"ತಾಯಂದಿರಿಗೆ ನೆಮ್ಮದಿಯ ಬದುಕು ಕಟ್ಟಿಕೊಡಲು ರೂಪಿಸಿದ ʼಗೃಹಲಕ್ಷ್ಮಿʼಗೆ ಒಂದು ವರ್ಷ" : ಖುಷಿ ಹಂಚಿಕೊಂಡ ಸಿಎಂ ಸಿದ್ದರಾಮಯ್ಯ
ಬೆಂಗಳೂರು : ರಾಜ್ಯದ ಮಹಿಳೆಯರು, ಬಡ-ಮಧ್ಯಮ ವರ್ಗದ ಕುಟುಂಬಗಳ ಆರ್ಥಿಕ ಸಬಲೀಕರಣಕ್ಕಾಗಿ ಮತ್ತು ನಿರುದ್ಯೋಗಿ ಯುವಜನರಿಗೆ ಸಹಾಯ ಮಾಡಲು ರಾಜ್ಯ ಸರಕಾರ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿತ್ತು. ಈ ಪಂಚ ಗ್ಯಾರಂಟಿಗಳಲ್ಲಿ ಪ್ರಮುಖವಾದ ಗೃಹಲಕ್ಷ್ಮೀ ಯೋಜನೆಯು ಮನೆ ಯಜಮಾನಿಯರ ಆದಾಯದ ಮೂಲವಾಗಿಯೂ ಗುರುತಿಸಿಕೊಂಡಿದ್ದು, ಇದೀಗ ಈ ಯೋಜನೆ ಜಾರಿಯಾಗಿ ಒಂದು ವರ್ಷ ಪೂರೈಸಿದೆ. ಈ ಹಿನ್ನೆಲೆಯಲ್ಲಿ ಸಂತಸ ಹಂಚಿಕೊಂಡಿರುವ ಸಿಎಂ ಸಿದ್ದರಾಮಯ್ಯ, ಯೋಜನೆಯ ಫಲಾನುಭವಿಗಳ ಕುರಿತು ಪೋಸ್ಟ್ ಹಂಚಿಕೊಂಡಿದ್ದಾರೆ.
ರವಿವಾರ ಸಾಮಾಜಿಕ ಜಾಲತಾಣ ಎಕ್ಸ್ ಪೋಸ್ಟ್ನಲ್ಲಿ ಬರೆದುಕೊಂಡಿರುವ ಅವರು,"ನಾಡಿನ ನನ್ನ ಅಕ್ಕತಂಗಿಯರ, ತಾಯಂದಿರ ಕುಟುಂಬ ನಿರ್ವಹಣೆಯ ಹೊರೆಯನ್ನು ತಗ್ಗಿಸಿ, ಅವರಿಗೆ ನೆಮ್ಮದಿಯ ಬದುಕು ಕಟ್ಟಿಕೊಡಲು ರೂಪಿಸಿದ ಗೃಹಲಕ್ಷ್ಮಿ ಯೋಜನೆಯೀಗ ವರ್ಷ ಪೂರೈಸಿದೆ. ಈ ಸಂದರ್ಭದಲ್ಲಿ ಯೋಜನೆಯ ಪೂರ್ಣ ಸದುಪಯೋಗ ಪಡೆದು ನವ ಉತ್ಸಾಹದಿಂದ ಹೊಸ ಬದುಕಿನತ್ತ ಹೆಜ್ಜೆಹಾಕುತ್ತಿರುವ ಫಲಾನುಭವಿ ಮಹಿಳೆಯರ ಯಶೋಗಾಥೆಯಿವು. ಬೆರಳೆಣಿಕೆಯಷ್ಟು ಮಾತ್ರ ಬೆಳೆಕಿಗೆ ಬಂದಿವೆ, ಸುದ್ದಿಯಾಗದ ಲಕ್ಷಾಂತರ ಕತೆಗಳಿವೆ. ಈ ಎಲ್ಲವೂ ಯೋಜನೆಯ ಯಶಸ್ಸಿಗೆ ಹಿಡಿದ ಕನ್ನಡಿಯಾಗಿದೆ" ಎಂದು ಸಂತಸ ಹಂಚಿಕೊಂಡಿದ್ದಾರೆ.