ಈಡಿಗ ಸಮುದಾಯಕ್ಕೆ ಮತ್ತೊಂದು ಸಚಿವ ಸ್ಥಾನ, ನಿಗಮಕ್ಕೆ 500 ಕೋಟಿ ರೂ. ಅನುದಾನ ನೀಡುವಂತೆ ಒತ್ತಾಯ
ಈಡಿಗ, ಬಿಲ್ಲವ, ನಾಮಧಾರಿ ಸೇರಿ 25 ಪಂಗಡಗಳ ಜಾಗೃತ ಸಮಾವೇಶ
ಬೆಂಗಳೂರು: ಆರ್ಯ ಈಡಿಗ ಅಭಿವೃದ್ಧಿ ನಿಗಮಕ್ಕೆ 500 ಕೋಟಿ ರೂ.ಅನುದಾನ ಬಿಡುಗಡೆ ಮಾಡುವಂತೆ ಹಾಗೂ ತಮ್ಮ ಸಮುದಾಯಕ್ಕೆ ಮತ್ತೊಂದು ಸಚಿವ ಸ್ಥಾನ ನೀಡುವಂತೆ ಆರ್ಯ ಈಡಿಗ ಸಮುದಾಯದ ಮುಖಂಡರು ಸರಕಾರವನ್ನು ಆಗ್ರಹಿಸಿದ್ದಾರೆ.
ರವಿವಾರ ನಗರದ ಅರಮನೆ ಮೈದಾನದಲ್ಲಿ ನಡೆದ ಆರ್ಯ ಈಡಿಗರ ಸಂಘ ಅಮೃತ ಮಹೋತ್ಸವ ಹಾಗೂ ಈಡಿಗ, ಬಿಲ್ಲವ, ನಾಮಧಾರಿ ಸೇರಿದಂತೆ 25 ಪಂಗಡಗಳ ಬೃಹತ್ ಜಾಗೃತ ಸಮಾವೇಶದಲ್ಲಿ ಮಾತನಾಡಿದ ಆರ್ಯ ಈಡಿಗ ಸಮುದಾಯದ ಪ್ರಮುಖ ನಾಯಕರು, ಶಾಸಕರು ನಾರಾಯಣ ಗುರುಗಳ ಹೆಸರಿನಲ್ಲಿ ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ ಪೀಠಗಳು ಸ್ಥಾಪನೆಯಾಗಬೇಕು. ಅಲ್ಲದೇ, 50 ಲಕ್ಷ ಜನಸಂಖ್ಯೆ ಇರುವ ಈ ಸಮಾಜಕ್ಕೆ ಒಂದು ನಿಗಮ ಮಾಡುವ ಮೂಲಕ 500 ಕೋಟಿ ರೂಪಾಯಿ ಹಣ ಒದಗಿಸಬೇಕು. ಜೊತೆಗೆ, ಈಡಿಗ ಸಮುದಾಯದಿಂದ ಯಾರಾದರೂ ಮತ್ತೊಬ್ಬರಿಗೆ ಮಂತ್ರಿ ಸ್ಥಾನ ನೀಡಿ ಎಂದು ಸರಕಾರವನ್ನು ಒತ್ತಾಯಿಸಿದರು.
ಸಮಾವೇಶದಲ್ಲಿ ಭಾಗವಹಿಸಿದ್ದ ಶಾಸಕ ಬೇಳೂರು ಗೋಪಾಲಕೃಷ್ಣ ಮಾತನಾಡಿ, ಈ ಸಮಾಜ ಹಿಂದುಳಿದಿದೆ. ನಮ್ಮದೇ ಆದ ಸರಕಾರ ಬಂದಿದೆ. ನಮ್ಮದೇ ಮುಖ್ಯಮಂತ್ರಿಗಳಿದ್ದಾರೆ. ಈ ಸರಕಾರ ನಮ್ಮ ಪರವಾಗಿದೆ. ನಮ್ಮ ಸಮಾಜವನ್ನು ಎತ್ತರಕ್ಕೆ ಕೊಂಡೊಯ್ಯಬೇಕು. ನಾವು ಬಂಗಾರಪ್ಪನವರ ಗರಡಿಯಲ್ಲಿ ಕಲಿತವರು. ಈ ಸಮಾಜದ ಪರವಾಗಿ, ನಿಮ್ಮ ಪರವಾಗಿ ದನಿಯಾಗಿ ಇರುತ್ತೇವೆ ಎಂದು ತಿಳಿಸಿದರು.
ಮಾಜಿ ಸಚಿವ ಎಚ್.ಹಾಲಪ್ಪ ಮಾತನಾಡಿ, ಹಕ್ಕೋತ್ತಾಯ ಮಾಡಲು ಅಧಿಕಾರದಲ್ಲಿ ಇರುವವರನ್ನು ಕರೆದಿದ್ದೇವೆ. ನಮ್ಮ ಹಕ್ಕು. ನಮ್ಮ ಸಮಾಜದಲ್ಲಿ ಮೂಲಭೂತ ಸಮಸ್ಯೆಗಳಿವೆ. ಡಿ.ಕೆ.ಶಿವಕುಮಾರ್ ಅವರನ್ನು ಟ್ರಬಲ್ ಶೂಟರ್ ಎನ್ನುತ್ತಾರೆ. ನಮ್ಮ ಸಮಸ್ಯೆಗಳನ್ನು ಹೋಗಲಾಡಿಸಬೇಕು ಎಂದರು.
