"ಮಹಿಳೆಯರಿಗೆ ನಿಂದನೆಯಿಂದ ರಕ್ಷಣೆ ನೀಡುವ ಸೂಕ್ತ ಕಾನೂನು ಜಾರಿಗೆ ತರಬೇಕು": ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಗೆ ಬಹಿರಂಗ ಪತ್ರ ಬರೆದ ಲೇಖಕಿ ಬಾನು ಮುಷ್ತಾಕ್
ವಿಧಾನಸೌಧದಲ್ಲಿ ಸಿ.ಟಿ. ರವಿ ಆಕ್ಷೇಪಾರ್ಹ ಹೇಳಿಕೆ ಪ್ರಕರಣ
ಬಾನು ಮುಷ್ತಾಕ್ / ಲಕ್ಷ್ಮೀ ಹೆಬ್ಬಾಳ್ಕರ್
ಬೆಂಗಳೂರು: ವಿಧಾನಸೌಧದಲ್ಲಿ ಸಿ ಟಿ ರವಿ ಆಕ್ಷೇಪಾರ್ಹ ಹೇಳಿಕೆಗೆ ಸಂಬಂಧಿಸಿ ಲೇಖಕಿ ಬಾನು ಮುಷ್ತಾಕ್ ಅವರು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಗೆ ಬಹಿರಂಗ ಪತ್ರವನ್ನು ಬರೆದಿದ್ದು, ಕರ್ನಾಟಕದ ಮಹಿಳೆಯರಿಗೆ ಸಾರ್ವಜನಿಕ ನಿಂದನೆಯಿಂದ ರಕ್ಷಣೆ ನೀಡುವ ದೃಷ್ಟಿಯಿಂದ ಸೂಕ್ತ ಕಾನೂನನ್ನು ಜಾರಿಗೆ ತರಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.
ಪತ್ರದಲ್ಲೇನಿದೆ?
ಇತ್ತೀಚೆಗೆ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಸಿ.ಟಿ. ರವಿ ಎಂಬುವವರು ನಿಮ್ಮ ಬಗ್ಗೆ ಕೆಟ್ಟ ಶಬ್ದವನ್ನು ಬಳಸಿದರು ಎಂಬ ವಿಷಯದ ಬಗ್ಗೆ ನನ್ನ ಅನಿಸಿಕೆಯನ್ನು ನಿಮಗೆ ತಲುಪಿಸುತ್ತಿದ್ದೇನೆ. ಉಳಿದ ಸಂದರ್ಭದಲ್ಲಿ ಆಗಿದ್ದರೆ, ನಾನು ಈ ಬಗ್ಗೆ ಯಾವುದೇ ಪ್ರತಿಕ್ರಿಯೆಯನ್ನು ನೀಡುತ್ತಿರಲಿಲ್ಲ. ಏಕೆಂದರೆ ಒಬ್ಬ ಸಮರ್ಥ ಮತ್ತು ರಾಜಕೀಯವಾಗಿ ಬಲಿಷ್ಠ ಮಹಿಳೆ ಈ ಸಂದರ್ಭವನ್ನು ನಿರ್ವಹಿಸುವ ಕೌಶಲ್ಯವನ್ನು ಗಮನಿಸಿ ನನ್ನಷ್ಟಕ್ಕೆ ನಾನೇ ಭೇಷ್ ಎಂದು ಉದ್ಗರಿಸುತಿದ್ದೆ. ಆದರೆ ಮೀಡಿಯಾದಲ್ಲಿ ಬರುತ್ತಿರುವ ರಿಪೋರ್ಟ್ ಗಳನ್ನು ನೋಡಿದಾಗ ಎಲ್ಲೋ ನೀವು ಹಳಿ ತಪ್ಪುತ್ತಿದ್ದೀರಿ ಎಂದು ನನಗೆ ಅನಿಸಿತು. ಹೀಗಾಗಿ ಆ ವಿಷಯವನ್ನು ನಿಮ್ಮ ಜೊತೆಯಲ್ಲಿ ತುರ್ತಾಗಿ ಚರ್ಚಿಸಬೇಕು ಎಂದು ನಿಮಗೆ ಈ ಬಹಿರಂಗ ಪತ್ರವನ್ನು ಬರೆಯುತ್ತಿದ್ದೇನೆ.
