ಅಶ್ಲೀಲ ವಿಡಿಯೋ ಪ್ರಕರಣ : ಐವರು ಸಂತ್ರಸ್ತೆಯರು ಎಸ್ಐಟಿ ಮುಂದೆ ಹಾಜರು
ಪ್ರಜ್ವಲ್ ರೇವಣ್ಣ
ಬೆಂಗಳೂರು : ಹಾಸನ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೊ ಪೆನ್ಡ್ರೈವ್ ಪ್ರಕರಣ ಸಂಬಂಧ ವಿಶೇಷ ತನಿಖಾ ತಂಡದ(ಎಸ್ಐಟಿ) ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದು, ಐವರು ಸಂತ್ರಸ್ತ ಮಹಿಳೆಯರನ್ನು ವಿಚಾರಣೆ ನಡೆಸಿ, ಅವರ ಹೇಳಿಕೆ ದಾಖಲು ಮಾಡಿಕೊಂಡಿದ್ದಾರೆ.
ಸೋಮವಾರ ಎಸ್ಐಟಿ ಅಧಿಕಾರಿ ಸೀಮಾ ಲಾಟ್ಕರ್ ನೇತೃತ್ವದ ತನಿಖಾ ತಂಡವೂ ಐವರು ಸಂತ್ರಸ್ತೆಯರನ್ನು ವಿಚಾರಣೆಗೊಳಪಡಿಸಿದರು. ಜತೆಗೆ ವಿಡಿಯೋನಲ್ಲಿರುವ ದಾಖಲೆ ಜತೆಗೆ, ಅವರ ಹೇಳಿಕೆಗಳನ್ನು ದಾಖಲು ಮಾಡಿಕೊಂಡರು. ಈ ಸಂದರ್ಭದಲ್ಲಿ ಸಂತ್ರಸ್ತೆರು ಆರೋಪಿ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯವೆಸಗಿರುವ ಕುರಿತು ದೂರುಗಳನ್ನು ಸಲ್ಲಿಕೆ ಮಾಡಿದರು ಎಂದು ಮೂಲಗಳು ತಿಳಿಸಿವೆ.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿನ ಸಿಐಡಿ ಪ್ರಧಾನ ಕಚೇರಿಯಲ್ಲಿ ಎಸ್ಐಟಿ ಮುಖ್ಯಸ್ಥ ಬಿ.ಕೆ. ಸಿಂಗ್ ಅವರ ನೇತೃತ್ವದಲ್ಲಿ ಈ ಸಭೆ ನಡೆದಿದ್ದು, ಐಪಿಎಸ್ ಅಧಿಕಾರಿಗಳಾದ ಸುಮನ್ ಡಿ., ಸೀಮಾ ಲಾಟ್ಕರ್ ಭಾಗವಹಿಸಿದ್ದರು.
ಸಭೆಯಲ್ಲಿ ಪ್ರಮುಖವಾಗಿ ವಿಶೇಷ ತನಿಖಾ ತಂಡದಲ್ಲಿ ಎಷ್ಟು ಮಂದಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಇರಬೇಕು. ಯಾರನ್ನು ಈ ತಂಡಕ್ಕೆ ನೇಮಿಸಿಕೊಳ್ಳಬೇಕು. ಯಾವ ಯಾವ ವಿಭಾಗಗಳಿಂದ ಅಧಿಕಾರಿ ಮತ್ತು ಸಿಬ್ಬಂದಿಯನ್ನು ತೆಗೆದುಕೊಳ್ಳಬೇಕು. ತನಿಖೆ ಯಾವ ಸ್ವರೂಪದಲ್ಲಿರಬೇಕು ಎಂಬಿತ್ಯಾದಿ ಮಹತ್ವದ ವಿಷಯಗಳ ಬಗ್ಗೆ ಚರ್ಚೆ ನಡೆಸಲಾಯಿತು ಎಂದು ತಿಳಿದುಬಂದಿದೆ.
ಏನಿದು ಪ್ರಕರಣ: ಹಾಸನ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಸೇರಿದ್ದು ಎನ್ನಲಾದ ಅಶ್ಲೀಲ ವಿಡಿಯೊ ಹಾಸನದಲ್ಲಿ ಹರಿದಾಡುತ್ತಿದ್ದು, ರಾಜ್ಯ ಮಹಿಳಾ ಆಯೋಗ ಪ್ರಕರಣವನ್ನು ಎಸ್ಐಟಿ ತನಿಖೆಗೆ ವಹಿಸಬೇಕೆಂದು ಮನವಿ ಮಾಡಿದ ಹಿನ್ನೆಲೆಯಲ್ಲಿ ಸರಕಾರ ಪ್ರಕರಣವನ್ನು ವಿಶೇಷ ತನಿಖಾ ತಂಡಕ್ಕೆ ವಹಿಸಿದೆ.