ರಾಜ್ಯ ಸರ್ಕಾರಿ ನೌಕರರ ಸಂಘದ ವಿರುದ್ಧ ವಿಚಾರಣೆಗೆ ಆದೇಶ
ಶಿವಮೊಗ್ಗ: ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘವು ಅವ್ಯವಹಾರ, ಭ್ರಷ್ಟಾಚಾರ, ಹಣ ದುರುಪಯೋಗ ನಡೆಸಿದೆ ಎಂಬ ಆರೋಪದ ಆಧಾರದಲ್ಲಿ ಈ ಸಂಬಂದ ವಿಚಾರಣೆ ನಡೆಸಿ, ಆರೋಪ ಸಾಬೀತಾದಲ್ಲಿ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಆಡಳಿತಾಧಿಕಾರಿ ನೇಮಕಕ್ಕೆ ಆದೇಶ ಹೊರಡಿಸಿದೆ.
ಜೂ. 19 ರಂದು ಸರ್ಕಾರದ ಪ್ರಧಾನ ಕಾರ್ಯದರ್ಶಿ ಕಚೇರಿಯಿಂದ ಸಹಕಾರ ಸಂಘಗಳ ಉಪ ನಿಬಂಧಕರಿಗೆ ಕಳಿಸಿರುವ ಆದೇಶ ಪತ್ರದಲ್ಲಿ ನೌಕರರ ಸಂಘದ ಕುರಿತು ಬಂದಿರುವ ಲಿಖಿತ ದೂರಿನ ಅನ್ವಯ ಈ ವಿಚಾರಣೆಗೆ ಆದೇಶ ನೀಡಲಾಗಿದೆ ಎಂದು ತಿಳಿಸಲಾಗಿದೆ.
ಜೂ.02 ರಂದು ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ವಿರುದ್ಧ 5 ಗುರುತರ ಆರೋಪಗಳನ್ನು ಮಾಡಿ ಎನ್ ಪಿ ಎಸ್ ನೌಕರರ ಸಂಘದ ಶಾಂತಾರಾಮ್ ಮತ್ತು ಇತರರು ಸರ್ಕಾರಕ್ಕೆ ದೂರು ಅರ್ಜಿ ಸಲ್ಲಿಸಿದ್ದರು.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘವು ಸರ್ಕಾರದಿಂದ ಪ್ರತಿವರ್ಷ ಕೋಟ್ಯಂತರ ರೂ.ಗಳ ಸಹಾಯಧನ ಪಡೆಯುತ್ತಿದ್ದು ಸಂಘವು ವಿವಿಧ ಕಾಯ್ದೆ ಮತ್ತು ನಿಯಮಗಳನ್ನು ಉಲ್ಲಂಘನೆ ಮಾಡಿ ಭ್ರಷ್ಟಾಚಾರ, ಹಣ ದುರುಪಯೋಗ, ವಂಚನೆ ಹಾಗೂ ಕಾನೂನು ಬಾಹಿರ ಚಟುವಟಿಕೆಗಳು, ಆರ್ಥಿಕ ಅಪರಾಧಗಳನ್ನು ನಡೆಸಲಾಗಿದೆ ಎಂದು ಆರೋಪಿಸಲಾಗಿದೆ. ಈ ಕುರಿತು ಕೆಲ ದಾಖಲೆಗಳನ್ನು ಒದಗಿಸಿ ಶಾಸನಾತ್ಮಕ ಕ್ರಮ ಜರುಗಿಸಲು ಕೋರಲಾಗಿದ್ದರೂ ಯಾವುದೇ ಕ್ರಮ ಜರುಗಿಸಲಾಗಿಲ್ಲ ಎಂದೂ ತಿಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕ ಹಿತದೃಷ್ಟಿಯಿಂದ ಆಡಳಿತಾಧಿಕಾರಿ ನೇಮಿಸಿ ಸರಕಾರದ ಬೊಕ್ಕಸಕ್ಕೆ, ಸಂಘಕ್ಕೆ ಹಾಗೂ ಸಂಘದ ಸದಸ್ಯರುಗಳಿಗೆ ಆರ್ಥಿಕ ನಷ್ಟ ಉಂಟು ಮಾಡಿರುವ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಕೋರಲಾಗಿದೆ.
ಇದೀಗ ದೂರಿನ ಹಿನ್ನೆಲೆಯಲ್ಲಿ, ದೂರು ಅರ್ಜಿಯನ್ನು ಕೂಲಂಕಷವಾಗಿ ಪರಿಶೀಲಿಸಿ ಸಂಘದ ವಿರುದ್ಧ ಇರುವ ಐದು ಪ್ರಮುಖ ಆರೋಪಗಳ ವಿಚಾರಣೆ ನಡೆಸಿ, ಆರೋಪಗಳು ಸಾಬೀತಾದಲ್ಲಿ ಸಂಘದ ವಿರುದ್ಧ ನಿಯಮಾನುಸಾರ ಕ್ರಮ ಕೈಗೊಳ್ಳಲು ವರದಿ ಸಲ್ಲಿಸಲು ಸರ್ಕಾರ ಆದೇಶಿಸಿದೆ.