ದಾಖಲೆಯ ನೆಪ ಹೇಳದೆ ಗುತ್ತಿಗೆದಾರರಿಗೆ ಹಣ ಪಾವತಿಸಿ: ಹೈಕೋರ್ಟ್
ಬೆಂಗಳೂರು: ಕಾಮಗಾರಿಗೆ ಸಂಬಂಧಿಸಿದ ದಾಖಲೆಗಳನ್ನು ತನಿಖಾ ಸಂಸ್ಥೆಗಳು ಜಪ್ತಿ ಮಾಡಿವೆ ಎಂದು ಸಿವಿಲ್ ಗುತ್ತಿಗೆದಾರರಿಗೆ ಬಾಕಿ ಇರುವ ಹಣವನ್ನು ಪಾವತಿಸಲು ನಿರಾಕರಿಸಬಾರದು ಎಂದು ಹೈಕೋರ್ಟ್ ಸೂಚಿಸಿದೆ.
ಸಿವಿಲ್ ಗುತ್ತಿಗೆದಾರರಾದ ಮೆಸರ್ಸ್ ಓ.ಎಂ. ಎಸ್‍ಎಲ್‍ವಿ ಕನ್ಸ್ ಸ್ಟ್ರಕ್ಷನ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಪೀಠ, ಈ ಆದೇಶ ನೀಡಿದೆ.
ಬಿಬಿಎಂಪಿಯು ತನ್ನ ಬಳಿ ದಾಖಲೆ ಇಲ್ಲ ಎಂದು ನೆಪ ಹೇಳಲಾಗದು. ಒಂದು ವೇಳೆ ದಾಖಲೆಯ ಪ್ರತಿ ಇಲ್ಲದಿದ್ದರೂ ಸಹ ಅದು ಸಂಬಂಧಿಸಿದ ಲೋಕಾಯುಕ್ತ ನ್ಯಾಯಾಲಯದ ಮುಂದೆ ಅರ್ಜಿ ಸಲ್ಲಿಸಿ, ಪ್ರಮಾಣೀಕೃತ ಪ್ರತಿಯನ್ನು ಪಡೆದುಕೊಳ್ಳಬಹುದಾಗಿದೆ ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ತಿಳಿಸಿದೆ.
ಜತೆಗೆ, ತನಿಖಾ ಸಂಸ್ಥೆ ಜಪ್ತಿ ಮಾಡಿರುವ ದಾಖಲೆಗಳನ್ನು ಪಡೆದುಕೊಳ್ಳುವ ಗೋಜಿಗೆ ಹೋಗದೆ, ಅರ್ಜಿದಾರರು ಸಲ್ಲಿಸಿದ್ದ ಬಿಲ್ ಪಾವತಿಗೆ ಪ್ರಕ್ರಿಯೆ ನಡೆಸದ ಪಾಲಿಕೆ ಕ್ರಮ ಸರಿಯಾದುದಲ್ಲ. ಅರ್ಜಿದಾರರ ವಿರುದ್ಧ ಕ್ರಿಮಿನಲ್ ಪ್ರಕರಣ ಬಾಕಿ ಇದೆ ಅದನ್ನು ಪರಿಗಣಿಸಿ ಪಾಲಿಕೆ ಬಿಲ್ ಪಾವತಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಪೀಠ ತನ್ನ ಆದೇಶದಲ್ಲಿ ತಿಳಿಸಿದೆ.
ಪ್ರಕರಣವೇನು?: ಸಿವಿಲ್ ಗುತ್ತಿಗೆದಾರರಾದ ಅರ್ಜಿದಾರರು ಪಾಲಿಕೆಗೆ 2006ರಲ್ಲಿ 131 ಕಸ ತುಂಬಿಕೊಂಡು ಹೋಗುವ ತಳ್ಳುವ ಗಾಡಿಗಳು, ಎರಡು ಕಾಂಪ್ಯಾಕ್ಟ್ ಮತ್ತು ಘನ ತ್ಯಾಜ್ಯ ವಿಲೇವಾರಿಗೆ 9 ಆಟೋಗಳನ್ನು ಪೂರೈಕೆ ಮಾಡಿದ್ದರು. ಆನಂತರ ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸಲಾಗಿದೆ ಎಂದು ಬಿಲ್ ಪಾವತಿಸುವಂತೆ ಮನವಿ ಸಲ್ಲಿಸಿದ್ದರು. ಆದರೆ ಆಟೋಗಳನ್ನು ಸರಿಯಾಗಿ ಪೂರೈಕೆ ಮಾಡಿಲ್ಲ ಎಂದು ಎಂಜಿನಿಯರ್ ತಗಾದೆ ತೆಗೆದು, ಗುತ್ತಿಗೆಯನ್ನು ರದ್ದುಪಡಿಸುವುದಾಗಿ ಎಚ್ಚರಿಕೆ ನೀಡಿದ್ದರು.
ಆಗ ಅರ್ಜಿದಾರರು ಹೈಕೋರ್ಟ್ ಮೊರೆ ಹೋಗಿದ್ದರು. ಆಗ ನ್ಯಾಯಾಲಯ ಟೆಂಡರ್ ನಲ್ಲಿ ಅಕ್ರಮಗಳು ಕಂಡು ಬಂದ ಹಿನ್ನೆಲೆಯಲ್ಲಿ ಎಸಿಬಿ ತನಿಖೆಗೆ ಆದೇಶ ನೀಡಿದ್ದರು. ತನಿಖೆ ಇನ್ನೂ ಬಾಕಿ ಇರುವಾಗಲೇ ಅರ್ಜಿದಾರರು ಹಣ ಪಾವತಿಸುವಂತೆ ಬಿಬಿಎಂಪಿಗೆ ಮನವಿ ಸಲ್ಲಿಸಿದ್ದರು. ಆಗ ಪಾಲಿಕೆ, ಕಾಮಗಾರಿಯ ಬಿಲ್ ಸೇರಿದಂತೆ ಎಲ್ಲ ದಾಖಲೆಗಳು ತನಿಖಾ ಸಂಸ್ಥೆ ಬಳಿ ಇರುವುದರಿಂದ ಹಣ ಪಾವತಿಸಲಾಗದು ಎಂದು ಹೇಳಿತ್ತು. ಅದನ್ನು ಪ್ರಶ್ನಿಸಿ ಅರ್ಜಿದಾರರು ಮತ್ತೆ ಕೋರ್ಟ್ ಮೆಟ್ಟಿಲೇರಿದ್ದರು.