ಪೊಲೀಸ್ ಇಲಾಖೆಯ ನೇಮಕಾತಿಯಲ್ಲಿ ಕ್ರೀಡಾಪಟುಗಳಿಗೆ ಶೇ. 2 ರಷ್ಟು ಮೀಸಲಾತಿ : ಸಿಎಂ ಸಿದ್ದರಾಮಯ್ಯ
ಬೆಂಗಳೂರು: ಕ್ರೀಡಾಪಟುಗಳನ್ನು ಪೊಲೀಸ್ ಇಲಾಖೆಯ ಸೇವೆಗಾಗಿ ಪ್ರೋತ್ಸಾಹಿಸುವ ಉದ್ದೇಶದಿಂದ ಸರಕಾರ ಕ್ರೀಡಾಪಟುಗಳಿಗೆ ಇಲಾಖೆಯ ನೇಮಕಾತಿಯಲ್ಲಿ ಶೇ. 2 ರಷ್ಟು ಮೀಸಲಾತಿಯನ್ನುಒದಗಿಸಲು ನಿರ್ಧರಿಸಿದ್ದು, ಭವಿಷ್ಯದಲ್ಲಿ ಈ ಮೀಸಲಾತಿಯನ್ನು ಹೆಚ್ಚಿಸಲು ಚಿಂತನೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.
ರವಿವಾರ ರಾಜ್ಯ ಪೊಲೀಸ್ ಇಲಾಖೆ ಆಯೋಜಿಸಿದ್ದ 12ನೇ ಅಖಿಲ ಭಾರತ ಪೊಲೀಸ್ ಆರ್ಚರಿ ಚಾಂಪಿಯನ್ ಶಿಪ್ ನ ಸಮಾರೋಪ ಸಮಾರಂಭ ಪಾಲ್ಗೊಂಡು ಮಾತನಾಡಿದ ಅವರು, ಕರ್ನಾಟಕ ರಾಜ್ಯ ಪೊಲೀಸ್ ಸೇರಿದಂತೆ ವಿವಿಧ ರಾಜ್ಯಗಳ ಪೊಲೀಸ್ ದಳ ಹಾಗೂ ಕೇಂದ್ರ ಪೊಲೀಸ್ ಸಂಸ್ಥೆಗಳ 24 ತಂಡಗಳು ಭಾಗವಹಿಸಿರುವುದು ಅತ್ಯಂತ ಸಂತೋಷದ ವಿಚಾರ ಎಂದರು.
ರಾಜ್ಯ ಪೊಲೀಸ್ ಇಲಾಖೆಯು ಪ್ರಥಮ ಬಾರಿಗೆ 12ನೇ ಅಖಿಲ ಭಾರತ ಪೊಲೀಸ್ ಆರ್ಚರಿ ಚಾಂಪಿಯನ್ ಶಿಪ್ ನ್ನು ಆಯೋಜಿಸಿದ್ದು ಪ್ರಥಮ ಬಾರಿಗೆ ಕರ್ನಾಟಕ ಪೊಲೀಸ್ ತಂಡವಾಗಿಯೂ ಆರ್ಚರಿಯಲ್ಲಿ ಭಾಗವಹಿಸಿದೆ ಎಂದು ನುಡಿದರು.
ವಿವಿಧ ಶ್ರೇಣಿಯ ಮಹಿಳಾ ಆರ್ಚರ್ಸ್ ಸೇರಿದಂತೆ ಒಟ್ಟು 436 ಆರ್ಚರ್ಗಳು , ರೀಕರ್ವ್ , ಕಾಂಪೌಂಡ್ ಮತ್ತು ಇಂಡಿಯನ್ ರೌಂಡ್ ಎಂಬ 3 ವರ್ಗಗಳ ಸ್ಪರ್ಧೆಯಲ್ಲಿ ಭಾಗವಹಿಸಿ ಒಟ್ಟು 174 ಚಿನ್ನ, ಬೆಳ್ಳಿ ಹಾಗೂ ಕಂಚಿನ ಪದಕಗಳನ್ನು ಗಳಿಸಿದ್ದಾರೆ. ಅಲ್ಲದೆ ಮೊದಲ ಮೂರು ಮಹಿಳಾ ಹಾಗೂ ಪುರುಷ ತಂಡಗಳು ಟ್ರೋಫಿಯನ್ನು ಗೆದ್ದಿದ್ದಾರೆ ಎಂದು ಅವರು ಹೇಳಿದರು.
2022-23ನೆ ಸಾಲಿನಲ್ಲಿ, 80 ಸಿವಿಲ್ ಪೇದೆಗಳು ಹಾಗೂ 20 ಪಿಎಸ್ ಐಗಳನ್ನು ಕ್ರೀಡೆ ಕೋಟಾದಡಿ ನೇಮಕಾತಿ ಮಾಡಿಕೊಳ್ಳಲಾಗಿದೆ ಎಂದ ಅವರು, ಬಿಲ್ವಿಧ್ಯೆ, ನಮ್ಮ ಸಂಸ್ಕೃತಿಯ ಭಾಗವಾಗಿದ್ದು, ಈ ವಿದ್ಯೆಯಲ್ಲಿ ಶ್ರೇಷ್ಠತೆಯನ್ನು ಸಾಧಿಸಿದ್ದ ಏಕಲವ್ಯ, ಅರ್ಜುನ, ಕರ್ಣ, ದ್ರೋಣಾಚಾರ್ಯರ ಕೊಡುಗೆಯನ್ನು ಮರೆಯುವಂತಿಲ್ಲ ಎಂದು ನುಡಿದರು.
ಚ್ಯಾಂಪಿಯನ್ ಶಿಪ್ ನಲ್ಲಿ ಅರ್ಜುನ ಪ್ರಶಸ್ತಿ ಗೆ ಭಾಜನರಾಗಿರುವ ರಾಜಸ್ತಾನ ಪೊಲೀಸ್ ನ ಡಿ.ಎಸ್.ಪಿ ರಜತ್ ಚೌಹಾಣ್, ಐ.ಟಿ. ಬಿ.ಪಿ ಏಷಿಯನ್ ಗೇಮ್ಸ್ ಮೇಡಲಿಸ್ಟ್ ತುಷಾರ್ ಪ್ರಭಾಕರ್ ಶಿಲ್ಕೆ, ಮತ್ತು 12 ಇತರೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದಿರುವ ಪೊಲೀಸ್ ಆರ್ಚರ್ ಗಳು ಭಾಗವಹಿಸಿರುವುದು ಸಂತಸದ ಸಂಗತಿ ಎಂದರು.
ಕಾರ್ಯಕ್ರಮದಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಸಾರಿಗೆ ಸಚಿವ ರಾಮಲಿಂಗ ರೆಡ್ಡಿ, ರಾಜ್ಯ ಪೋಲಿಸ್ ಮಹಾ ನಿರ್ದೇಶಕ ಡಾ.ಅಲೋಕ್ ಮೋಹನ್ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಹಾಜರಿದ್ದರು.