ಪಕ್ಷದ ಸೂಚನೆ ಮೀರಿ ಮಾತನಾಡಿದವರಿಗೆ ನೋಟಿಸ್: ಡಿ.ಕೆ.ಶಿವಕುಮಾರ್ ಎಚ್ಚರಿಕೆ
ಹುಬ್ಬಳ್ಳಿ, ನ. 3: ಈಗ ಯಾರು, ಯಾರು ಪಕ್ಷದ ಸೂಚನೆ ಮೀರಿ ಮಾತನಾಡಿದ್ದಾರೊ ಅವರಿಗೆಲ್ಲಾ ನೋಟಿಸ್ ನೀಡುತ್ತೇವೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಎಚ್ಚರಿಕೆಯ ಸಂದೇಶ ನೀಡಿದರು.
ಐದು ವರ್ಷ ನಾನೆ ಸಿಎಂ ಎಂದು ಸಿದ್ದರಾಮಯ್ಯ ನೀಡಿರುವ ಹೇಳಿಕೆ ಕುರಿತು ಶುಕ್ರವಾರ ಹುಬ್ಬಳ್ಳಿಯ ಪ್ರವಾಸಿ ಮಂದಿರದ ಬಳಿ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಹೈಕಮಾಂಡ್ ತೀರ್ಮಾನ ಮಾಡಿದ ನಂತರ, ಇಬ್ಬರೂ ಸೇರಿ ಪ್ರಮಾಣವಚನ ಸ್ವೀಕರಿಸಿದ್ದೇವೆ. ಆಗ ನಿಮಗೆಲ್ಲಾ ಹೇಳಿದ್ವಾ ನಾವು? ಸುಮ್ಮನೆ ಯಾಕೆ ಇಲ್ಲದ ವಿಷಯ ನೀವೆ ಸೃಷ್ಟಿ ಮಾಡಿಕೊಳ್ಳುತ್ತೀರಾ? ಇದೆಲ್ಲಾ ಅವಶ್ಯಕತೆಯಿಲ್ಲ ಎಂದು ಹೇಳಿದರು.
ಅಧಿಕಾರ ಹಂಚಿಕೆ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶಿವಕುಮಾರ್, ಯಾವುದೇ ಆಸ್ತಿಯಿಲ್ಲ ಹಂಚಿಕೊಳ್ಳೋಕೆ. ರಾಜ್ಯವನ್ನು ಕರ್ನಾಟಕ ಎಂದು ನಾಮಕರಣ ಮಾಡಿ 50 ವರ್ಷಗಳಾಗಿವೆ. ರಾಜ್ಯದ ಜನ ಹಾಗೂ ಸರಕಾರಕ್ಕೆ ಈ ಸುವರ್ಣ ಹಬ್ಬ ಆಚರಿಸಲು ಒಂದು ಅವಕಾಶ ಇದೆ. ಇಡೀ ವರ್ಷ ಸಂಭ್ರಮಾಚರಣೆಗೆ ಸರಕಾರ ತೀರ್ಮಾನ ಮಾಡಿದೆ ಎಂದು ಅವರು ಹೇಳಿದರು.
ಕನ್ನಡ ಜ್ಯೋತಿಗೆ ನಿನ್ನೆ ಚಾಲನೆ ನೀಡಲಾಗಿದೆ. ಅದರ ಮುಂದುವರಿದ ಭಾಗವಾಗಿ ಗದಗದಲ್ಲಿ ಕಾರ್ಯಕ್ರಮ ಇಟ್ಟುಕೊಂಡಿದ್ದೇವೆ. ಈ ಸುವರ್ಣ ವರ್ಷಾಚರಣೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಈಗಾಗಲೆ ಭುವನೇಶ್ವರಿ ಭವನ ನಿರ್ಮಾಣ ಘೋಷಣೆ ಮಾಡಿದ್ದಾರೆ ಎಂದು ಶಿವಕುಮಾರ್ ತಿಳಿಸಿದರು.