ಖಾಸಗಿ ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳ ಮಾನ್ಯತೆ ಪಡೆಯಲು ಅ.25ರೊಳಗೆ ಅರ್ಜಿ ಸಲ್ಲಿಸಲು ಅವಕಾಶ
ಸಾಂದರ್ಭಿಕ ಚಿತ್ರ
ಬೆಂಗಳೂರು, ಅ.6: ಪ್ರಸಕ್ತ ವರ್ಷದ ಖಾಸಗಿ ಅನುದಾನಿತ ಹಾಗೂ ಅನುದಾನರಹಿತ ಶಾಲೆಗಳ ಮಾನ್ಯತೆ ಪಡೆಯುವ ಮತ್ತು ನವೀಕರಣಕ್ಕೆ ಆನ್ಲೈನ್ ಮೂಲಕ 3,260 ಅರ್ಜಿಗಳು ಸಲ್ಲಿಕೆಯಾಗಿದ್ದು, 823 ಅರ್ಜಿಗಳನ್ನು ಮಾತ್ರ ಪುರಸ್ಕರಿಸಿ ಮಾನ್ಯತೆ ನವೀಕರಿಸಲಾಗಿದೆ. ಹಾಗಾಗಿ ಮಾನ್ಯತೆ ಪಡೆಯಲು ಅ.25ರೊಳಗೆ ಪುನಾಃ ಅರ್ಜಿಯನ್ನು ಸಲ್ಲಿಸಲು ಶಿಕ್ಷಣ ಇಲಾಖೆ ಸೂಚಿಸಿದೆ.
ಹಾಗೆಯೇ 2021-22 ಹಾಗೂ 2022-23ನೆ ಸಾಲಿನಲ್ಲಿ ಮಾನ್ಯತೆ ಪಡೆಯಲು ಅರ್ಜಿ ಸಲ್ಲಿಸಿದ್ದು, ಅರ್ಜಿಗಳು ತಿರಸ್ಕೃತವಾಗಿದ್ದರೆ ಪುನಾಃ ಅರ್ಜಿಗಳನ್ನು ಸಲ್ಲಿಸಬೇಕು. ಕೆಲವು ಶಾಲೆಗಳು ಕಟ್ಟಡ ಸುರಕ್ಷತೆ, ಅಗ್ನಿ ಸುರಕ್ಷತೆ ಪ್ರಮಾಣ ಪತ್ರಗಳು ಹಾಗೂ ಭೂ ಪರಿವರ್ತನಾ ಆದೇಶಗಳನ್ನು ಸಲ್ಲಿಸದ ಕಾರಣ ತಿರಸ್ಕೃತಗೊಂಡಿರುವ ಸಾಧ್ಯತೆಗಳಿರುತ್ತದೆ. ಅಂತಹ ಶಾಲೆಗಳಿಂದ ಮುಚ್ಚಳಿಕೆ ಪತ್ರವನ್ನು ಪಡೆದು, ಎಲ್ಲ ದಾಖಲೆಗಳನ್ನು ಆನ್ಲೈನ್ ಮೂಲಕವೇ ಪಡೆಯಬೇಕು ಎಂದು ತಿಳಿಸಿದೆ.
ಒಂದು ವೇಳೆ ಆಡಳಿತ ಮಂಡಳಿಯವರು ಸಲ್ಲಿಸಿದ ಅರ್ಜಿಗಳು ತಿರಸ್ಕೃತವಾದರೆ, ಮತ್ತೊಮ್ಮೆ ಅರ್ಜಿಯನ್ನು ಸಲ್ಲಿಸಲು ಹೊಸದಾಗಿ ಸಂಸ್ಕರಣ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಇದುವರೆಗೂ ಅರ್ಜಿಯನ್ನು ಸಲ್ಲಿಸದೇ ಇರುವ ಆಡಳಿತ ಮಂಡಳಿಗಳು ಸಂಸ್ಕರಣ ಶುಲ್ಕವನ್ನು ಪಾವತಿ ಮಾಡಿ ಎಲ್ಲ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಲು ಅವಕಾಶವನ್ನು ನೀಡಲಾಗಿದೆ ಎಂದು ತಿಳಿಸಿದೆ.
ಉಪನಿರ್ದೇಶಕರ ಕಚೇರಿಯಲ್ಲಿ ಪ್ರತಿ ಅರ್ಜಿ ಸ್ವೀಕರಿಸಿದ ನಿಗಧಿತ ಅವಧಿಗಿಂತ ಹೆಚ್ಚುವರಿ ದಿನಗಳು ಲಾಗಿನ್ನಲ್ಲಿ ಬಾಕಿ ಉಳಿದುಕೊಳ್ಳುವಂತಿಲ್ಲ. ಒಂದು ವೇಳೆ ಮಾನ್ಯತೆ ನವೀಕರಿಸುವಾಗ ಕಾನೂನು ಉಲ್ಲಂಘನೆಯಾದಲ್ಲಿ ಅಥವಾ ಅನಗತ್ಯ ವಿಳಂಬ ಅಥವಾ ಇತರೆ ಆಧಾರದ ಮೇಲೆ ದೂರಗಳು ಬಂದಲ್ಲಿ ಸಂಬಂಧಪಟ್ಟವರ ಮೇಲೆ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.