10 ಶಾಸಕರನ್ನು ಶಾಶ್ವತವಾಗಿ ಸದನದಿಂದ ಅಮಾನತು ಮಾಡಿ: ಎಂ.ಲಕ್ಷ್ಮಣ್ ಒತ್ತಾಯ
'ವಿಧಾನಸಭಾಧ್ಯಕ್ಷರ ಪೀಠಕ್ಕೆ ಅಗೌರವ'

ಮೈಸೂರು,ಜು.20: ಸದನದಲ್ಲಿ ಸ್ಪೀಕರ್ ಮುಂದೆ ಗಲಾಟೆ ಮಾಡಿದ 10 ಶಾಸಕರನ್ನು ಶಾಶ್ವತವಾಗಿ ಸದನದಿಂದ ಅಮಾನತು ಮಾಡುವಂತೆ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಒತ್ತಾಯಿಸಿದ್ದಾರೆ.
ನಗರದ ಕಾಂಗ್ರೆಸ್ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಐಎಎಸ್ ಅಧಿಕಾರಿಗಳನ್ನು ಶಿಷ್ಟಾಚಾರ ಪಾಲನೆಗೆ ಕಳುಹಿಸಿದ್ದರಲ್ಲಿ ಯಾವುದೇ ತಪ್ಪಿಲ್ಲ. ಆದರೆ ವಿರೋಧ ಪಕ್ಷಗಳು ಗೃಹಲಕ್ಷ್ಮಿ ಯೋಜನೆಗೆ ಪ್ರಚಾರ ಸಿಗಬಾರದು ಎಂದು ಗಲಾಟೆ ಎಬ್ಬಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹತಾಶರಾಗಿ ಬಟ್ಟೆ ಬಿಚ್ಚಿಕೊಂಡು ಹೋರಾಡುತ್ತಿದ್ದಾರೆ. ಜೆಡಿಎಸ್ ಕೆಳದಿನಗಳಲ್ಲಿ ಮೂರು ಹೋಳಾಗಲಿದೆ. ಜೆಡಿಎಸ್ ನ 9 ಶಾಸಕರುಗಳು ಕಾಂಗ್ರೆಸ್ ಬಾಗಿಲು ತಟ್ಟುತ್ತಿದ್ದಾರೆ. ಯಾವುದೇ ಅಧಿಕಾರದ ಆಸೆ ಇಲ್ಲದೆ ಕಾಂಗ್ರೆಸ್ ಗೆ ಬರಲು ಸಿದ್ಧರಾಗಿದ್ದಾರೆ ಎಂದು ಹೇಳಿದರು.
ಜೆಡಿಎಸ್ ಮುಗಿದ ಅಧ್ಯಾಯ. ಯುಪಿಎ-ಎನ್ ಡಿಎ ಒಕ್ಕೂಟ ಇಬ್ಬರು ಜೆಡಿಎಸ್ ಅನ್ನು ಕರೆಯುತ್ತಿಲ್ಲ ಎಂದು ವ್ಯಂಗ್ಯವಾಡಿದರು.
ಸುದ್ದಿಗೋಷ್ಠಿಯಲ್ಲಿ ನಗರ ಕಾಂಗ್ರೆಸ್ ಅಧ್ಯಕ್ಷ ಆರ್. ಮೂರ್ತಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯ್ ಕುಮಾರ್, ಕಾರ್ಯದರ್ಶಿ ಶಿವಣ್ಣ, ಕಾಂಗ್ರೆಸ್ ಮುಖಂಡ ಬಿ.ಎಂ.ರಾಮು, ಗಿರೀಶ್, ಮಾಧ್ಯಮ ವಕ್ತಾರ ಮಹೇಶ್ ಉಪಸ್ಥಿತರಿದ್ದರು.