ಸಂಸತ್ ಭದ್ರತಾ ವೈಫಲ್ಯ: ಕೊನೆಗೂ ಮೌನ ಮುರಿದ ಸಂಸದ ಪ್ರತಾಪ್ ಸಿಂಹ
"ದೇಶಪ್ರೇಮಿಯಾ, ದೇಶದ್ರೋಹಿಯಾ ಎಂಬುದನ್ನು ಜನ ತೀರ್ಮಾನಿಸುತ್ತಾರೆ"
ಮೈಸೂರು: ದೆಹಲಿಯ ಸಂಸತ್ ಅಧಿವೇಶನದ ವೇಳೆ ಹೊಗೆ ಬಾಂಬ್ ಎಸೆದಿದ್ದ ಇಬ್ಬರು ಆರೋಪಿಗಳಿಗೆ ಲೋಕಸಭೆ ಒಳಗೆ ಹೋಗಲು ಪಾಸ್ ನೀಡಿದ್ದ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದ ಪ್ರತಾಪ್ ಸಿಂಹ ಕೊನೆಗೂ ಮೌನ ಮುರಿದು ಇದೇ ಮೊದಲ ಬಾರಿಗೆ ಮೈಸೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ನಗರದ ತಮ್ಮ ನಿವಾಸದ ಬಳಿ ರವಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದೆಹಲಿ ಘಟನೆ ಸಂಬಂಧ ಪಾಸ್ ನೀಡಿರುವ ಕುರಿತ ಪ್ರಶ್ನೆಗೆ ʼನಾನು ದೇಶ ದ್ರೋಹಿಯಾ? ದೇಶ ಪ್ರೇಮಿಯಾ ಅನ್ನೋದನ್ನು ಬೆಟ್ಟದಲ್ಲಿ ಕುಳಿತಿರುವ ಶ್ರೀಚಾಮುಂಡೇಶ್ವರಿ, ಕಾವೇರಿ ಮಾತೆ ತೀರ್ಮಾನ ಮಾಡಲಿದ್ದಾರೆ ಎಂದು ಹೇಳಿದರು.
"ಕರ್ನಾಟಕದಾದ್ಯಂತ ಇರುವ ನನ್ನ ಓದುಗರು ಮತ್ತು ಕಳೆದ ಒಂಬತ್ತು ವರ್ಷದಿಂದ ನನಗೆ ಆಶೀರ್ವಾದ ಮಾಡಿರುವ ಮೈಸೂರು-ಕೊಡಗು ಕ್ಷೇತ್ರದ ಜನ 2024 ರ ಲೋಕಸಭಾ ಚುನಾವಣೆಯಲ್ಲಿ ನಾನು ದೇಶ ಭಕ್ತನೊ ಅಥವಾ ದೇಶದ್ರೋಹಿನಾ ಅಂತ ತೀರ್ಮಾನ ಮಾಡುತ್ತಾರೆ. ಇದು ಬಿಟ್ಟು ಬೇರೆ ಪ್ರಶ್ನೆ ಇದ್ದರೆ ಕೇಳಿ ಇಲ್ಲದಿದ್ದರೆ ನಾನು ಕೊಡಗಿಗೆ ಹೊರಡುತ್ತೇನೆ" ಎಂದು ಹೇಳಿದರು.
ಸಂಸತ್ ದಾಳಿ ಪ್ರಕರಣದ ಆರೋಪಿ ಮೈಸೂರಿನ ಮನೋರಂಜನ್ ಗೆ ಪಾಸ್ ನೀಡಿದ ಮತ್ತು ದೆಹಲಿ ಪೊಲೀಸರು ನಿಮ್ಮ ಹೇಳಿಕೆ ದಾಖಲು ಮಾಡಿದ್ದಾರೆಯೇ ಎಂಬ ಪ್ರಶ್ನೆಗೆ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ ಎಂದು ತಿಳಿದು ಬಂದಿದೆ.