ಅಶ್ಲೀಲ ಪೋಸ್ಟ್ ಪ್ರಕರಣ | FIR ಎಸ್‍ಐ ದಾಖಲಿಸಿದರೆ ತಪ್ಪಲ್ಲ: ಹೈಕೋರ್ಟ್
ಬೆಂಗಳೂರು, ಜು.24: ಮಹಿಳೆ ಹೆಸರಿನಲ್ಲಿ ನಕಲಿ ಇನ್‍ಸ್ಟಾಗ್ರಾಂ ಖಾತೆ ತೆರೆದು ಅಶ್ಲೀಲ ಮತ್ತು ಅಸಭ್ಯ ಪೋಸ್ಟ್ ಮಾಡಿದ ಆರೋಪದಲ್ಲಿ ಮಾಹಿತಿ ತಂತ್ರಜ್ಞಾನದ ಕಾಯ್ದೆಯಡಿ ಪೊಲೀಸ್ ಸಬ್ ಇನ್ಸ್‍ಪೆಕ್ಟರ್ ಎಫ್‍ಐಆರ್ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ ಎಂಬ ತಾಂತ್ರಿಕ ಕಾರಣ ಮುಂದಿಟ್ಟುಕೊಂಡು ಪ್ರಕರಣ ರದ್ದತಿಗೆ ಕೋರಿ ವಿದ್ಯಾರ್ಥಿಯೊಬ್ಬ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
ಅಶ್ಲೀಲ ಪೋಸ್ಟ್ ಪ್ರಕರಣದಲ್ಲಿ ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ದೂರು ದಾಖಲಿಸಲು ಯಾವುದೇ ನಿರ್ಬಂಧವಿಲ್ಲ. ಆದರೆ, ಪೊಲೀಸ್ ಇನ್ಸ್ ಪೆಕ್ಟರ್ ಶ್ರೇಣಿಯ ಅಧಿಕಾರಿಯೇ ತನಿಖೆ ನಡೆಸಬೇಕು ಎಂದು ಸ್ಪಷ್ಟಪಡಿಸಿರುವ ಹೈಕೋರ್ಟ್, ವಿದ್ಯಾರ್ಥಿ ವಿರುದ್ಧದ ತನಿಖೆಗೆ ಹಸಿರು ನಿಶಾನೆ ತೋರಿದೆ.
ಈ ಕುರಿತಂತೆ ತನ್ನ ವಿರುದ್ಧ ಬೆಳಗಾವಿ ನಗರದ ಸಿಇಎನ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‍ಐಆರ್ ರದ್ದುಪಡಿಸಬೇಕು ಎಂದು ಕೋರಿ ವಿದ್ಯಾರ್ಥಿ ರಫೀಕ್ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿ ಹೈಕೋರ್ಟ್ ನ್ಯಾಯಪೀಠವು ಈ ಆದೇಶ ಮಾಡಿದೆ.
ತನ್ನ ಹೆಸರಿನಲ್ಲಿ ರಫೀಕ್ ನಕಲಿ ಇನ್‍ಸ್ಟಾಗ್ರಾಂ ಖಾತೆ ತೆರೆದು ಅಶ್ಲೀಲ ಮತ್ತು ಅಸಭ್ಯಕರವಾದ ಪೋಸ್ಟ್ ಪ್ರಕಟಿಸಿದ್ದು, ಆತನ ವಿರುದ್ಧ ಕ್ರಮ ಜರುಗಿಸಬೇಕು ಎಂದು ಕೋರಿ ದೂರುದಾರ ಮಹಿಳೆ ಬೆಳಗಾವಿ ನಗರ ಸಿಇಎನ್ ಠಾಣೆಗೆ ದೂರು ನೀಡಿದ್ದರು.