ನಾನು ಕೇವಲ ಎರಡು ವಿಷಯಗಳ ಬಗ್ಗೆ ನನ್ನ ಅನಿಸಿಕೆಯನ್ನು ನಿಮ್ಮ ಮುಂದೆ ಇಡುತ್ತಿದ್ದೇನೆ. ಮೊದಲನೆಯದಾಗಿ ಚಾನಲ್’ಗಳಲ್ಲಿ ಬರುತ್ತಿರುವ ವಿವರಗಳನ್ನು ನೋಡಿದಾಗ ನೀವು ಪ್ರೆಸ್ ಮೀಟ್ ನಲ್ಲಿ ಕಣ್ಣೀರು ಹಾಕಿದಿರಿ, ಸಭಾಪತಿ ಬಸವರಾಜ ಹೊರಟ್ಟಿಯವರ ಸಮ್ಮುಖದಲ್ಲಿ ಕಣ್ಣೀರು ಹಾಕಿದಿರಿ ಎಂಬ ವರದಿಗಳು ಪ್ರಮುಖವಾಗುತ್ತಿವೆ. ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ ನೀವು ಯಾಕೆ ಕಣ್ಣೀರು ಹಾಕಬೇಕು? ನಿಮಗೆ ಇನ್ಸಲ್ಟ್ ಆಗಿದೆಯೇ? ಭಾವನಾತ್ಮಕವಾಗಿ ಗಾಯಗೊಂಡಿದ್ದೀರೋ? ಅಥವಾ ಆ ಶಬ್ದದ ಮೊನಚು ನಿಮಗೆ ನೋವುಂಟು ಮಾಡಿದೆಯೇ? ಅಥವಾ ನಿಮಗೆ ಅಂತಹ ವ್ಯಕ್ತಿಯಿಂದ ಗುಡ್ ಗರ್ಲ್ ಎಂಬ ಸರ್ಟಿಫಿಕೇಟ್ ಬೇಕಾಗಿದೆಯೇ? ನನಗೆ ಗೊತ್ತಿಲ್ಲ.
ಆದರೆ ಯಾರೋ ಒಬ್ಬ ವ್ಯಕ್ತಿ ಆಯುಧವನ್ನು ಬಳಸಲಿಲ್ಲ, ಕೋವಿಯನ್ನು ಬಳಸಲಿಲ್ಲ, ಆದರೆ ಕೇವಲ ಒಂದು ಶಬ್ದ ಪ್ರಯೋಗದಿಂದ ನಿಮ್ಮನ್ನು ದಿಕ್ಕೆಡಿಸಬಲ್ಲ ಎಂಬ ವಿಷಯವು ಆತನ ಅರಿವಿಗೆ ಬಂದಿದ್ದರಿಂದಲೇ ನಿಮ್ಮ ವಿರುದ್ಧ ಅಂತಹ ಶಬ್ದ ಪ್ರಯೋಗವನ್ನು ಮಾಡಿದ್ದಾರೆ ಎಂದು ನೀವು ಅರ್ಥ ಮಾಡಿಕೊಳ್ಳಬೇಕಿತ್ತು. ಆರಂಭದ ಕ್ಷಣಗಳಲ್ಲಿ ನೀವು ಭಾವುಕರಾಗಿದ್ದು, ಗೊಂದಲಕ್ಕೊಳಗಾಗಿರಬಹುದು ಎಂಬುದನ್ನು ನಾನು ಒಪ್ಪುತ್ತೇನೆ. ಆದರೆ ನಂತರದಲ್ಲಿ ಸಾರ್ವಜನಿಕವಾಗಿ ಯಾಕೆ ಕಣ್ಣೀರು ಹಾಕುತ್ತಿದ್ದೀರಿ? ಹೆಣ್ಣು ಮಕ್ಕಳಿಗೆ ಸರ್ಟಿಫಿಕೇಟ್ ನೀಡುವ ಅಥವಾ ನಿಂದಿಸುವ ಪ್ರಾಧಿಕಾರವನ್ನು ರಚಿಸಿ ಅದಕ್ಕೆ ಯಾರೋ ಒಬ್ಬ ನಿಂದಕ ಪುರುಷನನ್ನು ಅಧ್ಯಕ್ಷರನ್ನಾಗಿ ನೇಮಿಸಿದ್ದೀರೋ ಹೇಗೆ? ಆತನ ನಿಂದನೆಯನ್ನು ಆತನ ಜೋಳಿಗೆಗೆ ಮರಳಿಸುವ ಸಾಮರ್ಥ್ಯ ಖಂಡಿತ ನಿಮಗೆ ಇದ್ದೇ ಇದೆ. ಹೀಗಾಗಿ ನಾನು ಮತ್ತು ನನ್ನಂತಹವರು ನಿಮ್ಮ ಬಗ್ಗೆ ಅಪಾರ ಅಭಿಮಾನ ಮತ್ತು ಗೌರವವನ್ನು ಹೊಂದಿದ್ದೇವೆ. ನಿಮ್ಮ ಪ್ರತಿ ನಡೆ ನುಡಿಯು ಕೂಡ ಆತ್ಮಾಭಿಮಾನ ಮತ್ತು ಗೌರವದಿಂದ ಕೂಡಿರಲಿ ಎಂದು ಆಶಿಸುತ್ತೇನೆ.
