ವಕೀಲರ ಪೋಷಕರಿಗೂ ವಿಮೆ ಕೋರಿ ಅರ್ಜಿ: ಪಿಐಎಲ್ ಆಗಿ ಪರಿವರ್ತಿಸಿದ ಹೈಕೋರ್ಟ್
ಬೆಂಗಳೂರು, ಜು.24: ವೃತ್ತಿನಿರತ ವಕೀಲರ ಪೋಷಕರಿಗೂ ಕೇಂದ್ರ ಸರಕಾರ ರಚಿಸಲು ಉದ್ದೇಶಿಸಿರುವ ವಿಮಾ ಯೋಜನೆಯ ವ್ಯಾಪ್ತಿಗೆ ಒಳಪಡಿಸುವ ವಿಚಾರ ಕುರಿತಂತೆ ಸಲ್ಲಿಕೆಯಾಗಿದ್ದ ತಕರಾರು ಅರ್ಜಿಯನ್ನು ಸಾರ್ವಜನಿಕ ಹಿತಾಸಕ್ತಿ ಅರ್ಜಿಯಾಗಿ (ಪಿಐಎಲ್)ಹೈಕೋರ್ಟ್ ಪರಿವರ್ತಿಸಿದೆ.
ತುಮಕೂರು ಮೂಲದ ವಕೀಲ ಎಲ್.ರಮೇಶ್ ನಾಯಕ್ ಸಲ್ಲಿಸಿದ್ದ ತಕರಾರು ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಪೀಠ, ಈ ಆದೇಶ ನೀಡಿದೆ.
ಅರ್ಜಿದಾರರು ಎತ್ತಿರುವ ವಿಷಯದಲ್ಲಿ ದೊಡ್ಡ ಸಾಮಾಜಿಕ ಕಳಕಳಿ ಇದೆ. ಇದರಿಂದ ಈ ತಕರಾರು ಅರ್ಜಿಯನ್ನು ಪಿಐಎಲ್ ಆಗಿ ವಿಚಾರಣೆ ನಡೆಸುವುದು ಸೂಕ್ತ ಎಂದು ಅಭಿಪ್ರಾಯ ವ್ಯಕ್ತಪಡಿಸಿದ ನ್ಯಾಯಮೂರ್ತಿಗಳು, ಅರ್ಜಿಯನ್ನು ಸಂಬಂಧಿಸಿದ ವಿಭಾಗೀಯ ಪೀಠದ ಮುಂದೆ ವಿಚಾರಣೆಗೆ ನಿಗದಿಪಡಿಸುವಂತೆ ರಿಜಿಸ್ಟ್ರಾರ್‍ಗೆ ಸೂಚಿಸಿದೆ.
ವಕೀಲರ ಪೋಷಕರನ್ನು ವಿಮಾ ಯೋಜನೆ ವ್ಯಾಪ್ತಿಗೆ ತರಬೇಕಿದೆ. ಈ ಕುರಿತಂತೆ ಕರ್ನಾಟಕ ವಕೀಲರ ಪರಿಷತ್‍ಗೆ ಇ-ಮೇಲ್ ಮೂಲಕ ಮನವಿ ಸಲ್ಲಿಸಲಾಗಿದೆ. ಹೀಗಾಗಿ, ವಕೀಲರ ವಿಮಾ ಯೋಜನೆ ವ್ಯಾಪ್ತಿಗೆ ಪೊಷಕರನ್ನು ತರುವಂತೆ ರಾಜ್ಯ ಸರಕಾರ, ಭಾರತೀಯ ವಕೀಲರ ಪರಿಷತ್ ಮತ್ತು ಕರ್ನಾಟಕ ವಕೀಲರ ಪರಿಷತ್‍ಗೆ ನಿರ್ದೇಶನ ನೀಡಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.