ಸಂವಿಧಾನದ ಪ್ರತಿಯ ಪ್ರಸ್ತಾವನೆಯಿಂದ ‘ಜಾತ್ಯತೀತ’, ‘ಸಮಾಜವಾದ‘ ಪದಗಳನ್ನು ಕೈಬಿಟ್ಟಿರುವುದು ದೇಶದ್ರೋಹ ಕೃತ್ಯ: ಸಿಎಂ ಸಿದ್ದರಾಮಯ್ಯ
ಬೆಂಗಳೂರು, ಸೆ.21: ನೂತನ ಸಂಸತ್ ಭವನದ ಪ್ರವೇಶದ ನೆನಪಿಗಾಗಿ ಸಂಸದರಿಗೆ ಕೇಂದ್ರ ಸರಕಾರ ನೀಡಿರುವ ಸಂವಿಧಾನದ ಪ್ರತಿಯ ಪ್ರಸ್ತಾವನೆಯಿಂದ ಜಾತ್ಯತೀತ ಮತ್ತು ಸಮಾಜವಾದ ಪದಗಳನ್ನು ಕಿತ್ತುಹಾಕಿರುವುದು ಭಾರತೀಯ ಜನತಾ ಪಕ್ಷದ ಅಂತರಂಗದಲ್ಲಿ ಸಂವಿಧಾನದ ಬಗ್ಗೆ ಇರುವ ಅಸಹನೆಗೆ ಸಾಕ್ಷಿ. ಇದು ಅತ್ಯಂತ ಖಂಡನೀಯ ಕೃತ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಿಡಿಕಾರಿದ್ದಾರೆ.
ಗುರುವಾರ ಟ್ವಿಟ್ ಮಾಡಿರುವ ಸಿಎಂ ಸಿದ್ದರಾಮಯ್ಯ ಅವರು, 1949ರ ಸಂವಿಧಾನದ ಪ್ರತಿಯನ್ನೇ ನೀಡಲಾಗಿದೆ ಎನ್ನುವುದು ತಮ್ಮೊಳಗಿನ ದುಷ್ಟ ಆಲೋಚನೆಯನ್ನು ಮುಚ್ಚಿಕೊಳ್ಳುವ ಪ್ರಯತ್ನವಾಗಿದೆ. ತಿದ್ದುಪಡಿಯಾದ ನಂತರ ಪರಿಷ್ಕೃತ ಪ್ರತಿಯನ್ನು ನೀಡಬೇಕಾಗಿರುವುದು ನ್ಯಾಯವೂ ಹೌದು, ಧರ್ಮವೂ ಹೌದು ಎಂದು ಹೇಳಿದ್ದಾರೆ.
1972ರಲ್ಲಿಯೇ ಸಂವಿಧಾನಕ್ಕೆ 42ನೆ ತಿದ್ದುಪಡಿ ಮಾಡಿ ‘’ಸಮಾಜವಾದಿ’’ ಮತ್ತು "ಜಾತ್ಯತೀತ" ಎಂಬ ಪದಗಳನ್ನು ಸೇರಿಸಲಾಗಿತ್ತು. ಈ ಪದಗಳನ್ನು ಕಿತ್ತುಹಾಕಿರುವುದು ಸಂವಿಧಾನ ವಿರೋಧಿ ನಡೆ ಮಾತ್ರವಲ್ಲ, ಇದೊಂದು ದೇಶದ್ರೋಹ ಕೃತ್ಯವಾಗಿದೆ. ಇದು ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಮಾಡಿರುವ ಅವಮಾನವಾಗಿದೆ ಎಂದು ತಿಳಿಸಿದ್ದಾರೆ.
ಸಂವಿಧಾನದ ಬಗ್ಗೆ ಬಿಜೆಪಿ ಮತ್ತು ಅದರ ಮಾತೃಸಂಸ್ಥೆಯಾಗಿರುವ ಆರೆಸೆಸ್ಸ್‍ಗೆ ಇರುವ ವಿರೋಧಕ್ಕೆ ಇತಿಹಾಸ ಸಾಕ್ಷಿ. ಸಂವಿಧಾನವನ್ನು ದೇಶ ಒಪ್ಪಿಕೊಂಡ ಕಾಲದಲ್ಲಿಯೇ ಆರೆಸೆಸ್ಸ್ ಅದನ್ನು ವಿರೋಧಿಸಿತ್ತು. ಈ ಸಂವಿಧಾನದಲ್ಲಿ ಭಾರತೀಯತೆ ಇಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದ್ದನ್ನು ಮರೆಯಲಾಗದು ಎಂದರು.
ಅಟಲ್‍ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗ ಸಂವಿಧಾನದ ಪುನರ್ ಪರಿಶೀಲನೆಗೊಳಪಡಿಸುವ ವಿಫಲ ಪ್ರಯತ್ನ ನಡೆದಿರುವುದನ್ನು ದೇಶದ ಜನತೆ ಮರೆತಿಲ್ಲ. ನರೇಂದ್ರ ಮೋದಿ ಅವರು ಪ್ರಧಾನಿಯಾದ ನಂತರದ ಕಾಲದಲ್ಲಿ ಬಿಜೆಪಿ ನಾಯಕರು ಮತ್ತು ಸಂಸದರು ನಿರಂತರವಾಗಿ ಸಂವಿಧಾನದ ಮೇಲೆ ದಾಳಿ ನಡೆಸಿದ್ದಕ್ಕೆ ದೇಶ ಸಾಕ್ಷಿಯಾಗಿದೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.