ನೀವು ಬಲಹೀನರಲ್ಲ. ನಿಮ್ಮಂತಹವರೇ ಕಣ್ಣೀರು ಹಾಕಿದರೆ ನಾನು ಮತ್ತು ನನ್ನಂತಹ ಲಕ್ಷಾಂತರ ಮಹಿಳೆಯರ ಪಾಡೇನು? ನಮ್ಮನ್ನು ನೋಯಿಸುವ ಉದ್ವಿಗ್ನತೆಗೆ ಒಳಪಡಿಸುವ ಹೀನ ತಂತ್ರಗಾರಿಕೆಗಳು ಕೆಲವು ಪುರುಷರಿಗೆ ಸಿದ್ಧಿಸಿರುತ್ತವೆ. ಅಂತಹ ತಂತ್ರಗಳಿಗೆ ಪ್ರತಿತಂತ್ರಗಾರಿಕೆಯನ್ನು ನೀವು ಮಾಡಬೇಕೆ ಹೊರತು ಕಣ್ಣೀರು ಹಾಕುವುದಲ್ಲ. ನೀವು ಕಣ್ಣೀರು ಹಾಕುವುದರ ಮೂಲಕ ಕರ್ನಾಟಕದ ಅರ್ಧ ಜನಸಂಖ್ಯೆಯ ಮಹಿಳೆಯರಿಗೆ ಅಧೈರ್ಯದ ಸಂದೇಶವನ್ನು ನೀಡುತ್ತಿದ್ದೀರಿ ಎಂದು ವಿನಯಪೂರ್ವಕವಾಗಿ ಹೇಳಲು ಇಚ್ಛಿಸುತ್ತೇನೆ.
ಎರಡನೆಯದಾಗಿ, ನೀವು ಒಬ್ಬ ಸಚಿವೆಯ ಹುದ್ದೆ ಮತ್ತು ಸ್ಥಾನಮಾನದಲ್ಲಿ ಇರುವುದರಿಂದ ನಿಮ್ಮ ಮೇಲೆ ಜರಗುವ ವೈಯಕ್ತಿಕ ದಾಳಿ ಮತ್ತು ನಿಂದನೆಗಳು ವೈಯಕ್ತಿಕವಾಗಿ ಉಳಿಯುವುದಿಲ್ಲ ಬದಲಿಗೆ ಸಾರ್ವತ್ರಿಕರಣಗೊಳ್ಳುತ್ತವೆ. ಸಾರ್ವಜನಿಕ ಬದುಕಿನಲ್ಲಿ ತೊಡಗಿಸಿಕೊಂಡಿರುವ ಅಪಾರ ಹೆಣ್ಣು ಮಕ್ಕಳು ಈ ಪರಿಸ್ಥಿತಿಯನ್ನು ಪ್ರತಿದಿನ ಅನುಭವಿಸುತ್ತಿದ್ದಾರೆ.
ಒಂದು ಕಾನೂನಿನ ವಿಷಯವನ್ನು ಹೇಳಬೇಕು ಎಂದರೆ, 2005ರ ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆಯ ಅಡಿಯಲ್ಲಿ ಕಾನೂನು ತಜ್ಞರು “ಹಿಂಸೆ ಅಥವಾ ಕೌಟುಂಬಿಕ ದೌರ್ಜನ್ಯ” ಅನ್ನುವುದನ್ನು ವ್ಯಾಖ್ಯಾನಿಸಿದ್ದಾರೆ. ಒಬ್ಬ ಪತಿಗೆ ತನ್ನ ಪತ್ನಿಯ ಸ್ವಾಭಿಮಾನವನ್ನು ನಾಶ ಮಾಡುವ ಯಾವುದೇ ಹಕ್ಕಿಲ್ಲ ಎಂದು ಸದರಿ ಕಾನೂನಿನ ಅಡಿಯಲ್ಲಿ ದೈಹಿಕ ಹಿಂಸೆ, ಮಾನಸಿಕ ಹಿಂಸೆ, ಶಾಬ್ದಿಕ ಹಿಂಸೆ, ಭಾವನಾತ್ಮಕ ಹಿಂಸೆ, ಲೈಂಗಿಕ ಹಿಂಸೆ ಮತ್ತು ಆರ್ಥಿಕ ಹಿಂಸೆಗಳನ್ನು ಕಾಣಿಸಿದ್ದಾರೆ ಮತ್ತು ವ್ಯಾಖ್ಯಾನ ಮಾಡಿರುತ್ತಾರೆ. ಕೌಟುಂಬಿಕ ವಲಯದಲ್ಲಿ ನಾಲ್ಕು ಗೋಡೆಗಳ ನಡುವೆ ಒಬ್ಬ ಪತಿ ತನ್ನ ಪತ್ನಿಗೆ ನೋವನ್ನು ಉಂಟು ಮಾಡುವ ಮತ್ತು ಹಿಂಸೆ ನೀಡುವ ಶಬ್ದವನ್ನು ಬಳಕೆ ಮಾಡಬಾರದು ಎಂಬ ರಕ್ಷಣೆ ಇದೆ ಎಂಬ ಅಂಶವನ್ನು ನಿಮ್ಮ ಗಮನಕ್ಕೆ ತರಲು ಬಯಸುತ್ತೇನೆ.