ಮಾಜಿ ಸಚಿವ ಮಾಲಿಕಯ್ಯ ಗುತ್ತೇದಾರ್ ಮಾತನಾಡಿ, ಕಾಂತರಾಜ ಆಯೋಗದ ವರದಿಯನ್ನು ಬಹಿರಂಗಪಡಿಸಬೇಕು. ಆಗ ಹಿಂದುಳಿದ ಸಮುದಾಯದ ಸಮಸ್ಯೆಗಳಿಗೆ ಅನುಗುಣವಾಗಿ ಕಾರ್ಯಕ್ರಮಗಳನ್ನು ರೂಪಿಸಲು ಸಾಧ್ಯವಾಗುತ್ತದೆ. ಯಾವ ಪಕ್ಷ ನಮಗೆ ಸ್ಪಂದಿಸುತ್ತದೆಯೋ ಅದಕ್ಕೆ ಸಮುದಾಯ ಚಿರ ಋಣಿಯಾಗಿರಬೇಕಾಗುತ್ತದೆ. ಬಿ.ಕೆ.ಹರಿಪ್ರಸಾದ್ ಅವರು ಈ ಕಾರ್ಯಕ್ರಮಕ್ಕೆ ಬರಬೇಕಿತ್ತು. ಅವರಲ್ಲಿ ಏನು ವ್ಯತ್ಯಾಸವಿದೆಯೋ ಗೊತ್ತಿಲ್ಲ. ಸಮಾಜದಲ್ಲಿ ಈ ರೀತಿಯ ಒಡಕು ಬರಬಾರದು ಎಂದರು.
ಮಾಜಿ ಸಂಸದ ವಿನಯ್ ಕುಮಾರ್ ಸೊರಕೆ ಮಾತನಾಡಿ, ದೇವಾಲಯಕ್ಕೆ ಪ್ರವೇಶ ಇಲ್ಲದೆ ಇರುವಾಗ ಬ್ರಹ್ಮಶ್ರೀ ನಾರಾಯಣ ಗುರುಗಳು ದೇವಸ್ಥಾನವನ್ನು ನಿರ್ಮಿಸಿ, ಇಡೀ ಸಮಾಜಕ್ಕೆ ಬೆಳಕು ಕೊಡುವ ಕೆಲಸವನ್ನು ಮಾಡಿದರು. ಈಡಿಗರು ಮತ್ತು ಬಿಲ್ಲವರು ಅಣ್ಣತಮ್ಮಂದಿರಾಗಿದ್ದೇವೆ. ನಾವೆಲ್ಲ ಒಂದಾಗಿ ಸಾಗುತ್ತಿದ್ದೇವೆ ಎಂದರು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಚಿವ ಶಿವರಾಜ್ ತಂಗಡಗಿ ಮಾತನಾಡಿ, ನಾರಾಯಣ ಗುರುಗಳ ಹಾದಿಯಲ್ಲಿ ಹೊರಟವರು ಸಿದ್ದರಾಮಯ್ಯನವರು. ಈ ಹಿಂದೆ ಸಿಎಂ ಆಗಿದ್ದಾಗಲೂ ಪ್ರಾಣಾಳಿಕೆಯಲ್ಲಿ ಘೋಷಣೆ ಮಾಡಿದ್ದನ್ನು ಜಾರಿಗೆ ತಂದಿದ್ದರು ಎಂದು ಶ್ಲಾಘಿಸಿದರು.
ನಟ ಶಿವರಾಜ್‍ಕುಮಾರ್ ಮಾತನಾಡಿ, ನನ್ನ ಪತ್ನಿ ರಾಜಕಾರಣದಲ್ಲಿದ್ದಾರೆ, ಅವರ ಆಯ್ಕೆಯನ್ನು ಬೆಂಬಲಿಸುವುದು ನಮ್ಮ ಕರ್ತವ್ಯ. ಅವರ ಇಚ್ಛೆಗೆ ಬದ್ಧನಾಗಿದ್ದೇನೆ. ನನ್ನ ಸಹಕಾರ ಅವರಿಗೆ ಇದ್ದೇ ಇರುತ್ತದೆ ಎಂದರು.
ಸಮಾವೇಶದಲ್ಲಿ ಆರ್ಯ ಈಡಿಗ ಸಮಾಜದ ವಿಖ್ಯಾತಾನಂದ ಸ್ವಾಮೀಜಿ, ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ, ರೇಣುಕಾನಂದ ಸ್ವಾಮೀಜಿ, ಯೋಗೇಂದ್ರ ಅವಧೂತರು, ಅರುಣಾನಂದ ಸ್ವಾಮೀಜಿ, ಸತ್ಯಾನಂದ ತೀರ್ಥ ಸ್ವಾಮೀಜಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಚಿವ ಮಧು ಬಂಗಾರಪ್ಪ, ಚಿತ್ರನಟ ಶಿವರಾಜ್‍ಕುಮಾರ್, ಶ್ರೀಮುರಳಿ, ಪ್ರದೇಶ ಆರ್ಯ ಈಡಿಗರ ಸಂಘದ ಅಧ್ಯಕ್ಷ ಡಾ.ಎಂ. ತಿಪ್ಪೇಗೌಡ, ಶಾಸಕರುಗಳಾದ ಭೀಮಣ್ಣ ನಾಯಕ, ಎಚ್.ಆರ್.ಗವಿಯಪ್ಪ, ಉಮಾನಾಥ್ ಕೋಟ್ಯನ್ ಹಾಗೂ ಕುಮಾರ ಬಂಗಾರಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.