ಕ್ಷಯ ಔಷಧಿ ಪೂರೈಸಲು ಆಸ್ಪತ್ರೆಗಳಿಗೆ ಆದೇಶ
‘ಕ್ಷಯ ರೋಗ ಔಷಧಿಗಳ ಕೊರತೆ’ ವಾರ್ತಾಭಾರತಿ ವರದಿಗೆ ಸ್ಪಂದನೆ
ಬೆಂಗಳೂರು: ವಾರ್ತಾಭಾರತಿ ಪತ್ರಿಕೆಯ ಮುಖಪುಟದಲ್ಲಿ ಪ್ರಕಟವಾದ ‘ಕ್ಷಯರೋಗ ಔಷಧಿಗಳ ಕೊರತೆ’ ವರದಿಯ ಹಿನ್ನೆಲೆಯಲ್ಲಿ, ಈ ಬಗ್ಗೆ ವಿವರವಾದ ಮಾಹಿತಿಯನ್ನು ನೀಡುವಂತೆ ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶನಾಲಯಗಳು ಎಲ್ಲ ಆಸ್ಪತ್ರೆಗಳಿಗೆ ಆದೇಶವನ್ನು ನೀಡಿದೆ.
ಹಾಲಿ ಕ್ಷಯ ರೋಗಿಗಳ ಚಿಕಿತ್ಸೆಗೆ ಬೇಕಾಗಿರುವ 3 ಎಫ್‌ಡಿಸಿ ಮಾತ್ರೆಗಳ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದ್ದರಿಂದ ರೋಗಿಗಳಿಗೆ ವಿತರಿಸಲು ಅನಾನುಕೂಲವಾಗಿದೆ. ಸದರಿ ತೊಂದರೆ ನಿವಾರಣೆ ಮಾಡಲು ಎಲ್ಲಾ ಜಿಲ್ಲಾ ಆಸ್ಪತ್ರೆಗಳು ಮತ್ತು ತಾಲೂಕು ಆಸ್ಪತ್ರೆಗಳು ತಮ್ಮಲ್ಲಿ ಲಭ್ಯವಿರುವ ಎಬಿಎಆರ್‌ಕೆ ಅನುದಾನದಲ್ಲಿ ಔಷಧಿಗಳನ್ನು ಸ್ಥಳೀಯವಾಗಿ ಖರೀದಿಸಿ ತಮ್ಮ ವ್ಯಾಪ್ತಿಯಲ್ಲಿ ಬರುವ ರೋಗಿಗಳಿಗೆ ಒದಗಿಸಿ ಔಷಧಿ ಕೊರತೆಯನ್ನು ನೀಗಿಸಬೇಕು ಎಂದು ಆಯುಕ್ತರು ಈಗಾಗಲೇ ಸುತ್ತೋಲೆ ಹೊರಡಿಸಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಇದರ ಅನ್ವಯ ಕೆಲವು ಜಿಲ್ಲೆಗಳು ಈಗಾಗಲೇ ಸದರಿ ಔಷಧಿಗಳನ್ನು ಸ್ಥಳೀಯವಾಗಿ ಖರೀದಿಸಿ ರೋಗಿಗಳಿಗೆ ಒದಗಿಸುತ್ತಿವೆ. ಆದರೆ ಕ್ಷಯ ರೋಗದ ಔಷಧಿಗಳು ಮುಕ್ತ ಮಾರುಕಟ್ಟೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಲಭ್ಯತೆ ಇಲ್ಲದಿರುವುದರಿಂದ ಈಗಾಗಲೇ ಖರೀದಿ ಪ್ರಕ್ರಿಯೆಯಲ್ಲಿ ತೊಡಗಿದೆ. ರಾಜ್ಯ ಮಟ್ಟದಲ್ಲಿ ಖರೀದಿ ಮಾಡಿ ಜಿಲ್ಲೆಗಳಿಗೆ ಒದಗಿಸಲು ಟೆಂಡರ್ ಮೂಲಕ ಖರೀದಿಸಬೇಕಾಗುತ್ತದೆ. ಹಾನಿ ಮಾದರಿ ನೀತಿ ಸಂಹಿತೆ ಚಾಲ್ತಿಯಲ್ಲಿರುವುದರಿಂದ ರೋಗಿಗಳ ಆರೋಗ್ಯ ಹಿತದೃಷ್ಟಿಯಿಂದ ಹಾಗೂ ತುರ್ತು ಅವಶ್ಯಕತೆಯನ್ನು ಮನಗಂಡು ನಿಯಮಾನುಸಾರ ಅನುಮತಿ ಪಡೆದು ಔಷಧಿಗಳನ್ನು ರೋಗಿಗಳಿಗೆ ಪೂರೈಕೆ ಮಾಡಲು ಪ್ರಕ್ರಿಯೆಯನ್ನು ಆದ್ಯತೆಯ ಮೇರೆಗೆ ಕೈಗೊಳ್ಳಲಾಗಿದೆ. ಸದ್ಯದಲ್ಲೇ ಔಷಧಿಗಳು ಪೂರೈಕೆಯಾಗಲಿದ್ದು, ಕ್ಷಯರೋಗದ ಚಿಕಿತ್ಸೆ ಪಡೆಯುತ್ತಿರುವ ಎಲ್ಲ ಫಲಾನುಭವಿಗಳಿಗೂ ಕೊರತೆಯಾಗದಂತೆ ವಿತರಿಸಲಾಗುವುದು ಎಂದು ಇಲಾಖೆಯ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.