ಬಿಜೆಪಿ ಅವಧಿಯಲ್ಲಿ ಮೀನುಗಾರರಿಗೆ ಕೇವಲ 30 ಮನೆ ನಿರ್ಮಾಣ: ಸಚಿವ ಮಾಂಕಾಳ ವೈದ್ಯ
ಫೋಟೊ -Facebook
ಬೆಂಗಳೂರು, ಜು.5: ರಾಜ್ಯದಲ್ಲಿ ಮೀನುಗಾರರಿಗೆ 5 ಸಾವಿರ ಮನೆಗಳನ್ನು ಮಂಜೂರು ಮಾಡಲಾಗಿದ್ದರೂ, ಕೇವಲ 30 ಮನೆಗಳನ್ನು ಮಾತ್ರ ನಿರ್ಮಾಣ ಮಾಡಲಾಗಿದೆ. 192 ಮನೆಗಳು ನಿರ್ಮಾಣ ಹಂತದಲ್ಲಿವೆ. ಅದನ್ನು ಬಿಟ್ಟರೆ ಇನ್ನುಳಿದಂತೆ ಯಾವುದೇ ಪ್ರಗತಿಯಾಗಿಲ್ಲ ಎಂದು ಮೀನುಗಾರಿಕೆ ಸಚಿವ ಮಂಕಾಳ ವೈದ್ಯ ತಿಳಿಸಿದ್ದಾರೆ.
ಬುಧವಾರ ವಿಧಾನ ಪರಿಷತ್ತಿನಲ್ಲಿ ನಾಗರಾಜ ಯಾದವ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಬಿಜೆಪಿ ಸರಕಾರದ ಅವಧಿಯಲ್ಲಿ ಏಕೆ ಮನೆಗಳ ನಿರ್ಮಾಣವಾಗಿರುವುದಿಲ್ಲ ಎಂಬುದು ಸೇರಿದಂತೆ ಅದರ ಆಳಕ್ಕೆ ಹೋಗುವುದರ ಬದಲಾಗಿ ಮೀನುಗಾರರಿಗೆ ಮಂಜೂರಾಗಿರುವ ಮನೆಗಳನ್ನು ನಿರ್ಮಿಸಿಕೊಡಲು ಒತ್ತು ನೀಡಲಾಗುವುದು ಎಂದು ಹೇಳಿದರು.
ಮಂಗಳೂರಿನಿಂದ ಕಾರವಾರ ಸಮೀಪ ಕಡಲತಡಿ ಕೊರೆತ ತಪ್ಪಿಸಲು ಶಾಶ್ವತ ಕ್ರಮ ಕೈಗೊಳ್ಳಲಾಗುವುದು. ಕಡಲತಡಿಯ ಜನರು ಆತಂಕದಿಂದ ಬದುಕುವಂತಾಗಿದೆ. ಅವರ ಆತಂಕವನ್ನು ದೂರ ಮಾಡಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.
ಮಂಗಳೂರಿನಿಂದ ಕಾರವಾರ ತನಕ 320 ಕಿ.ಮೀ. ಉದ್ದ ಬರಲಿದ್ದು, ಇದರಲ್ಲಿ 100 ಕಿ.ಮೀ. ತನಕ ಕಡಲತಡಿ ಕೊರೆತ ತಡೆಯಲು ಕ್ರಮ ಕೈಗೊಳ್ಳಲಾಗಿದೆ. ಇನ್ನು 220 ಕಿ.ಮೀ. ಉದ್ದದಲ್ಲಿ ಶಾಶ್ವತ ಪರಿಹಾರ ಕ್ರಮಗಳನ್ನು ಕೈಗೊಳ್ಳಲಾಗುವುದು. ಈ ನಿಟ್ಟಿನಲ್ಲಿ ಅಧಿಕಾರಿಗಳೊಂದಿಗೆ ಖುದ್ದು ಸ್ಥಳಕ್ಕೆ ಭೇಟಿ ನೀಡಿ ಶಾಶ್ವತ ಪರಿಹಾರ ಕಂಡುಕೊಳ್ಳಲು ಒತ್ತು ನೀಡಲಾಗುವುದು ಎಂದು ಅವರು ಹೇಳಿದರು.