಡ್ಯಾನ್ಸ್, ಪೂಲ್ ಡ್ಯಾನ್ಸ್ ಆಯೋಜಿಸುವುದು ಸಮಂಜಸವಲ್ಲ. ಮನೋರಂಜನೆಗಾಗಿ ವಾಣಿಜ್ಯ ಉದ್ದೇಶದಿಂದ ಆಯೋಜಿಸುವಂತಹ ರೈನ್ ಡ್ಯಾನ್ಸ್, ಪೂಲ್ ಡ್ಯಾನ್ಸ್ ಗಳಿಗೆ ಸಾರ್ವಜನಿಕ ಹಿತದೃಷ್ಠಿಯಿಂದ ಕಾವೇರಿ ನೀರು ಹಾಗೂ ಬೋರ್ ವೆಲ್ ನೀರು ಬಳಸದಂತೆ ಈ ಮೂಲಕ ಸೂಚನೆ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.