ಮಹಿಷ ದಸರಾ ಆಚರಿಸದಂತೆ ಅರ್ಜಿ; ಅ. 27 ಕ್ಕೆ ವಿಚಾರಣೆ ಮುಂದೂಡಿದ ಕೋರ್ಟ್
ಮೈಸೂರು: ಮಹಿಷ ದಸರಾ ಆಚರಣೆ ನಿಲ್ಲಿಸುವಂತೆ ಮೈಸೂರು ನ್ಯಾಯಾಲಯಕ್ಕೆ ಆರ್.ಟಿ.ಐ. ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯ ಅಕ್ಟೋಬರ್ 27 ಕ್ಕೆ ಮುಂದೂಡಿದೆ.
ಮೈಸೂರಿನ 8 ನೇ ಜೆ.ಎಂ.ಎಫ್.ಸಿ.ನ್ಯಾಯಾಲಯಕ್ಕೆ ಆರ.ಟಿ.ಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅವರು ಮಹಿಷ ದಸರಾ ನಿಲ್ಲಿಸಬೇಕು ಅಕ್ಟೋಬರ್ 8 ಎಂದು ವಕಾಲತ್ತು ಹಾಕಿದ್ದರು.
ಈ ಸಂಬಂಧ ಮಹಿಷ ದಸರಾ ಆಚರಣಾ ಸಮಿತಿ ಅಧ್ಯಕ್ಷ ಪುರುಷೋತ್ತಮ್ ಅವರಿಗೆ ಅ.11 ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿತ್ತು. ಅದರಂತೆ ಇಂದು ಮಹಿಷ ದಸರಾ ಆಚರಣಾ ಸಮಿತಿ ಅಧ್ಯಕ್ಷ ಪುರುಷೋತ್ತಮ್ ನ್ಯಾಯಾಲಯಕ್ಕೆ ಹಾಜರಾಗಿದ್ದರು. ಅರ್ಜಿ ಕೈಗೆತ್ತಿಕೊಂಡ ನ್ಯಾಯಾಲಯ ಅಕ್ಟೋಬರ್ 27 ಕ್ಕೆ ವಿಚಾರಣೆಯನ್ನು ಮುಂದೂಡಿದೆ.
ನ್ಯಾಯಾಲಯಕ್ಕೆ ಹಾಜರಾಗಿದ್ದ ಮಹಿಷ ದಸರಾ ಆಚರಣಾ ಸಮಿತಿ ಅಧ್ಯಕ್ಷ ಪುರುಷೋತ್ತಮ್ ಮಾತನಾಡಿ, ʼನ್ಯಾಯಾಧೀಶರು ವಕೀಲರನ್ನು ನೇಮಿಸಿದ್ದೀರ ಎಂದು ಕೇಳಿದರು. ವಕೀಲರನ್ನು ನೇಮಿಸಲು ಕಾಲಾವಕಾಶ ಕೋರಿದೆ. ವಕೀಲರ ಸಮೇತ ಬರುವಂತೆ ನ್ಯಾಯಾಧೀಶರು ದಿನಾಂಕ ನಿಗದಿಪಡಿಸಿದರು. ಯಾವುದೇ ವಿಚಾರಣೆ ನಡೆಸಲಿಲ್ಲʼ ಎಂದು ತಿಳಿಸಿದರು.
ಮುಂದಿನ ದಿನಗಳಲ್ಲಿ ಈ ಪ್ರಕರಣ ಹೈಕೋರ್ಟ್‌ಗೆ ಹೋಗಬಹುದು. ಏನಾಗುತ್ತೋ ನೋಡೋಣ. ಪೂರ್ವ ನಿಗದಿಯಂತೆ ಮಹಿಷ ದಸರಾ ಆಚರಿಸುತ್ತೇವೆ. ಪೋಲಿಸ್ ಇಲಾಖೆ ಏಕಮುಖ ನಿರ್ಧಾರ ಕೈಗೊಳ್ಳುವುದು ಸರಿಯಲ್ಲ. ನಾವು ಈಗಾಗಲೇ ಸುಮಾರು 10 ಜಿಲ್ಲೆಗಳಿಂದ ಜನರು ಬರುವಂತೆ ಆಹ್ವಾನ ನೀಡಿದ್ದೇವೆ. ಅವರೆಲ್ಲರು ಬರುತ್ತಾರೆ ನಾವು ಅಂದು ಪುಷ್ಪಾರ್ಚನೆಗೆ ಅವಕಾಶ ಮಾಡಲು ಹೋಗೇ ಹೋಗುತ್ತೇವೆ ಎಂದು ಅವರು ಹೇಳಿದರು.