ವಿಧಾನಸಭೆ ಸಭಾಂಗಣದಲ್ಲಿ ನೆಹರೂ, ರಾಜೇಂದ್ರ ಪ್ರಸಾದ್, ಮೌಲಾನಾ ಅಝಾದ್, ಇಂದಿರಾ ಗಾಂಧಿ ತೈಲಚಿತ್ರ
ಸ್ಪೀಕರ್ ಯು.ಟಿ. ಖಾದರ್ ಮುತುವರ್ಜಿ, ದೇಶ ಕಟ್ಟಿದ ನಾಯಕರಿಗೆ ಗೌರವ
ಬೆಳಗಾವಿ: ವಿಧಾನಸಭೆಯ ಸಭಾಂಗಣದಲ್ಲಿ ದೇಶದ ಪ್ರಥಮ ರಾಷ್ಟ್ರಪತಿ ಹಾಗೂ ಸಂವಿಧಾನ ರಚನಾ ಸಭೆಯ ಅಧ್ಯಕ್ಷರಾಗಿದ್ದ ಬಾಬು ರಾಜೇಂದ್ರ ಪ್ರಸಾದ್, ಸ್ವತಂತ್ರ ಭಾರತದ ಮೊದಲ ಪ್ರಧಾನಿ ಜವಹರಲಾಲ್ ನೆಹರೂ, ದೇಶದ ಮೊದಲ ಶಿಕ್ಷಣ ಸಚಿವರಾಗಿದ್ದ ಮೌಲಾನಾ ಅಝಾದ್ ಹಾಗೂ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ತೈಲ ವರ್ಣಚಿತ್ರ ಅನಾವರಣಗೊಳ್ಳಲಿದೆ. ಸಭಾಧ್ಯಕ್ಷರಾದ ಯು.ಟಿ ಖಾದರ್ ಅವರ ಮುತುವರ್ಜಿಯಿಂದ ಈ ನಾಲ್ಕು ಮಹನೀಯರ ತೈಲವರ್ಣ ಚಿತ್ರಗಳನ್ನು ವಿಧಾನಸಭೆ ಸಭಾಂಗಣದಲ್ಲಿ ಅನಾವರಣಗೊಳ್ಳಲಿದೆ.
ಸೋಮವಾರ (ಡಿ.16) ರಂದು ವಿಧಾನಸಭೆ ಸಭಾಧ್ಯಕ್ಷರಾದ ಯು.ಟಿ ಖಾದರ್ ಅಧ್ಯಕ್ಷತೆಯಲ್ಲಿ ದೇಶ ಕಂಡ ಈ ಮಹನೀಯರ ತೈಲ ವರ್ಣಚಿತ್ರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ. ಈ ಸಂದರ್ಭದಲ್ಲಿ ಉಪ ಸಭಾಧ್ಯಕ್ಷರಾದ ರುದ್ರಪ್ಪ ಲಮಾಣಿ, ವಿರೋಧ ಪಕ್ಷದ ನಾಯಕರಾದ ಆರ್. ಅಶೋಕ್, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಎಚ್.ಕೆ. ಪಾಟೀಲ್, ಬೆಳಗಾವಿ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ಇತರ ಸಚಿವರು ಮತ್ತು ಶಾಸಕರು ಉಪಸ್ಥಿತರಿರಲಿದ್ದಾರೆ.
ಇದರ ಜೊತೆಗೆ ಈಗಾಗಲೇ ಅನಾವರಣಗೊಂಡಿರುವ ಡಾ. ಬಿ ಆರ್ ಅಂಬೇಡ್ಕರ್, ಸುಭಾಷ್ ಚಂದ್ರ ಬೋಸ್ ಹಾಗೂ ಸ್ವಾಮಿ ವಿವೇಕಾನಂದ ಅವರ ಹಳೆಯ ತೈಲ ವರ್ಣಚಿತ್ರ ಬದಲಾಯಿಸಿ ಹೊಸ ತೈಲ ವರ್ಣಚಿತ್ರ ಅಳವಡಿಸಲು ನಿರ್ಧರಿಸಲಾಗಿದೆ. ಈಗಾಗಲೇ ಇರುವ ತೈಲವರ್ಣ ಚಿತ್ರ ಸರಿಯಾಗಿ ಗೋಚರಿಸುತ್ತಿಲ್ಲ ಎಂಬ ಬಗ್ಗೆ ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ ಈ ಮೂವರು ಮಹನೀಯರ ಹೊಸ ತೈಲವರ್ಣ ಚಿತ್ರವನ್ನು ಇದೇ ಸಂದರ್ಭದಲ್ಲಿ ಅನಾವರಣಗೊಳಿಸಲಾಗುತ್ತದೆ.