ವೈಯಕ್ತಿಕ ಮತ್ತು ಖಾಸಗಿ ಬದುಕಿನಲ್ಲಿ ಮಹಿಳೆಗೆ ಈ ರೀತಿಯ ರಕ್ಷಣೆ ಇರುವಾಗ ಸಾರ್ವಜನಿಕವಾಗಿ ಕೂಡ ಆಕೆಗೆ ಈ ರೀತಿಯ ಹಿಂಸೆಗಳಿಂದ ರಕ್ಷಣೆ ಇರಬೇಕಲ್ಲವೇ? ನಿಮ್ಮ ವೈಯಕ್ತಿಕ ನೋವು ಎಂಬುದು ನೋವೇ ಅಲ್ಲ. ದೃಢವಾಗಿ ನಿಲ್ಲಿ ಎಂದು ಕೋರುತ್ತೇನೆ. ಸಾರ್ವಜನಿಕ ಬದುಕಿನಲ್ಲಿ ಮಹಿಳೆಯರಿಗೆ ಪುರುಷಾಡಳಿತದ ಕ್ರೂರ ವಿಕಾರಗಳಿಂದ ಹಿಂಸೆಯಿಂದ ರಕ್ಷಣೆ ನೀಡುವ ಕಾನೂನನ್ನು ರಾಜ್ಯದ ಮಟ್ಟಿಗಾದರೂ ಜಾರಿಗೆ ತನ್ನಿ. ಈ ನಿಟ್ಟಿನಲ್ಲಿ ಕಾನೂನು ತಜ್ಞರನ್ನು ಸಂಪರ್ಕಿಸಿ ಮತ್ತು ನಿಮ್ಮ ಸರ್ಕಾರದ ಕಾನೂನು ಇಲಾಖೆಯ ನೆರವನ್ನು ಪಡೆದು ಸೂಕ್ತ ಕಾನೂನನ್ನು ರೂಪಿಸಿ ಕರ್ನಾಟಕದ ಮಹಿಳೆಯರಿಗೆ ಸಾರ್ವಜನಿಕ ನಿಂದನೆಯಿಂದ ರಕ್ಷಣೆ ಕೊಡಿಸುವ ಸಕಾರಾತ್ಮಕ ಕ್ರಿಯೆಯಲ್ಲಿ ತೊಡಗಿಸಿಕೊಳ್ಳಿ ಎಂದು ನನ್ನ ಕೋರಿಕೆ.
ಮೂರನೇಯ ವಿಚಾರವು ಕೊನೆ ಗಳಿಗೆಯಲ್ಲಿ ನನ್ನ ನೆನಪಿಗೆ ಬಂದಿದೆ. ಒಬ್ಬ ವಯಸ್ಕ ಪುರುಷ ಮತ್ತು ಮಹಿಳೆ ಹೊಂದಬಹುದಾದ ಸಮ್ಮತಿಯ ಲೈಂಗಿಕ ಸಂಬಂಧವನ್ನು ನಮ್ಮ ದೇಶದ ಸರ್ವೋಚ್ಚ ನ್ಯಾಯಾಲಯವು ಮಾನ್ಯ ಮಾಡಿದೆ ಎಂಬ ಅಂಶವನ್ನು ಮತ್ತೊಮ್ಮೆ ಪ್ರಸ್ತಾಪಿಸುತ್ತಾ ನನ್ನ ಅನಿಸಿಕೆಗಳ ಅಂತಿಮ ಘಟ್ಟವನ್ನು ತಲುಪುತ್ತಿದ್ದೇನೆ.
ನಿಮ್ಮ ವೈಯಕ್ತಿಕ ಸಂಘರ್ಷವು ಇಡೀ ಕರ್ನಾಟಕ ರಾಜ್ಯದ ಮಹಿಳೆಯರಿಗೆ ಆಶಾದಾಯಕವಾದ ಮತ್ತು ಸ್ಪೂರ್ತಿದಾಯಕವಾದ ತಿರುವನ್ನು ನೀಡಲಿ ಎಂದು ಆಶಿಸುತ್ತೇನೆ ಎಂದು ಪ್ರೀತಿಯಿಂದ….
ಬಾನು ಮುಷ್ತಾಕ್