ಅಶ್ಲೀಲ ವಿಡಿಯೋಗಳ ಪೆನ್‌ಡ್ರೈವ್ ಹಂಚಿಕೆ ಪ್ರಕರಣ | ನಿರೀಕ್ಷಣಾ ಜಾಮೀನು ಕೋರಿ ನಾಲ್ವರು ಆರೋಪಿಗಳು ಹೈಕೋರ್ಟ್ ಮೊರೆ
ಬೆಂಗಳೂರು : ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ಫೋಟೋ, ವಿಡಿಯೋಗಳನ್ನು ಹಂಚಿಕೆ ಮಾಡಿದ ಪ್ರಕರಣದಲ್ಲಿ ಬಂಧನ ಭೀತಿ ಎದುರಿಸುತ್ತಿರುವ ನಾಲ್ವರು ಆರೋಪಿಗಳು ನಿರೀಕ್ಷಣಾ ಜಾಮೀನು ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಪ್ರಕರಣದ ಆರೋಪಿಗಳಾದ ನವೀನ್ ಗೌಡ ಅಲಿಯಾಸ್ ಎನ್.ಆರ್.ನವೀನ್ ಕುಮಾರ್, ಎನ್.ಕಾರ್ತಿಕ್, ಬಿ.ಸಿ. ಚೇನತ್ ಕುಮಾರ್ ಮತ್ತು ಎಚ್.ವಿ.ಪುಟ್ಟರಾಜು ನಿರೀಕ್ಷಣಾ ಜಾಮೀನು ಕೋರಿ ಹೈಕೋರ್ಟ್‌ಗೆ ಪ್ರತ್ಯೇಕ ಕ್ರಿಮಿನಲ್ ಅರ್ಜಿ ಸಲ್ಲಿಸಿದ್ದಾರೆ.
ಈ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ರಾಚಯ್ಯ ಅವರ ರಜಾಕಾಲದ ಪೀಠ, ಪ್ರತಿವಾದಿಯಾಗಿರುವ ಹಾಸನದ ಸಿಇಎನ್ ಠಾಣಾ ಪೊಲೀಸರಿಗೆ ನೋಟಿಸ್ ಜಾರಿಗೊಳಿಸಿ ಆಕ್ಷೇಪಣೆ ಸಲ್ಲಿಸುವಂತೆ ನಿರ್ದೇಶಿಸಿ ವಿಚಾರಣೆ ಮುಂದೂಡಿದೆ.
ಹಾಸನ ಲೋಕಸಭಾ ಕ್ಷೇತ್ರದ ಜೆಡಿಎಸ್ ಹಾಗೂ ಬಿಜೆಪಿ ಚುನಾವಣಾ ಏಜೆಂಟ್ ಆಗಿದ್ದ ಎಂ.ಜಿ.ಪೂರ್ಣಚಂದ್ರ ತೇಜಸ್ವಿ, ಹಾಸನ ಸಿಇಎನ್ ಪೊಲೀಸ್ ಠಾಣೆಗೆ 2024ರ ಎ.23ರಂದು ದೂರು ನೀಡಿದ್ದರು. ಇದರಿಂದ ಬಂಧನ ಭೀತಿ ಎದುರಾದ ಹಿನ್ನೆಲೆಯಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಗಳು ನಿರೀಕ್ಷಣಾ ಜಾಮೀನು ಕೋರಿ ಹಾಸನದ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅದನ್ನು ವಜಾಗೊಳಿಸಿ ನ್ಯಾಯಾಲಯವು ಮೇ.8ರಂದು ಆದೇಶಿಸಿತ್ತು. ಹಾಗಾಗಿ, ಈ ನಾಲ್ವರು ಆರೋಪಿಗಳು ಹೈಕೊರ್ಟ್ ಮೊರೆ ಹೋಗಿದ್ದರು.